HESCOM: ಬೆಳಕು ಕೊಡುವ 'ಹೆಸ್ಕಾಂ' ನಲ್ಲಿಯೇ ಕೋಟಿ ಕೋಟಿ ಅಕ್ರಮದ 'ಕತ್ತಲು', ತನಿಖೆ ಚುರುಕು
ಹುಬ್ಬಳ್ಳಿ, ಡಿಸೆಂಬರ್ 22: ಉತ್ತರ ಕರ್ನಾಟಕದಲ್ಲಿ ಒಟ್ಟು ಸುಮಾರು ಜಿಲ್ಲೆಗಳು ಬೆಳಕು ಕೊಡುವ ಹೆಸ್ಕಾಂ ನಲ್ಲಿಯೇ ಅಕ್ರಮದ ಕತ್ತಲು ಕವಿದಿದೆ. ಈ ಇಲಾಖೆಯಲ್ಲಿಯೇ ಬೇಲಿಯೇ ಎದ್ದು ಹೊಲ ಮೆಯ್ದ ಪ್ರಕರಣ ಬೆಳಕಿಗೆ ಬಂದಿದೆ. ಕೋಟ್ಯಂತರ ರೂಪಾಯಿ ಇಲ್ಲಿ ಅಕ್ರಮ ನಡೆದಿದೆ. ಈ ಕುರಿತು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವುದಾಗಿ ಸ್ವತಃ ಹುಬ್ಬಳ್ಳಿ ಧಾರವಾಡ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಸುಳ್ಳು ದಾಖಲೆ ಸೃಷ್ಟಿಸಿ ಕರೆಂಟ್ ನೀಡುವ ಇಲಾಖೆಗೆ ಶಾಕ್ ಕೊಡಲಾಗಿದೆ. ಬರೊಬ್ಬರಿ 51 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ( ಹೆಸ್ಕಾಂ ) ಲೆಕ್ಕಾಧಿಕಾರಿ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ಅಧಿಕಾರಿಗಳನ್ನು ಅಮಾನತು ಮಾಡಿ ಸಮಿತಿ ಮಾಡಿ ತನಿಖೆ ಮಾಡಲಾಗುತಿದೆ. ಯಾರು ಯಾರು ಈ ಹಗರಣದಲ್ಲಿ ಶಾಮೀಲು ಆಗಿದ್ದಾರೆ. ಇದೊಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಇತಿಹಾಸದಲ್ಲಿಯೇ ದೊಡ್ಡ ಪ್ರಕರಣ ಆಗಿದೆ. ಎಲ್ಲ ಆಯಾಮಗಳ ಮೇಲೆ ತನಿಖೆ ಮಾಡಲಾಗುತ್ತಿದೆ.
ಎಲ್ಲ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು
ಯಾವ ಉಪಕರಣ ಕಳ್ಳತನವಾಗಿದೆ. ಎಷ್ಟು ಸಾಮಗ್ರಿಗಳು ದುರುಪಯೋಗ ಆಗಿವೆ. ನಾವು ಉಗ್ರಾಣಗಳಲ್ಲಿ ಇರಿಸಿದ ಸಾಮಾಗ್ರಿಗಳ ಬಗ್ಗೆ ಸಹ ಲೆಕ್ಕ ಹಾಕಲಾಗುತ್ತಿದೆ. ತನಿಖೆ ನಂತರ ಯಾರು ಇದರಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಷ್ಟೆಷ್ಟು ಹಣದ ಸಾಮಾಗ್ರಿಗಳು ಕಾಣೆಯಾಗಿವೆ ಎಂಬ ಬಗ್ಗೆ ಸಹ ಮಾಹಿತಿ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಲೆಕ್ಕಾಧಿಕಾರಿ ಬೆಂಜಮಿನ್ ಮಸ್ಕನರ್ಸ್, ಸಹಾಯಕ ಲೆಕ್ಕಾಧಿಕಾರಿ ಯು.ಎಸ್.ಉಳ್ಳಾಗಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ವಿಶ್ವನಾಥ ಶಿರಹಟ್ಟಿಮಠ, ವಸಂತಕುಮಾರ ರಾಠೋಡ, ಅಂಜಿನಪ್ಪ ಬಿ. ಅಮಾನತಾದ ಅಧಿಕಾರಿಗಳು.

ಈ ಪ್ರಕರಣದ ಅವ್ಯವಹಾರದ ಕುರಿತು ತನಿಖೆ ನಡೆಸಲು ಐವರು ಅಧಿಕಾರಿಗಳ ತಂಡ ರಚಿಸಲಾಗಿತ್ತು. ತಂಡು ಮೂರು ವರ್ಷ ತನಿಖೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಿದ್ದು, ಅದರನ್ವಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಐವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಬಸವರಾಜ ಮಳಿಮಠ ಅವರು ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ 51,69,49,054 ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ಕಂಪನಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗೌಪ್ಯ ತನಿಖೆಗೆ ಸೂಚನೆ
ತನಿಖೆ ಆಧಾರದಲ್ಲಿ ಐವರನ್ನು ಅಮಾನತು ಮಾಡಿದ ನಂತರ ಪ್ರಭಾವ ಬೀರಬಾರದು ಎಂದು ಇಡೀ ಪ್ರಕರಣವನ್ನ ಗೌಪ್ಯವಾಗಿ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ರೋಷನ್ ವಿವರಿಸಿದರು.
ಇನ್ನೂ ಅಮಾನತುಗೊಂಡಿರುವ ಆರೋಪಿಗಳು ತಮ್ಮ ಅವಧಿಯಲ್ಲಿ ಹುಬ್ಬಳ್ಳಿ ನಗರ ವಿಭಾಗದ ಉಗ್ರಾಣದಿಂದ ಗ್ರಾಮೀಣ ವಿಭಾಗದ ಉಗ್ರಾಣಕ್ಕೆ ಭೌತಿಕವಾಗಿ ಸಾಮಗ್ರಿಗಳನ್ನು ವರ್ಗಾಯಿಸಿಲ್ಲ. ಬದಲಾಗಿ ಸಾಮಗ್ರಿಗಳನ್ನು ಮತ್ತು ಅದರ ಮೊತ್ತದಷ್ಟು ಸರಕು ಪಟ್ಟಿ, ಸುಳ್ಳು ದಾಖಲೆ ಸೃಷ್ಟಿಸಿ ಅದರ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂದು ತಿಳಿಸಲಾಗಿದೆ.
ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಚ್ಚರಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಿಗೆ ಗೇಟ್ ಪಾಸ್ ಕೊಡಲಾಗಿದೆ. ಇನ್ನು ಯಾರು ಯಾರು ಶಾಮೀಲು ಆಗಿದ್ದಾರೆ ಅವರ ಬಗ್ಗೆ ಸಹ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೆಸ್ಕಾಂ ಇಲಾಖೆಯಲ್ಲಿಯೇ ಇಂತಹದೊಂದು ಬಹುದೊಡ್ಡ ಹಗರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ.












Click it and Unblock the Notifications