Rajaratha Bus: ಉತ್ತರ ಕರ್ನಾಟಕದಿಂದ ಹೈದರಾಬಾದ್‌ಗೆ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ; ಮಾರ್ಗ, ವೇಳಾಪಟ್ಟಿ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದಿಂದ ಅದರಲ್ಲೂ ಹುಬ್ಬಳ್ಳಿ-ಧಾರವಾಡ ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಂದ ನೆರೆಯ ರಾಜ್ಯ ಆಂಧ್ರಪ್ರದೇಶದ ಪ್ರಮುಖ ನಗರ ಹೈದರಾಬಾದ್‌ಗೆ ತೆರಳುವವರಿಗೆ ಶುಭ ಸುದ್ದಿ ದೊರೆತಿದೆ. ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವತಿಯಿಂದ ಹುಬ್ಬಳ್ಳಿ-ಹೈದರಾಬದ್ ನಗರಗಳ ಮಧ್ಯೆ 'ರಾಜರಥ ನೂತನ ಎಸಿ ಸ್ಲೀಪರ್ ಸಾರಿಗೆ' ಸೇವೆ ಆರಂಭವಾಗಿದೆ.
ಏಪ್ರಿಲ್‌ನಿಂದ ಹುಬ್ಬಳ್ಳಿ -ಹೈದರಾಬಾದ್ ನಡುವೆ 'ರಾಜರಥ ನೂತನ ಎಸಿ ಸ್ಲಿಪರ್ ಸಾರಿಗೆ' ಸೇವೆ ಆರಂಭವಾಗಿದೆ. ಈ ಹಿಂದೆಯು ಒಂದಷ್ಟು ಬಸ್‌ಗಳಿದ್ದು, ಅದೆಲ್ಲಕ್ಕಿಂತ ಸದರಿ 'ರಾಜರಥ ನೂತನ ಎಸಿ ಸ್ಲಿಪರ್ ಸಾರಿಗೆ' ಭಿನ್ನವಾಗಿದೆ. ಅತ್ಯುತ್ತಮ ಮತ್ತು ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ. ಇದರ ಟಿಕೆಟ್ ದರ, ಸಂಚಾರ ಸಮಯ, ನಿಲುಗಡೆ ನಿಲ್ದಾಣ ಸೇರಿ, ಟಿಕೆಟ್ ಬುಕಿಂಗ್ ಮಾಹಿತಿ ಇಲ್ಲಿದೆ.

NWKRTC 'ರಾಜರಥ ನೂತನ ಎಸಿ ಸ್ಲಿಪರ್ ಸಾರಿಗೆ' ಬಸ್ ನಿತ್ಯ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 7.34ಕ್ಕೆ ಬಿಡುತ್ತದೆ. ಅಲ್ಲಿಂದ ಗದಗ, ಕೊಪ್ಪಳ, ಗಂಗಾವತಿ ಮತ್ತು ರಾಯಚೂರು ಮಾರ್ಗವಾಗಿ ಹೈದರಾಬಾದ್ ಅನ್ನು ಮಾರನೇ ದಿನ ಬೆಳಗ್ಗೆ 7 ಗಂಟೆಗೆ ತಲುಪುತ್ತದೆ. ಒಬ್ಬರಿಗೆ ತಲಾ 1602 ರೂಪಾಯಿ ಇದೆ. ಹೆಚ್ಚಿನ ಮಾಹಿತಿಗೆ ಹಾಗೂ ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ http://ksrtc.in ಗೆ ಭೇಟಿ ನೀಡಬೇಕು. ಇಲ್ಲವೇ 77609 91682, 77609 91674 ಗೆ ಸಂಪರ್ಕಿಸಬಹುದಾಗಿದೆ.
515 ಕಿಮೀ ದೂರ, ವಿವಿಧ ಭಾಗದ ಜನರಿಗೆ ಅನುಕೂಲ
ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಿವಿಧ ಕಾರ್ಯ ನಿಮಿತ್ತ, ಐಟಿ ಕಂಪನಿ ನೌಕರರು ಹಾಗೂ ಸೌರ್ವಜನಿಕರು ನಿತ್ಯ ಓಡಾಡುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಿಂದ ಹೈದರಾಬಾದ್ ನಗರಕ್ಕೆ ನಾನಾ ಕೆಲಸ ಕಾರ್ಯಗಳಿಗೆ ತೆರಳುತ್ತಿರುತ್ತಾರೆ.
ಈ ಹಿಂದೆಯು ಕೆಲವು ಬಸ್‌ಗಳು ಇವೆ. ಹುಬ್ಬಳ್ಳಿ ಮತ್ತು ಹೈದರಾಬಾದ್ ಮಧ್ಯೆ 515 ಕಿಲೋ ಮೀಟರ್ ದೂರವಿದೆ. ಇದನ್ನು ಇನ್ನಿತರ ಬಸ್‌ಗಳು ಹೆಚ್ಚಿನ ಸಮಯದಲ್ಲಿ ಕ್ರಮಿಸುತ್ತವೆ. ಆದರೆ 'ರಾಜರಥ ನೂತನ ಎಸಿ ಸ್ಲಿಪರ್ ಸಾರಿಗೆ' ಬಸ್ ಕೇವಲ 11 ಗಂಟೆ 24ನಿಮಿಷಗಳಲ್ಲಿ ಕ್ರಮಿಸಲಿದೆ. ಇದರಿಂದ ಹುಬ್ಬಳ್ಳಿ-ಧಾರವಾಡದ ಅವಳಿನಗರ ಮಾತ್ರವಲ್ಲದೇ ಗದಗ, ಕೊಪ್ಪಳ, ರಾಯಚೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಜನರಿಗೂ ಅನುಕೂಲ ಕಲ್ಪಿಸಲಿದೆ ಎಂದು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಮಗದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications