ನಾನು ಡಿಸಿಪಿ ಮಾತಾಡ್ತಿರೋದು...! ಸೈಬರ್ ವಂಚನೆಯಿಂದ ಪಾರಾಗುವ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸರ ಸಲಹೆ
ತಂತ್ರಜ್ಞಾನ ಮುಂದುವರೆದಂತೆ ವಂಚನೆಯ ವಿಧಾನಗಳು ಕೂಡ ಬದಲಾಗುತ್ತವೆ. ಆನ್‌ಲೈನ್ ಅಥವಾ ಸೈಬರ್ ವಂಚನೆಯ ಪ್ರಕರಣಗಳು ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪೊಲೀಸರಿಗೆ ತಲೆನೋವಾಗಿ ಪರಿಗಣಿಸಿದೆ.
ಯಾವುದೋ ರಾಜ್ಯದ ಹಳ್ಳಿಯಲ್ಲಿ ಕೂತು ಇನ್ನೆಲ್ಲೋ ದೂರದ ಊರಿನ ಜನರ ಹಣ ಹೊಡೆಯುವ ಖದೀಮರನ್ನು ಹಿಡಿಯುವುದು ಅಷ್ಟು ಸುಲಭವಲ್ಲ, ಅದಕ್ಕಾಗಿಯೇ ಪೊಲೀಸರು, ಸೈಬರ್ ವಂಚಕರ ಜಾಲಕ್ಕೆ ಬಲಿಯಾಗದಂತೆ ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ.

ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸರು ಕೂಡ ಆನ್‌ಲೈನ್ ವಂಚನೆಯಿಂದ ಪಾರಾಗುವ ಬಗ್ಗೆ ಸಲಹೆಗಳನ್ನು ನೀಡಿದ್ದು, ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಜನರಿಗೆ ವಂಚಕರಿಂದ ತಪ್ಪಿಸಿಕೊಳ್ಳುವ ಐಡಿಯಾ ನೀಡಿದ್ದಾರೆ.
ಪೊಲೀಸರ ಸಲಹೆಗಳೇನು?
ಹಲೋ.. ನಾನು ಡಿಸಿಪಿ ಮಾತಾಡ್ತಿರೋದು, ಅರೇ ಮುಂಬೈ ಡಿಸಿಪಿ ಯಾಕೆ ನಮಗೆ ಕರೆ ಮಾಡ್ತಿದಾರೆ ಅಂತ ಅನ್ಕೊಂಡು ಕರೆ ಸ್ವೀಕರಿಸಿದರೆ ನೀವು ಸೈಬರ್ ವಂಚನೆಗೆ ಒಳಗಾಗಬಹುದು.
ಅದು ಹೇಗೆ ಅಂತೀರಾ? ಯಾಕೆಂದ್ರೆ ಅದು ನಕಲಿ ಡಿಸಿಪಿಯ ಕರೆಯಾಗಿದ್ದು ಸೈಬರ್ ವಂಚಕರ ಜಾಲದ ಭಾಗವಾಗಿರುತ್ತದೆ.
ಈ ವಂಚಕರ ಜಾಲ ಹೇಗೆ ಕೆಲಸ ಮಾಡುತ್ತೆ?
ಮೊದಲಿಗೆ ನಿಮ್ಮ ಹೆಸರಿನಲ್ಲಿ ಬಟ್ಟೆ, ಪಾದರಕ್ಷೆ, ಲ್ಯಾಪ್ ಟಾಪ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನು ಒಳಗೊಂಡ ಪಾರ್ಸೆಲ್ ಅನ್ನು ನಿಮ್ಮ ಹೆಸರಿನಲ್ಲಿ ಬುಕ್ ಮಾಡಿದ್ದಾರೆಂದು ನಕಲಿ ಪಾರ್ಸೆಲ್ ಕಂಪನಿಯೊಂದರಿಂದ / ಡಿಲೆವರಿ ಬಾಯ್ ಎಂದು ಹೆಸರಿನಲ್ಲಿ ನಿಮಗೆ ಕರೆ ಬರುತ್ತದೆ. ನಿಮ್ಮ ಮನೆ ವಿಳಾಸ ಕೂಡ ಸರಿಯಾಗಿ ಅವರೇ ಹೇಳುತ್ತಾರೆ.
ನಾವು ಯಾವುದೇ ರೀತಿಯ ಪಾರ್ಸಲ್ ಆರ್ಡರ್ ಮಾಡಿರುವುದಿಲ್ಲ ಎಂದು ಹೇಳಿದಾಗ ಅವರು ಈ ಪಾರ್ಸೆಲ್‌ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದ್ದು, ಪಾರ್ಸೆಲ್ ಕ್ಯಾನ್ಸಲ್ ಮಾಡಿದ್ದೇವೆ, ಬಹುಶಃ ನಿಮ್ಮ ಡೇಟಾ ಲೀಕ್ ಆಗಿರಬಹುದು, ಹೀಗಾಗಿ ಸೈಬರ್ ಕ್ರೈಂ ನಲ್ಲಿ ಕಂಪ್ಲೇಂಟ್ ಮಾಡಿ, ಹುಷಾರಾಗಿರಿ ಎಂದು ಸಲಹೆ ಕೊಡುತ್ತಾರೆ.
ನಂತರ ನಿಮಗೆ ವಿಡಿಯೋ ಅಥವಾ ಆಡಿಯೋ ಕರೆ ಬರುತ್ತದೆ. ಕರೆ ಮಾಡುವ ವ್ಯಕ್ತಿಯು 'ನಾನು ಮುಂಬೈ ಕ್ರೈಂ ಬ್ರಾಂಚ್ ಡಿಸಿಪಿ ಮಾತನಾಡುತ್ತಿದ್ದೇನೆ ನಿಮ್ಮ ಆಧಾರ್ ಕಾರ್ಡ್ ಹವಾಲಾ ರಾಕೆಟ್‌ಗೆ ಲಿಂಕ್ ಆಗಿದೆ, ನಿಮ್ಮ ವಿರುದ್ಧ ಕಂಪ್ಲೇಂಟ್ ದಾಖಲು ಮಾಡಲಾಗುತ್ತಿದೆ, ವಾರಂಟ್ ಜಾರಿ ಮಾಡಿ ನಿಮ್ಮನ್ನು ಅರೆಸ್ಟ್ ಮಾಡಲಾಗುತ್ತದೆ' ಎಂದು ಭಯಪಡಿಸುತ್ತಾರೆ.
ಟ್ರೂ ಕಾಲರ್ ಗಳಂತಹ ಅಪ್ಲಿಕೇಶನ್ ಗಳಲ್ಲಿ ಅವರ ಸಂಖ್ಯೆ ಚೆಕ್ ಮಾಡಿದ್ರೆ ' ಕ್ರೈಂ ಬ್ರಾಂಚ್ ಡಿಸಿಪಿ' ಅಂತ ಬರುತ್ತದೆ. (ಅದೇ ಹೆಸರಲ್ಲಿ ನಂಬರ್ ಸೇವ್ ಮಾಡಲಾಗಿರುತ್ತದೆ).
ಇದು ಯಾವುದು ನನಗೆ ಯಾವುದೂ ಗೊತ್ತಿಲ್ಲ ಎಂದು ನೀವು ಹೇಳಿದಾಗ ಹಾಗಾದರೆ ನೀವು ಇದರಿಂದ ಪಾರಾಗಲು ಮತ್ತು ನಿರಪರಾಧಿ ಎಂದು ಸಾಬೀತು ಪಡಿಸಲು ಆಧಾರ್ ಕಾರ್ಡ್ ಲಿಂಕ್ ಇರುವ ನಿಮ್ಮ ಬ್ಯಾಂಕ್ ಅಕೌಂಟ್ ವೆರಿಫೈ ಮಾಡಿ, ಇದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ, ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕುತ್ತೀರಿ, ಎಂದು ಹೇಳುತ್ತಾರೆ.
ನಿಮ್ಮಿಂದ ಬ್ಯಾಂಕ್ ಅಕೌಂಟ್ ವಿವರಗಳನ್ನು ಪಡೆದುಕೊಂಡ ನಂತರ ಓಟಿಪಿ ಕೇಳುತ್ತಾರೆ. ಒಟಿಪಿ ತಿಳಿದುಕೊಂಡ ನಂತರ 'ಇನ್ನು ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ, ಎಂದು ಹೇಳಿ ಕರೆ ಕಟ್ ಮಾಡುತ್ತಾರೆ'.
ಇದೊಂದು ವಂಚನೆ ಎಂದು ನಿಮಗೆ ತಿಳಿಯೋದ್ರೋಳಗೆ ಅಕೌಂಟ್‌ನಿಂದ ಹಣ ಕಡಿತ ಆಗಿ ಕಾಲ ಮಿಂಚಿ ಹೋಗಿರುತ್ತದೆ. ಹೀಗೆ ವಿವಿಧ ಕಾರಣಗಳನ್ನು ಹೇಳಿ 'ಮುಂಬೈ ಪೊಲೀಸ್, ದೆಹಲಿ ಪೊಲೀಸ್, ಸೈಬರ್ ಕ್ರೈಂ ಪೊಲೀಸ್, ಹೀಗೆ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ನಿಮ್ಮ ಭಯವನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡುತ್ತಾರೆ.
ಈ ರೀತಿಯ ಅಪರಿಚಿತ ಕರೆಗಳು ಬಂದರೆ ಯಾವುದೇ ರೀತಿಯ ಬ್ಯಾಂಕ್ ಅಕೌಂಟ್ ಮಾಹಿತಿಗಳನ್ನು ಓಟಿಪಿ ಹಾಗೂ ನಿಮ್ಮ ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ ಹಾಗೂ ಇಂತಹ ವಂಚನೆ ಸಂಭವಿಸಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿ ಮತ್ತು 1930 ಸಹಾಯವಾಣಿಗೆ ಕರೆ ಮಾಡಿ ಎಂದು ಪೊಲೀಸರುವ ಮನವಿ ಮಾಡಿದ್ದಾರೆ.












Click it and Unblock the Notifications