Hubballi Airport: ಹುಬ್ಬಳ್ಳಿ ಟು ಅಹ್ಮದಾಬಾದ್ ಹಾಗೂ ಚೆನ್ನೈಗೆ ಶೀಘ್ರದಲ್ಲೇ ವಿಶೇಷ ವಿಮಾನ ಸೇವೆ?
ಉತ್ತರ ಕರ್ನಾಟಕದ ಪಾಲಿಗೆ ರಾಜಧಾನಿ ಆಗಿರುವ ಹುಬ್ಬಳ್ಳಿ & ಧಾರವಾಡ ಅಭಿವೃದ್ಧಿಗಾಗಿ ಸಾಕಷ್ಟು ಕ್ರಮಗಳನ್ನ ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ. ಅದರಲ್ಲೂ ಕೇಂದ್ರ ಸಚಿವರಾದ, ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿ & ಧಾರವಾಡ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನ ತರಿಸುತ್ತಿದ್ದಾರೆ. ಈ ಪೈಕಿ ಇದೀಗ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಅಹ್ಮದಾಬಾದ್ ಸೇರಿದಂತೆ ಚೆನ್ನೈಗೆ ವಿಮಾನಯಾನ ಸೌಲಭ್ಯವನ್ನ ಮುಂದುವರಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ನಾಗರಿಕ ವಿಮಾನಯಾನ ಸಚಿವರ ಬಳಿ ಚರ್ಚೆ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ, ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಇಂದು ಸಚಿವ ರಾಮಮೋಹನ ನಾಯ್ದು ಅವ್ರನ್ನ ಭೇಟಿ ಮಾಡಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತುಕತೆ ನಡೆಸಿದರು. ಹುಬ್ಬಳ್ಳಿಯಿಂದ ಅಹಮದಾಬಾದ್ ಮಧ್ಯೆ ವಿಮಾನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸಚಿವರಾದ ಜೋಶಿ ಮನವಿ ಮಾಡಿದರು. ಅದ್ರಲ್ಲೂ ಇದೀಗ ಪ್ರಮುಖವಾಗಿ ಹುಬ್ಬಳ್ಳಿಯಿಂದ ಚೆನ್ನೈಗೆ ವಿಮಾನ ಸೇವೆ ಮುಂದುವರಿಸುವ ಬಗ್ಗೆ ಕೂಡ ಈ ವೇಳೆ ಮಾತನಾಡಿದ್ದಾರೆ.

ಚೆನ್ನೈ ವಿಮಾನ ಸ್ಥಗಿತ ಬೇಡ
ಹುಬ್ಬಳ್ಳಿ ನಗರದಿಂದ ಚೆನ್ನೈ ನಗರಕ್ಕೆ ಇರುವ ವಿಮಾನ ಸಂಪರ್ಕವನ್ನ ಈಗ ಸ್ಥಗಿತ ಮಾಡುವ ಸಾಧ್ಯತೆ ಇದ್ದು, ಈ ವಿಮಾನಯಾನ ಮುಂದುವರೆಸುವಂತೆ ಸಚಿವ ನಾಯ್ಡು ಅವರಲ್ಲಿ ಮನವಿ ಮಾಡಿದ್ದಾರೆ ಕೇಂದ್ರ ಸಚಿವ ಜೋಶಿ ಅವರು. ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಅನೇಕ ಉದ್ಯಮಿಗಳ ಸಂಪರ್ಕವಿದೆ. ಅಹ್ಮದಾಬಾದ್ & ಚೆನ್ನೈ ನಗರಗಳಿಗೆ ವಿಮಾನ ಸಾರಿಗೆ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಿದಲ್ಲಿ ಉದ್ಯಮಿಗಳ ತ್ವರಿತ ಸಂಚಾರ ಮತ್ತು ನಿಕಟ ಸಂಪರ್ಕಕ್ಕೆ ಅನುಕೂಲ ಆಗುತ್ತದೆ ಎಂದು ವಿಮಾನಯಾನ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಹೊಸ ಟರ್ಮಿನಲ್ ನಿರ್ಮಾಣ
ಹಾಗೇ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದ್ದು. ರಾಷ್ಟ್ರೀಯ & ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುತ್ತಿದೆ. ಹೀಗಾಗಿ, ರೈಲ್ವೆ ನಿಲ್ದಾಣದ ಜತೆ ವಿಮಾನ ನಿಲ್ದಾಣವೂ ಅಂತಾರಾಷ್ಟ್ರೀಯ ಮೆರಗಿನಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಇದೇ ವೇಳೆ ಸಚಿವ ನಾಯ್ಡು ಅವರ ಗಮನ ಸೆಳೆದರು ಕೇಂದ್ರ ಸಚಿವರ ಜೋಶಿ ಅವರು.
ಇದರ ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಶಾಲವಾದ ಪ್ರದೇಶದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಆಗುತ್ತಿದೆ. ಪ್ರಯಾಣಿಕರಿಗೆ ಮತ್ತು ವಿಮಾನಗಳಿಗೆ ಅಗತ್ಯ ಮೂಲ ಸೌಲಭ್ಯ ಇಲ್ಲಿದ್ದು ಚೆನ್ನೈ ಸಂಪರ್ಕದ ವಿಮಾನ ಸೇವೆಯನ್ನು ಸ್ಥಗಿತಗೊಳಿಸದೆ, ಮುಂದುವರಿಸಿ ಎಂದು ನಾಗರಿಕ ವಿಮಾನಯಾನ ಸಚಿವರ ಜೊತೆಗೆ ಪ್ರಲ್ಹಾದ್ ಜೋಶಿ ಅವರು ಸಮಾಲೋಚನೆ ನಡೆಸಿದರು.












Click it and Unblock the Notifications