'ಅಂಬರೀಶ್ ಹೀರೋ ಆಗಿದ್ದಕ್ಕೆ ಸಚಿವರನ್ನಾಗಿ ಮಾಡಿದ್ದು'
ಬೆಂಗಳೂರು, ಜುಲೈ 23 :ಯಾರು ಉತ್ತಮ ನಟ, ಯಾರು ಉತ್ತಮ ನಟಿ ಎಂಬ ಬಗ್ಗೆ ವಿಧಾನಸಭೆಯಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ಅಂಬರೀಶ್ ಅವರು ಹಿರೋ ಆಗಿದ್ದಕ್ಕೆ ಅವರನ್ನು ಸಚಿವರನ್ನಾಗಿ ಮಾಡಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಲ್ಲಿ ಹೇಳಿದರು. ನಂತರವೂ ಈ ಬಗ್ಗೆ ಚರ್ಚೆ ಮುಂದುವರೆಯಿತು.
ಗುರುವಾರದ ಕಲಾಪದಲ್ಲಿ ಬಿಜೆಪಿ ಸದಸ್ಯೆ ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯ ಅವರು, 'ಅಮ್ಮಾ ನೀನು ಒಳ್ಳೆಯ ಕಲಾವಿದೆ. ನಮ್ಮಲ್ಲೂ ಉಮಾಶ್ರೀ, ಜಯಮಾಲಾ ಮುಂತಾದ ಒಳ್ಳೆಯ ನಟಿಯರಿದ್ದಾರೆ. ಅಂಬರೀಶ್ ಹೀರೋ ಆದ ಕಾರಣ ಅವರನ್ನು ಮಂತ್ರಿ ಮಾಡಿದ್ದೇವೆ ಎಂದು ಹೇಳಿದರು. [ರಾಮಯ್ಯ, ಶಂಕ್ರಪ್ಪ ಸೇರಿ ಅನ್ನದಾನಿಯನ್ನು ಕೊಂದ ಕಥೆ]

ಆಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು 'ತಾರಾ ಅವರು ಉತ್ತಮ ಕಲಾವಿದೆ ಆದ ಕಾರಣ ಅವರನ್ನು ನಾವು ಆಯ್ಕೆ ಮಾಡಿದ್ದೇವೆ' ಎಂದರು. ಆಗ ಕಾಂಗ್ರೆಸ್ ಸದಸ್ಯ ಎಚ್.ಎಂ.ರೇವಣ್ಣ ಅವರು 'ಅವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಿ' ಎಂದರು. ['ಅಂಬರೀಶ್ ಅವರೇ ನಾನು ನಿಮ್ಮ ಫ್ಯಾನ್']
ಮಾತಿಗೆ ನಿಂತ ಸಂದೇಶ್ ನಾಗರಾಜ್ ಅವರು 'ತಾರಾ ಅವರು ಒಪ್ಪುವುದಾದದರೆ ಬಂಡವಾಳ ಹಾಕಲು ನಾನು ರೆಡಿ' ಎಂದರು. ಆಗ ಬಿಜೆಪಿ ಸದಸ್ಯ ಗೋ.ಮಧುಸೂದನ್ ಎದ್ದು ನಿಂತರು. ಮಧುಸೂದನ್ ನೋಡಿ ಎದ್ದುನಿಂತ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು, 'ಮಧುಸೂದನ್ ಅವರು ಘಟೋದ್ಗಜ ಪಾತ್ರ ಮಾಡೋಕೆ ಸಿದ್ಧವಾಗಿದ್ದಾರೆ' ಎಂದು ಛೇಡಿಸಿದರು.
ನಂತರ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ಅಂಬರೀಶ್ ಅವರು ಹೀರೋ ಎಂದೇ ನೀವು ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯಲು ಹೊರಟಿದ್ದೀರಿ' ಎಂದರು. 'ಇದೆಲ್ಲಾ ಭ್ರಮೆ ನಾವು ಯಾರನ್ನೂ ತೆಗೆಯೋಲ್ಲ' ಎಂದು ಸಿದ್ದರಾಮಯ್ಯ ಈಶ್ವರಪ್ಪ ಅವರಿಗೆ ಉತ್ತರ ನೀಡಿದರು.












Click it and Unblock the Notifications