'ಯಡಿಯೂರಪ್ಪ ವಿಷ ಕೊಟ್ಟರೂ ಕುಡಿಯುತ್ತೇನೆ'

ಒಂದೆಡೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದುಹೋದರೂ ತಮಗೆ ಆಹ್ವಾನವಿಲ್ಲದೆ ಬೇಸರಗೊಂಡಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಸರಕಾರದ ವಿರುದ್ಧ ಧರಣಿ ಕುಳಿತಿದ್ದರೂ ತಮ್ಮದೇ ಶಾಸಕರಿಂದ ಬೆಂಬಲ ವ್ಯಕ್ತವಾಗದೆ ಕಳಾಹೀನಗೊಂಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ 64 ವರ್ಷದ ವಿಜಯ ಸಂಕೇಶ್ವರ್ ಅವರು ಪರೋಕ್ಷವಾಗಿ ಧೈರ್ಯ ತುಂಬಿದ್ದಾರೆ.
'ಎಂದೆಂದಿಗೂ ಯಡಿಯೂರಪ್ಪನವರೇ ನನ್ನ ನಾಯಕರು. ಅವರು ಎಲ್ಲಿರುತ್ತಾರೋ ಅಲ್ಲಿ ನಾನಿರುತ್ತೇನೆ. ಏಕೆಂದರೆ ಅವರೊಬ್ಬ ಸಮರ್ಥ ನಾಯಕ' ಎಂದು ಸಂಕೇಶ್ವರ್ ಅವರು ಯಡಿಯೂರಪ್ಪ ಅವರನ್ನು ಕೊಂಡಾಡಿದ್ದಾರೆ. ಯಡಿಯೂರಪ್ಪ ಜತೆಗಿನ ತಮ್ಮ ರಾಜಕೀಯ ಸಂಬಂಧದ ಬಗ್ಗೆ ಮಾತನಾಡಿರುವ ಸಂಕೇಶ್ವರ್, 'ಅವರ ನನ್ನ ನಡುವಿನ ಸಂಬಂಧ ಪ್ರಮಾಣಿಕವಾಗಿದೆ. ಹಾಗಾಗಿ ಅವರು ವಿಷ ಕುಡಿ ಎಂದರೂ ಕುಡಿದುಬಿಡುತ್ತೇನೆ' ಎಂದು ಹೇಳಿದ್ದಾರೆ.
ಯಡಿಯೂರಪ್ಪ ಖಂಡಿತ ಬಿಜೆಪಿ ಸೇರೋಲ್ಲ; ಆದರೆ...:
ಯಡಿಯೂರಪ್ಪನವರು ಖಂಡಿತ ಬಿಜೆಪಿ ಸೇರೋಲ್ಲ; ಆದರೆ ರಾಜಕೀಯದಲ್ಲಿ ಎಂತೆಂಥಹುದೋ ಅದ್ಭುತಗಳು ಜರುಗುತ್ತವೆ. ಒಂದು ವೇಳೆ ಯಡಿಯೂರಪ್ಪನವರು ತಮ್ಮ ಚಿತ್ರ ಬದಲಾಯಿಸಿದಲ್ಲಿ ಅವರು ಎಲ್ಲಿರುತ್ತಾರೋ ನಾನೂ ಅಲ್ಲೇ ಇರುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಕೇಶ್ವರ್ ಹೇಳಿದ್ದಾರೆ.
ಯಡಿಯೂರಪ್ಪನವರು ಮೂರು ಸಲ ನನ್ನನ್ನು ಎಂಪಿ ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿಸಿದ್ದಾರೆ. ಕೇಳದೇ ಇದ್ದರೂ ಬಿಜೆಪಿಯಲ್ಲಿದ್ದಾಗ ಹಲವು ಹುದ್ದೆಗಳನ್ನೂ ನೀಡಿದ್ದಾರೆ. ಆದ್ದರಿಂದ ಅವರಿಗೆ ನನ್ನ ಮೇಲೆ ತುಂಬು ವಿಶ್ವಾಸ ಇದೆ ಎಂದು ಸಂಕೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications