New Railway Line: 28 ವರ್ಷಗಳ ಬಳಿಕ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್, ₹16,453 ಕೋಟಿ ವೆಚ್ಚ
ಹುಬ್ಬಳ್ಳಿ: ದಶಕಗಳಿಂದ ನೆನಗುದಿಗೆ ಬಿದ್ದಿದ್ದ ರಾಜ್ಯದ ಪ್ರಮುಖ ರೈಲ್ವೆ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಒಟ್ಟು 163 ಕಿಲೋ ಮೀಟರ್ ಉದ್ದದ ರೈಲ್ವೆ ಮಾರ್ಗವು ವಿದ್ಯುತ್ ಜೋಡಿ ಹಳಿ ಸಹಿತ ಬಹುಕೋಟಿ ವೆಚ್ಚದಲ್ಲಿ ಕಾರ್ಯರೂಪಕ್ಕೆ ತರಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಮಾರ್ಗವು ಕರಾವಳಿ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಗರಕ್ಕೆ ಸಂಪರ್ಕ ಸಾಧಿಸಲಿದೆ.
ಅಂಕೋಲಾ- ಹುಬ್ಬಳ್ಳಿ ನಡುವೆ ನೂತನ ರೈಲ್ವೆ ಮಾರ್ಗ ನಿರ್ಮಿಸಬೇಕೆಂಬ ಯೋಜನೆಯನ್ನು ಇಷ್ಟ ವರ್ಷಗಳ ಬಳಿಕ ರೈಲ್ವೆ ಮಂಡಳಿಯು ವಿಶೇಷ ರೈಲ್ವೆ ಯೋಜನೆ ಎಂದು ಪರಿಗಣಿಸಿ ಕಳೆದ ಜುಲೈ 23ರಂದು ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಇದರ ಬೆನ್ನಲ್ಲೇ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನೈಋತ್ಯ ರೈಲ್ವೆಯ ಮುಖ್ಯ ಇಂಜಿನಿಯರ್ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಅಧಿಸೂಚನೆ ಸಂಬಂಧಿಸಿದಂತೆ ಜುಲೈ 31ರಂದು ಪತ್ರ ಬರೆದಿದ್ದಾರೆ. ಈ ಮೂಲಕ ರಾಜ್ಯದ ಮಹತ್ವದ ಯೋಜನೆಯೊಂದು ಸುಮಾರು 28 ವರ್ಷಗಳ ಬಳಿಕ ಮತ್ತೆ ಪುನರಾರಂಭವಾಗುತ್ತಿದೆ.

1998ರಲ್ಲಿ ಹುಬ್ಬಳ್ಳಿಯಲ್ಲಿ ವಾಜಪೇಯಿ ಶಂಕುಸ್ಥಾಪನೆ
ಕರಾವಳಿಯ ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರಸ್ತುತ ಯೋಜನೆಗೆ 1997-1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಹುಬ್ಬಳ್ಳಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಅದಾಗಿ ಇಷ್ಟು ದಶಕಗಳೇ ಕಳೆದಿವೆ. ಈಗ ಯೋಜನೆಗೆ ಮರುಜೀವ ನೀಡಲಾಗಿದೆ. ಇಷ್ಟು ವರ್ಷಗಳ ಕಾಲ ವಿಳಂಬವಾಗಲು ಕಾರಣವೇನು?
ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆಗೆ ಪ್ರಸ್ತಾಪಿಸಿ ಶಂಕುಸ್ಥಾಪನೆ ನೆರವೇರಿದ ಬೆನ್ನಲ್ಲೆ ಪರಿಸರಕ್ಕೆ ಸಂಬಂಧಿಸಿದ ಒಂದಷ್ಟು ಕಾರಣಗಳು ಅಂದು ಅಡ್ಡಿಯಾಗಿದ್ದವು. ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿ ಉಂಟಾಗಲಿದೆ ಎಂದು ದೂರಲಾಗಿತ್ತು. ಇದೆಲ್ಲ ಕಾರಣಗಳ ಜೊತೆಗೆ ಯೋಜನೆ ಆಕ್ಷೇಪಿಸಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ ಮಾರ್ಗ ನಿರ್ಮಾಣ ಕೈ ಬಿಡಲಾಗಿತ್ತು.
ಯೋಜನೆ ವೈಶಿಷ್ಟ್ಯ, ಕಾಮಗಾರಿ ಅರಂಭ ಯಾವಾಗ?
ಗೆಜೆಟ್ ಅಧಿಸೂಚನೆ ಹೊರಡಿಸುತ್ತಿದ್ದಂತೆ ಕಾಮಗಾರಿಯೇ ಆರಂಭವಾಯಿತು ಎಂದಲ್ಲ. ವನ್ಯಜೀವಿ ಹಾಗೂ ಇತರ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆಯುವುದು ಬಾಕಿ ಇದೆ. ಪರಿಸರಕ್ಕೆ ಯಾವುದೇ ಹಾನಿ ಮಾಡದೇ ಸುಮಾರು 57 ಸುರಂಗಗಳ ಮೂಲಕ ಬ್ರಾಡ್‌ಗೇಟ್ ಡಬಲ್ ರೈಲ್ವೆ ಲೈನ್ ನಿರ್ಮಿಸುವ ಉದ್ದೇಶವಿದೆ. ಇದೆಲ್ಲವನ್ನು ಪರಿಷ್ಕೃತ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.
ಯೋಜನೆಗೆ ಹುಬ್ಬಳ್ಳಿ, ಧಾರವಾಡ, ಉತ್ತರ ಕನ್ನಡ ವ್ಯಾಪ್ತಿಯ ಸರ್ಕಾರಿ, ಖಾಸಗಿ ಹಾಗೂ ಅಗತ್ಯದಷ್ಟು ಅರಣ್ಯ ಪ್ರದೇಶ ಒಳಗೊಳ್ಳಲಿದೆ. ಇತರ ಇಲಾಖೆಗಳ ಅನುಮತಿ ಜೊತೆಗೆ ಭೂಸ್ವಾಧೀನ ಪ್ರಕ್ರಿಯೆಯು ಯಾವುದೇ ಸಮಸ್ಯೆ ಇಲ್ಲದೇ ನಡೆಯಬೇಕು. ಆಗಷ್ಟೇ ಯೋಜನೆ, ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಸಾಧ್ಯವಾಗುತ್ತದೆ.
ಯೋಜನೆ ಅಂದಾಜು ವೆಚ್ಚ ಭಾರೀ ಏರಿಕೆ
ಅಂದು163 ಕಿಲೋ ಮೀಟರ್ ಉದ್ದದ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗ ಯೋಜನೆ ಘೋಷಣೆ ಆದಾಗ 483 ಕೋಟಿ ರೂಪಾಯಿ ಅಂದಾಜು ವೆಚ್ಚವಾಗಲಿದೆ ಎಂದು ಹೇಳಲಾಗಿತ್ತು. ದಶಕಗಳ ಬಳಿಕ ಇದೀಗ ಸದರಿ ಯೋಜನೆಗೆ 16,453 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ರೈಲ್ವೆ ಅಂದಾಜಿಸಿದೆ. ಈ ಯೋಜನೆಯಿಂದ ಹುಬ್ಬಳ್ಳಿ, ಉತ್ತರ ಕನ್ನಡ ಭಾಗದ ರೈಲ್ವೆ ಸಂಪರ್ಕ ಸಾಧ್ಯವಾಗಲಿದೆ. ಉತ್ತರ ಕರ್ನಾಟಕದ ಪ್ರಮುಖ ಎರಡು ಭಾಗಗಳ ಸಾರಿಗೆ ಸಂಪರ್ಕ ಸುಧಾರಿಸಲಿದೆ. ಪ್ರವಾಸೋಧ್ಯಮ, ಕೈಗಾರಿಕೆ, ಶೈಕ್ಷಣಿಕ, ದೈನಂದಿನ ಬಳಕೆ ಸೇರಿದಂತೆ ಇನ್ನಿತರ ಸದುದ್ದೇಶಗಳಿಗೆ ಅನುಕೂಲ ಒದಗಿಸಲಿದೆ.


Click it and Unblock the Notifications
