ಸಂಸ್ಕೃತದಿಂದ ಸ್ವರ್ಗ: 30 ದಿನದಲ್ಲಿ ಸಂಸ್ಕೃತ ಕಲಿಯಿರಿ ಪುಸ್ತಕಕ್ಕೆ ಡಿಮ್ಯಾಂಡು!
ಮಾರುಕಟ್ಟೆಯಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ 30 ದಿನದಲ್ಲಿ ಸಂಸ್ಕೃತ ಕಲಿಯಿರಿ ಎನ್ನುವ ಪುಸ್ತಕಕ್ಕೆ ಭಾರೀ ಡಿಮ್ಯಾಂಡು ಕೇಳಿ ಬರುತ್ತಿದೆ. ಜನ ಎಲ್ಲಿ ಸಿಗುತ್ತೆ 30 ದಿನದಲ್ಲಿ ಸಂಸ್ಕೃತ ಕಲಿಯುವ ಪುಸ್ತಕ ಎಂದು ಹುಡುಕಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಸಂಸ್ಕೃತ ಕಲಿತರೆ ನಿಮಗೆ ಸ್ವರ್ಗದ ಬಾಗಿಲು ತೆಗೆಯುತ್ತೆ. ಸಂಸ್ಕೃತ ಅನ್ನೋದು ಸ್ವರ್ಗಕ್ಕೆ ವೀಸಾ ಇದ್ದಂಗೆ ಎಂದು ಹೇಳಿದ್ದು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಸ್ಕೃತ ಪುಸ್ತಕ್ಕಾಗಿ ಡಿಮ್ಯಾಂಡಪ್ಪೊ ಡಿಮ್ಯಾಂಡು!
ಸಂಸ್ಕೃತ ಪುಸ್ತಕಕ್ಕೆ ಹೆಚ್ಚಾಗಿದೆ ಡಿಮ್ಯಾಂಡು!
ಸಂಸ್ಕೃತ ಕಲಿಯುವುದರಿಂದ ಸ್ವರ್ಗ ಪ್ರಾಪ್ತಿ ಆಗುತ್ತದೆ. ಸಂಸ್ಕೃತದಿಂದ ನೀವು ಸ್ವರ್ಗಕ್ಕೆ ಹೋಗಬಹುದು. ನಿಮಗೆ ಸ್ವರ್ಗಕ್ಕೆ ಹೋಗುವ ಆಸೆ ಇದ್ದರೆ, ತಪ್ಪದೇ ಸಂಸ್ಕೃತ ಕಲಿತುಕೊಳ್ಳಿ ಎಂದು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದರು. ಸ್ವಾಮೀಜಿ ಈ ರೀತಿ ಹೇಳುತ್ತಿದ್ದಂತೆಯೇ ಜನ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ಸಂಸ್ಕೃತ ಬುಕ್ ಸಿಗುತ್ತೆ, ಸಂಸ್ಕೃತ ಕಲಿಯೋಕೆ ಏನು ಮಾಡಬೇಕು. ಸಂಸ್ಕೃತವನ್ನು 30 ದಿನದಲ್ಲಿ ಕಲಿಯಬಹುದಾ, 30 ದಿನದಲ್ಲಿ ಸಂಸ್ಕೃತ ಕಲಿಯುವ ಪುಸ್ತಕ ಎಲ್ಲಿ ಸಿಗುತ್ತೆ ಹೇಳಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಸ್ವಾಮೀಜಿ ಅವರ ಒಂದೇ ಒಂದು ಸ್ಟೇಟ್‌ಮೆಂಟ್‌ನಿಂದ ಸಾಮಾಜಿಕ ಜಾಲತಾಣದ ತುಂಬೆಲ್ಲ ಸಂಸ್ಕೃತ ಪುಸ್ತಕದ ಬಗ್ಗೆಯೇ ಚರ್ಚೆ ನಡೆದಿದೆ. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಸಂಸ್ಕೃತ ಭಾಷೆಯು ಪವಿತ್ರ, ಪಾವನ ಹಾಗೂ ಶ್ರೇಷ್ಠ ಭಾಷೆ. ಸಂಸ್ಕೃತದಿಂದಲೇ ಉಳಿದ ಎಲ್ಲಾ ಭಾಷೆಗಳ ಜನನವಾಗಿದೆ. ನಿಮಗೆ ಸ್ವರ್ಗಕ್ಕೆ ಹೋಗುವ ಆಸಕ್ತಿ ಇದ್ದವರು ಸಂಸ್ಕೃತ ಕಲಿಯಿರಿ ಎಂದಿದ್ದಾರೆ.
ಸಂಸ್ಕೃತ ಕಲಿಯೋಕೆ ಕೋರ್ಸ್ ಇದ್ರೆ ಹೇಳ್ರಿ!
ಸಂಸ್ಕೃತ ಕಲಿಯೋಕೆ ಯಾವುದಾದ್ರೂ ಕೋರ್ಸ್ ಇದ್ರೆ ಹೇಳ್ರಿ ಅಂತಲೂ ಜನ ಹುಡುಕುತ್ತಿದ್ದಾರೆ. ಸಂಸ್ಕೃತದಿಂದ ಸ್ವರ್ಗ ಸಿಗಲಿದೆ ಎನ್ನುವ ಸ್ವಾಮೀಜಿಗಳ ಮಾತಿನ ಎಫೆಕ್ಟ್ ಇದು. ಈ ಇಳಿ ಸಂಜೆಯಲ್ಲಿ ಎಲ್ಲಿಂದ ನಾನು ಸಂಸ್ಕೃತ ಕಲಿಯಲಿ. ಯಾವುದಾದರೂ ಕೋರ್ಸ್ ಇದ್ರೆ ಹೇಳ್ರೀ ಅಂತಲೂ ಜನ ಕೇಳುತ್ತಿದ್ದಾರೆ. ಅಲ್ಲದೇ ನನಗೆ ಕನ್ನಡ ಬರುತ್ತೆ. ಕನ್ನಡವಿಲ್ಲದ ಸ್ವರ್ಗ ನನಗೆ ಬೇಡ ಎಂದೂ ಕೆಲವರು ಕನ್ನಡ ಪ್ರೇಮವನ್ನು ಮೆರೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದಲೂ ತರಾವೇರಿ ಜೋಕ್ಸ್ ಹಾಗೂ ಮೀಮ್ಸ್‌ಗಳು ಹರಿದಾಡುತ್ತಿವೆ.
ಸಂಸ್ಕೃತದಲ್ಲೇ ಹೇಳಬೇಕಿತ್ತು
ಇನ್ನು ಸ್ವಾಮೀಜಿ ಸಂಸ್ಕೃತ ಕಲಿಯಿರಿ ಎಂದು ಕನ್ನಡದಲ್ಲಿ ಹೇಳಿದ್ದಾರೆ. ಸಂಸ್ಕೃತ ಕಲಿಯಿರಿ ಎಂದು ಸ್ವಾಮೀಜಿ ಸಂಸ್ಕೃತದಲ್ಲೇ ಹೇಳಬೇಕಿತ್ತು. ಆಗ ನಮಗೆ ಅರ್ಥ ಆಗುತ್ತಿರಲಿಲ್ಲ. ಸ್ವರ್ಗಕ್ಕೆ ಹೋಗಬೇಕು ಎನ್ನುವ ಹೊಸ ಆಸೆಯೂ ಮೂಡುತ್ತಿರಲಿಲ್ಲ. ಈಗ ನೋಡಿ ಸ್ವಾಮೀಜಿ ನಮಗೆ ಅರ್ಥವಾಗುವ ಕನ್ನಡದಲ್ಲಿ ಸಂಸ್ಕೃತ ಕಲಿಯಿರಿ ಅಂದಿದ್ದಾರೆ. ಸಂಸ್ಕೃತ ಕಲಿಯುವಂತೂ ಇಲ್ಲ. ಬಿಡುವಂತೂ ಇಲ್ಲ. ನಮಗೆಲ್ಲ ಸ್ವರ್ಗದ ವೀಸಾ ಡೌಟ್ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications