ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಪಾಲಿಕೆ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ
ಕರ್ನಾಟಕ, ಆಗಸ್ಟ್ 16: ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ.
ಚುನಾವಣಾ ಅಧಿಸೂಚನೆ ಪ್ರಕಾರ ಮೂರು ಮಹಾನಗರ ಪಾಲಿಕೆಯಲ್ಲಿ ಇಂದಿನಿಂದ (ಆಗಸ್ಟ್ 16) ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಆಗಸ್ಟ್ 23 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಸೆಪ್ಟೆಂಬರ್ 6 ರಂದು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ಕಳೆದ ಎರಡು ವರ್ಷಗಳಿಂದ ನಗರ ಪಾಲಿಕೆ ಚುನಾವಣೆಗಳು ನೆನೆಗುದಿಗೆ ಬಿದ್ದಿದ್ದವು. ಆದರೆ ಈ ಬಾರಿ ರಾಜ್ಯ ಚುನಾವಣಾ ಆಯೋಗ ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಿಸಿದೆ.

ಹುಬ್ಬಳ್ಳಿ- ಧಾರವಾಡದ 82 ವಾರ್ಡ್ಗಳಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಆಗಸ್ಟ್ 23 ಕೊನೆಯ ದಿನವಾಗಿದೆ. ಅಗಸ್ಟ್ 24 ರಂದು ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ಹಿಂದೆತೆಗೆದುಕೊಳ್ಳಲು ಆಗಸ್ಟ್ 26 ಕೊನೆ ದಿನವಾಗಿದೆ. ಆಗಸ್ಟ್ 16ರಿಂದ ಸೆಪ್ಟೆಂಬರ್ 6ರವರೆಗೆ ಮೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಹಿತೆ ಜಾರಿಯಾಗುತ್ತದೆ.
ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆಗೆ ಸುಮಾರು 837 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 4,07,954 ಗಂಡು, 4,07,954 ಹೆಣ್ಣು, 86 ಇತರೆ ಸೇರಿದಂತೆ ಒಟ್ಟು 8,11,537 ಜನರು ಪಾಲಿಕೆ ಮತದಾನ ಮಾಡಲಿದ್ದಾರೆ. 16 ಚುನಾವಣಾ ಅಧಿಕಾರಿ, 16 ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಜಕೀಯ ಚಟುವಟಿಕೆಗೆ ಅನುಮತಿ ಪಡೆಯಲು ಎರಡು ಕಚೇರಿಗಳನ್ನು ಸ್ಥಾಪಿಸಲಾಗುತ್ತದೆ. ಇವಿಎಂ ಮತ ಯಂತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಯುತ್ತದೆ. 100 ಜನರಿಗೆ ಮಾತ್ರ ಬಹಿರಂಗ ಪ್ರಚಾರ ಮಾಡಲು ಅವಕಾಶವಿರುತ್ತದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ನಾಮಪತ್ರ ಸಲ್ಲಿಸುವ ದಿನದಂದು ಬಹಿರಂಗ ಮೆರವಣಿಗೆಗೆ ಅವಕಾಶವಿರಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಈ ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇಂದಿನಿಂದ ರಾಜಕೀಯ ಸದ್ದು ಗದ್ದಲ ಹೆಚ್ಚಾಗುವುದು ಖಚಿತವಾದಂತಾಗಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿ ವ್ಯಾಪಿಸುತ್ತಿದ್ದು, ಮಹಾನಗರ ಪಾಲಿಕೆ ಚುನಾವಣೆಗಳ ಇದರ ನಡುವೆಯೇ ನಡೆಯಬೇಕಾದಂತಾಗಿದೆ.

ಹೀಗಾಗಿ ಕೋವಿಡ್ ಸೋಂಕು ತಡೆ ನಿಯಮಗಳನ್ನು ಅತ್ಯಂತ ಕಠಿಣವಾಗಿ ಜಾರಿಗೊಳಿಸಿ ಮತ್ತು ಅವುಗಳನ್ನು ಪಾಲಿಸಿ ನಗರ ಪಾಲಿಕೆ ಚುನಾವಣೆಗಳು ನಡೆಸಬೇಕಿದೆ.
ಚುನಾವಣೆ ನಡೆಯುವ ಮಹಾನಗರ ಪಾಲಿಕೆಗಳು
1. ಬೆಳಗಾವಿ ಮಹಾನಗರ ಪಾಲಿಕೆ- 58 ವಾರ್ಡ್‌ಗಳು
2. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ- 83 ವಾರ್ಡ್‌ಗಳು
3. ಕಲಬುರಗಿ ಮಹಾನಗರ ಪಾಲಿಕೆ- 55 ವಾರ್ಡ್‌ಗಳು
ಗೆಲ್ಲುವ ಅಭ್ಯರ್ಥಿಗೆ ಟಿಕೆಟ್
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಜತೆ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದರು. ಬೆಳಗಾವಿಯ ಜಾಧವ್ ನಗರದಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ಮಾಡಿದರು.
ಸೆಪ್ಟೆಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಕುರಿತು ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Recommended Video
ಇಂದು (ಸೋಮವಾರ) ಕಾಂಗ್ರೆಸ್ ಕಮಿಟಿ ಸಭೆಯಿದ್ದು, ಮಾಜಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ಮೂವರು ನಾಯಕರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಯಾವ ರೀತಿ ಚುನಾವಣೆ ಮಾಡಬೇಕೆಂದು ತೀರ್ಮಾನ ಆಗಲಿದೆ. ಕಾರ್ಯಕರ್ತರ ಅಭಿಪ್ರಾಯದ ಬಳಿಕ ಕಾಂಗ್ರೆಸ್ ಪಕ್ಷ ಚಿಹ್ನೆ ಮೇಲೆ ಸ್ಪರ್ಧೆ ಮಾಡಬೇಕಾ, ಬೇಡವಾ ಅನ್ನೋದು ತೀರ್ಮಾನ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನನ್ನ ವೈಯಕ್ತಿಕ ನಿರ್ಧಾರದ ಮೇಲೆ ತೀರ್ಮಾನ ಮಾಡಲು ಆಗಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯದ ಮೇಲೆ ಕಮಿಟಿ ಅಂತಿಮ ತೀರ್ಮಾನ ಮಾಡಲಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.












Click it and Unblock the Notifications