Hubballi: ಸದಾಶಿವ ಆಯೋಗದ ವರದಿ ಅವೈಜ್ಞಾನಿಕ, ಜಾರಿಗೆ ಒಪ್ಪಿಗೆ ಇಲ್ಲ
ಹುಬ್ಬಳ್ಳಿ, ನವೆಂಬರ್ 27: ರಾಜ್ಯದಲ್ಲಿ ಆಯೋಗಗಳ ವರದಿ ಕುರಿತ ವಿಚಾರಗಳು ಹೆಚ್ಚು ಮುನ್ನೆಲೆ ಬರುತ್ತಿವೆ. ಮೊನ್ನೆಯಷ್ಟೇ ಕಾಂತರಾಜು ಆಯೋಗದ ವರದಿ ಬಗ್ಗೆ ಚರ್ಚೆ ಆಗುತ್ತಿದ್ದಂತೆ ಇದೀಗ ಸದಾಶಿವ ಆಯೋಗದ ವರಿಯು ಚರ್ಚೆಗೆ ಬರುತ್ತಿದೆ.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರ ಬಗ್ಗೆ ಭೋವಿ,ವಡ್ಡರ, ಕೊರಚ, ಕೊರಮ, ಭಜಂತ್ರಿ ಲಂಬಾಣಿಯವರು 2012 ರಿಂದ ಹೋರಾಟ ನಡೆಸಿದ್ದಾರೆ. ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಸಿ ಇಲ್ಲಿನ ಬಂಜಾರ ಭವನದಲ್ಲಿ ಸೋಮವಾರ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, 'ಆಂಧ್ರಪ್ರದೇಶ ಸರ್ಕಾರವು ಒಳಮೀಸಲಾತಿ ಕಲ್ಪಿಸಲು ಯತ್ನಿಸಿ ಎಡವಿದೆ. ಹೀಗಿದ್ದರೂ ರಾಜ್ಯದ ಕೆಲ ಸಚಿವರು ವರದಿ ಜಾರಿಗಾಗಿ ಒತ್ತಾಯಿಸುತ್ತಿರುವುದು ಖಂಡನೀಯ. ಸಚಿವರ ಒತ್ತಾಯವನ್ನು ಜನರು ಒಪ್ಪಲ್ಲ ಎಂದರು.
ಸಿಎಂ ಬೇಟಿಯಾಗಿ ಮನವಿ ಸಲ್ಲಿಕೆ
ವರದಿಯನ್ನು ವಿರೋಧಿಸುವ ಹೋರಾಟಕ್ಕೆ ರಾಜ್ಯದ ಲಂಬಾಣಿ, ಭೋವಿ, ಕೊರಚ, ಕೊರಮ, ಭಜಂತ್ರಿ ಸೇರಿ ಇತರೆ ಸಮುದಾಯದವರು ಕೈ ಜೋಡಿಸಬೇಕು. ನವೆಂಬರ್ 30ರಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ನಮ್ಮ ಬೇಡಿಕೆಯನ್ನು ಮುಂದಿಡೋಣ ಎಂದರು.

ಒಕ್ಕೂಟದ ಕಾರ್ಯಾಧ್ಯಕ್ಷ ಎನ್. ಅನಂತನಾಯ್ಕ, ಮುಖಂಡರಾದ ಆದರ್ಶ ಯಲ್ಲಪ್ಪ ಪಾಂಡುರಂಗ ಪಮ್ಮಾರ್, ಶಿವಾನಂದ ಭಜಂತ್ರಿ, ಬಲರಾಮನಾಯ್ಕ, ಡಾ ರಾಜನಾಯ್ಕ, ರವಿ ಪೂಜಾರ್ ಕೃಷ್ಣಾಜಿ ಚವಾನ, ವೆಂಕಟೇಶ್ ಮೇಸ್ತ್ರಿ , ದಾನಪ್ಪ ಕಬ್ಬೆರ,ಶಶಿ ಬೀಜವಾಡ, ಮಂಜುನಾಥ ಭೋವಿ, ಮಂಗಲಪ್ಪ ಲಮಾಣಿ, ಹರಿಲಾಲ ಪವಾರ, ಯಮನುರ ಗುಡಿಹಾಳ, ಸುಭಾಸ ಮಲ್ನಾಡ್ ಇದ್ದರು.
ಡಾ.ಕಾಂತರಾಜು ವರದಿ ಪರ-ವಿರೋಧ
ಇತ್ತೀಚೆಗೆ ರಾಜ್ಯ ಸರ್ಕಾರದಲ್ಲಿ ಡಾ.ಕಾಂತರಾಜು ಆಯೋಗ ವರದಿ ಜಾರಿ ಬಗ್ಗೆ ಚರ್ಚೆಗಳು ಮುಂದುವರಿದಿವೆ. ಸದ್ಯ ಬೆಳಗಾವಿಯ ಅಧಿವೇಶನದಲ್ಲೂ ಈ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಕಾಂತರಾಜು ಆಯೋಗದ ವರದಿ ಪರ ವಿರೋಧ ಸರ್ಕಾರದಲ್ಲಿಯೇ ಕೇಳಿ ಬಂದಿವೆ. ಈ ವಿಚಾರವಾಗಿ ಬಿಜೆಪಿ ಸರ್ಕಾರವನ್ನು ತೀಕ್ಷಣವಾಗಿ ಟೀಕಿಸಿದೆ.












Click it and Unblock the Notifications