Karnataka Election 2023: ಈ ಬಾರೀ ಫಲಿತಾಂಶ ಸ್ವತಂತ್ರವೋ? ಅತಂತ್ರವೋ? ಯಾರಿಗೆ ಕರುನಾಡ ಅಧಿಕಾರ? ಹೀಗೊಂದು ವಿಶ್ಲೇಷಣೆ
ಬೆಂಗಳೂರು,ಮೇ 12: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಮತದಾನದ ಬಳಿಕ ಪ್ರಕಟವಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಸೂಚನೆಯನ್ನು ನೀಡಿದ್ದು, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಹಲವು ರಣತಂತ್ರಗಳನ್ನ ರೂಪಿಸಿವೆ. ಇತ್ತ ಪ್ರಾದೇಶಿಕ ಪಕ್ಷ ಈ ಬಾರಿಯೂ ಕಿಂಗ್ ಮೇಕರ್ ಆಗುವ ಸಾಧ್ಯತೆಯ ಚರ್ಚೆ ಶುರುವಾಗಿದೆ.
ಈ ಬಾರೀ ಮೂರು ರಾಜಕೀಯ ಪಕ್ಷಗಳ ಸಮೀಕ್ಷೆಗಳು ಉಲ್ಟಾ ಆಗಲಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದ ರಾಜಕೀಯ ನಾಯಕರಿಗೆ ಅತಂತ್ರ ಫಲಿತಾಂಶ ಬರುವ ಅನುಮಾನಗಳು ಶುರುವಾಗಿದೆ. ಇತ್ತ ಬಹುತೇಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಸನಿಹದಲ್ಲಿದ್ದು, ಗೆಲ್ಲುವ ಶಾಸಕರನ್ನ ಹಿಡಿದಿಟ್ಟುಕೊಳ್ಳಲ್ಲೂ ಕಾಂಗ್ರೆಸ್ ಹಲವು ಸಿದ್ದತೆಗಳನ್ನ ನಡೆಸಿದ್ದು, ಕಮಲ ಕಲಿಗಳು ಸಹ ಈ ಬಾರಿ ಶತಾಯುಗತಾಯ ಸರ್ಕಾರ ರಚನೆಗೆ ಮುಂದಾಗಿದೆ. ಇತ್ತ ಜೆಡಿಎಸ್ ನಾಯಕ ಕುಮಾರಸ್ವಾಮಿ ಸಹ ಸಿದ್ದರಾಗಿದ್ದಾರೆ.

ಈ ಎಲ್ಲಾ ಬೆಳವಣೆಗೆಗಳನ್ನ ನೋಡಿ ಗಮನಿಸಿದರೇ ಈ ಬಾರಿಯ ಒಂದು ಪಕ್ಷ ಬಹುಮತವನ್ನ ಗಳಿಸಿ ಸ್ವತಂತ್ರವಾಗಿ ಸರ್ಕಾರ ಮಾಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ, ಬದಲಿಗೆ ಅತಂತ್ರ ಫಲಿತಾಂಶ ಪ್ರಕಟಗೊಳಲ್ಲಿದೆ ಎನ್ನಲಾಗಿದ್ದು, ಈ ಬಾರಿಯೂ ದಳಪತಿಗಳೇ ಕಿಂಗ್ ಮೇಕರ್ ಆಗಲಿದ್ದಾರೆ ಎಂದು ಹೇಳಲಾಗಿದೆ.
ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್ ಈ ಬಾರಿ ಮಿಷನ್ 123 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ, ಸಮೀಕ್ಷೆಗಳೆಲ್ಲಾ ಜೆಡಿಎಸ್ ನಿರೀಕ್ಷೆಯನ್ನು ಉಲ್ಟಾ ಮಾಡಿದ್ದು, 25 ಕ್ಕಿಂತ ಕಡಿಮೆ ಸ್ಥಾನ ಬರಲಿವೆ ಎಂದು ಅಂದಾಜಿಸಲಾಗಿದೆ. ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತೆ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಇದೆ.
ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರದ ಭಾಗವಾಗಿದ್ದ ಜೆಡಿಎಸ್ ಈಗ ಯಾರ ಜೊತೆ ಹೋಗುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ, ಈ ಹಿಂದೆ 2004ರಲ್ಲಿ ಕಾಂಗ್ರೆಸ್, 2006ರಲ್ಲಿ ಬಿಜೆಪಿ, 2018ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಈ ಬಾರಿ ಎಚ್ಚರಿಕೆಯ ಹೆಜ್ಜೆಯಿಡುವ ಸಾಧ್ಯತೆ ಇದೆ. ಏಕೆಂದರೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ದಳಪತಿಗಳ ನಿರ್ಧಾರ ಅತ್ಯಂತ ಪ್ರಮುಖವಾಗಿದ್ದು, ಈ ಬಾರಿ ದಳಪತಿಗಳ ಹೆಜ್ಜೆ ಕಮಲದ ಕಡೆ ಇರುವ ಸಾಧ್ಯತೆ ಹೆಚ್ಚಾಗಿದೆ.

2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು, ನಂತರ ಸಿದ್ದರಾಮಯ್ಯ ಅವರೇ 2019ರಲ್ಲಿ ಮೈತ್ರಿ ಸರ್ಕಾರ ಉರುಳಲು ಕಾರಣ ಎಂದು ಎಚ್‌ಡಿ ಕುಮಾರಸ್ವಾಮಿ ಬಹಿರಂಗವಾಗಿ ಹೇಳುತ್ತಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಯಾವುದೇ ಸ್ವಾತಂತ್ರವೇ ಇದ್ದಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ. ಎರಡು ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಕೈ ಸುಟ್ಟುಕೊಂಡಿರುವ ಜೆಡಿಎಸ್ ಮೂರನೇ ಬಾರಿ ಅಂತಹದೇ ಪ್ರಯತ್ನವನ್ನು ಮಾಡಲು ಸಿದ್ದವಿಲ್ಲ, ಹೀಗಾಗಿ ಬಿಜೆಪಿಯತ್ತ ಮುಖಮಾಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರೇ ಎಲ್ಲಾ ರೀತಿಯ ಭದ್ರತೆ ಇರುತ್ತೆ ಎಂಬುದು ದಳಪತಿಗಳ ಲೆಕ್ಕಾಚಾರವಾಗಿದ್ದು, ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿ ಕೈ ಸುಟ್ಟುಕೊಂಡಿರುವ ಜೆಡಿಎಸ್‌ಗೆ ಬಿಜೆಪಿ ಜೊತೆಗಿನ ಮೈತ್ರಿ ಸರ್ಕಾರದಲ್ಲಿ ಅಂತಹದ್ದೇನು ಕಹಿ ಅನುಭವದ ಯಾವುದೇ ಉದಾಹರಣೆಗಳಿಲ್ಲ, ಹೀಗಾಗಿ ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್ ಮುಂದಾಗಲಿದೆ ಎಂದು ಹೇಳಲಾಗಿದೆ.
ಇತ್ತ ಕಾಂಗ್ರೆಸ್ ಸಹ ಹಲವು ಸಮೀಕ್ಷೆಗಳಲ್ಲಿ ಗೆಲುವಿನ ಸನಿಹದಲ್ಲಿದ್ದು, ತಮ್ಮ ಶಾಸಕರನ್ನ ಹಿಡಿದಿಟ್ಟುಕೊಂಡು, ಪಕ್ಷೇತರ ಅಭ್ಯರ್ಥಿಗಳನ್ನ ಸಂಪರ್ಕಿಸಿದ್ದಾರೆ. ಈ ಎಲ್ಲಾ ಬೆಳವಣೆಗೆಗಳ ನಡುವೆ ಕರುನಾಡ ಅಧಿಕಾರವನ್ನ ಯಾರು ಪಡೆಯುತ್ತಾರೆ ಎಂದು ಕಾದುನೋಡ್ಬೇಕಾಗಿದೆ.












Click it and Unblock the Notifications