ಟ್ರಾಫಿಕ್ಕೋ ಟ್ರಾಫಿಕ್, ಹುಬ್ಬಳ್ಳಿ ಆಯ್ತಾ ಬೆಂಗಳೂರು?
ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಎನ್ನುತ್ತಿದ್ದ ಹುಬ್ಬಳ್ಳಿ ಮಂದಿ ಇದೀಗ ತಾವೂ ಟ್ರಾಫಿಕ್ ನಲ್ಲಿ ಸಿಲುಕಿ ಟ್ರಾಫಿಕ್ ವಿಷಯದಲ್ಲಿ ಹುಬ್ಬಳ್ಳಿಯೂ ಬೆಂಗಳೂರಿನಂತೆ ಆಯ್ತಲ್ಲಪ್ಪಾ ಎಂದು ಪೇಚಾಡುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರಮೋದಿ ಕನಸಿನ ಕೂಸಾದ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ, ಉತ್ತರ ಕರ್ನಾಟಕ ರಾಜಧಾನಿ, ವಾಣಿಜ್ಯ ನಗರಿ, ಛೋಟಾ ಬಾಂಬೆ ಎಂದೆನಿಸಿಕೊಂಡ ಹುಬ್ಬಳ್ಳಿಯ ಜನತೆ ಕಳೆದ ಹಲವಾರು ತಿಂಗಳಿನಿಂದ ಎಲ್ಲಿ ನೋಡಿದಲ್ಲಿ ಟ್ರಾಫಿಕ್ ಜಾಮ್ ಎಂದು ಗೊಣಗಲಾರಂಭಿಸಿದ್ದಾರೆ.
ನಗರದ ಸ್ಟೇಶನ್ ರಸ್ತೆ, ಧಾರವಾಡ ರಸ್ತೆ, ಗೋಕುಲ ರಸ್ತೆ, ನವಲಗುಂದ ರೋಡ್, ಕಾರವಾರ ರಸ್ತೆಯಲ್ಲಿ ಬೆಳಗಿನಿಂದ ಸಂಜೆಯವರೆಗೂ ಟ್ರಾಫಿಕ್ ಜಾಮ್ ಇದ್ದೇ ಇರುತ್ತದೆ. ಜೊತೆಗೆ ಕಲುಷಿತ ಗಾಳಿಯ ಸ್ನಾನ ಸಾರ್ವಜನಿಕರಿಗೆ ಧಾರಾಳವಾಗಿ ಸಿಗುತ್ತಿದೆ.[ಸಮಸ್ಯೆಯಾಗಿ ಕಾಡುತ್ತಿರುವ ಮಂಗಳೂರು ಟ್ರಾಫಿಕ್ ಸಿಗ್ನಲ್]

ಮುಖ್ಯ ರಸ್ತೆಗಳಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಎಂದು ನಗರದ ಚಿಕ್ಕ ಬಡಾವಣೆಗಳ ಸಣ್ಣ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚಾರ ಮಾಡುವುದರಿಂದ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಹುಬ್ಬಳ್ಳಿಯ ಕಿತ್ತೂರ ಚೆನ್ನಮ್ಮ ಸರ್ಕಲ್ ಏಷ್ಯಾದಲ್ಲಿಯೇ ಎರಡನೇ ದೊಡ್ಡ ವೃತ್ತ ಎಂದೆನಿಸಿಕೊಂಡಿದ್ದು, ಇಲ್ಲಿ ಒಂಬತ್ತು ರಸ್ತೆಗಳು ಸೇರುತ್ತವೆ. ನಗರದಿಂದ ಎಲ್ಲಿಗೆ ಹೋಗಬೇಕಾದರೂ ವಾಹನಗಳು ಈ ವೃತ್ತದಿಂದಲೇ ಹಾಯ್ದು ಹೋಗಬೇಕು. ಹೀಗಾಗಿ ಇಲ್ಲಿ ವಾಹನ ದಟ್ಟಣೆ ಜಾಸ್ತಿಯೇ ಇರುತ್ತದೆ.
ಟ್ರಾಫಿಕ್ ಸಮಸ್ಯೆಯಿಂದ ಧಾರವಾಡಗೆ ಹೋಗುವವರು ನಿತ್ಯ ಗೊಣಗುವುದು ತಪ್ಪುತ್ತಿಲ್ಲ. ಹಲವಾರು ಸರ್ಕಾರಿ ಕಚೇರಿ, ಕಾಲೇಜುಗಳು ಈ ರಸ್ತೆಯಲ್ಲಿಯೇ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಮತ್ತು ವಾಹನಗಳ ಓಡಾಟ ಅತೀ ಹೆಚ್ಚಾಗಿಯೇ ಇದೆ. ಇದರ ಮಧ್ಯೆ ಈ ರಸ್ತೆಯ ಅಗಲೀಕರಣ ಕಾರ್ಯವೂ ನಡೆಯುತ್ತಿದೆ.[ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಹೊಸ ಆಪ್]
ಈ ಸಮಸ್ಯೆಗೆ ಕಾರವಾರ ರಸ್ತೆಯೂ ಹೊರತಲ್ಲ. ನಗರದ ಪ್ರತಿಷ್ಠಿತ ಸಿದ್ಧಾರೂಢಮಠಕ್ಕೆ ಹಲವಾರು ರಾಜ್ಯಗಳಿಂದ ನಿತ್ಯ ಭಕ್ತರು ಆಗಮಿಸುತ್ತಿರುತ್ತಾರೆ. ಅವರಂತೂ "ಯಾಕಾದ್ರೂ ಹುಬ್ಬಳ್ಳಿಗೆ ಬಂದೆನಪ್ಪಾ, ಕಾಪಾಡಪ್ಪಾ ಸಿದ್ಧಾರೂಢಾ" ಎಂದು ಪರಿತಪಿಸಲಾರಂಭಿಸುವ ಪರಿಸ್ಥಿತಿ ಇಲ್ಲಿನ ಟ್ರಾಫಿಕ್ ಜಾಮ್ ಗೆ ಸಾಕ್ಷಿಯಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಗೋಕುಲ ರಸ್ತೆಯ ಗೋಳಂತೂ ಕೇಳುವವರೇ ಇಲ್ಲವಾಗಿದೆ. ಈ ರಸ್ತೆಯಲ್ಲಿ ಹೊಸ ಬಸ್ ನಿಲ್ದಾಣವಿದೆ. ಪ್ರತಿಷ್ಠಿತ ಆಸ್ಪತ್ರೆಗಳಿವೆ. ಜೊತೆಗೆ ಹಲವಾರು ಶಾಪಿಂಗ್ ಮಾಲ್ ಗಳಿವೆ. ಹೀಗಾಗಿ ಇಲ್ಲಿ ವಾಹನಗಳ ಓಡಾಟ ಜಾಸ್ತಿಯೇ ಇದೆ. ಈ ರಸ್ತೆಯನ್ನು ಕಾಂಕ್ರೀಟ್ ಮಾಡುತ್ತಿರುವುದರಿಂದ ದ್ವಿಪಥದ ರಸ್ತೆ ಏಕಪಥವಾಗಿದೆ. ರಸ್ತೆ ಅಕ್ಕಪಕ್ಕದಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಬರುವ ಅಂಬ್ಯುಲೆನ್ಸ್ ಗಳು ಎಷ್ಟೇ ಸೈರನ್ ಹಾಕಿದರೂ ರೋಗಿಗಳನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ದುಸ್ತರವಾಗಿದೆ.

ಪೊಲೀಸರು ಮಾಡುತ್ತಿರುವುದೇನು ?
ನಗರದಲ್ಲಿ ಇಷ್ಟೆಲ್ಲಾ ಟ್ರಾಫಿಕ್ ಸಮಸ್ಯೆಯಿದ್ದರೂ ಪೊಲೀಸ್ ಇಲಾಖೆ ಮಾತ್ರ, 'ನಾವು ತಾಂತ್ರಿಕವಾಗಿ ವಿಶೇಷ ಸಲಕರಣೆಗಳನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಳವಡಿಸಿಕೊಂಡಿದ್ದೇವೆ. ಎಲ್ಲೆಡೆ ಕ್ಯಾಮರಾ ಅಳವಡಿಸಿದ್ದೇವೆ. ಕಂಟ್ರೋಲ್ ರೂಮ್ ನಿಂದ ಎಲ್ಲವನ್ನೂ ನಿಯಂತ್ರಿಸುತ್ತೇವೆ ಎಂದು ಹೇಳುತ್ತಿದೆ. ಹಾಗಾದಲ್ಲಿ ನಿತ್ಯ ಟ್ರಾಫಿಕ್ ಜಾಮ್ ಏಕೆ ಎಂಬುದೇ ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.[ಅಡ್ಡಾದಿಡ್ಡಿ ವಾಹನ ಚಲಾವಣೆಯಲ್ಲಿ ಬೆಂಗಳೂರು ನಂ.1]
ಇಲ್ಲಿನ ಟ್ರಾಫಿಕ್ ಪೊಲೀಸರು ಕೇವಲ ಹೆಲ್ಮೆಟ್ ಹಾಕದ ಬೈಕ್ ಸವಾರರನ್ನು, ವೇಗ ಮಿತಿ ಮೀರಿದ ವಾಹನಗಳನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವುದೇ ದೊಡ್ಡ ಕೆಲಸವೆಂದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರು ತಮ್ಮೂರಲ್ಲಿನ ಈ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಿಂಚಿತ್ತೂ ಗಮನ ಹರಿಸದೇ ಇರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.











Click it and Unblock the Notifications