ಹುಬ್ಬಳ್ಳಿ- ಆಂಕೋಲಾ ಬ್ರಾಡ್ ಗೇಜ್ ಯೋಜನೆ: NBWLಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಏ.21: ಹುಬ್ಬಳ್ಳಿ - ಅಂಕೋಲಾ ನಡುವಿನ ಬ್ರಾಡ್ ಗೇಜ್ ರೈಲು ಮಾರ್ಗ ಯೋಜನೆಯಿಂದ ವನ್ಯಜೀವಿಗಳ ಮೇಲಾಗಲಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ಪೂರ್ಣಗೊಳಿಸುವ ಮುನ್ನ ಅಗತ್ಯ ಅನುಮೋದನೆ ಗಳನ್ನು ಪಡೆದುಕೊಳ್ಳುವಂತೆ ಹೈಕೋರ್ಟ್ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಬುಧವಾರ ನಿರ್ದೇಶನ ನೀಡಿತು.
ಜೊತೆಗೆ 2021ರ ಡಿ.1ರಂದು ನೀಡಿದ್ದ ಆದೇಶದಂತೆ ಪರಿಸರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿ ಆದಷ್ಟು ಶೀಘ್ರ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಕೇಂದ್ರಕ್ಕೆ ತಾಕೀತು ಮಾಡಿ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿತು.
ಹುಬ್ಬಳ್ಳಿ-ಅಂಕೋಲಾ ನಡುವೆ 164.44 ಕಿ.ಮಿ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾ.20ರಂದು ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಮತ್ತು ಗಿರಿಧರ್ ಕುಲಕರ್ಣಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿವೆ.

ಸುಮಾರು ಅರ್ಧಗಂಟೆಗಳ ಕಾಲ ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಪರಿಸರ ಸಂರಕ್ಷಣಾ ಕಾಯಿದೆ ಸೇರಿದಂತೆ ಅಗತ್ಯ ನಿಯಮಗಳಡಿ ಪಡೆಯಬೇಕಾಗಿರುವ ಅನುಮೋದನೆಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಇದೇ ವೇಳೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮೀಕ್ಷೆ ಕಾರ್ಯವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಸಾಧ್ಯವಾದರೆ ಒಂದು ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿತು. ಕೇಂದ್ರ ಸರ್ಕಾರಿ ವಕೀಲರು, ಯೋಜನೆ ಜಾರಿ ವಿಳಂಬವಾಗುತ್ತಿದೆ, ನ್ಯಾಯಾಲಯ ಯೋಜನೆಗೆ ಅನುಮತಿ ನೀಡಬೇಕು ಎಂದರು.
ಹೊಸ ಅಧ್ಯಯನ ಅಗತ್ಯ: ಅರ್ಜಿದಾರರ ಪರ ವಕೀಲರು, 2011ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿ ಹುಬ್ಬಳ್ಳಿ - ಅಂಕೋಲಾ ನಡುವಿನ ಬ್ರಾಡ್ ಗೇಜ್ ರೈಲು ಮಾರ್ಗ ಯೋಜನೆ ಕೈಗೊಳ್ಳಬಹುದೆಂದು ಹೇಳಿದೆ. ಆ ಸಮಿತಿಯ ಮೇಲೆ ರಾಜಕೀಯ ಒತ್ತಡ ಹೇರಿ ವರದಿಯನ್ನು ಪಡೆಯಲಾಗಿದೆ. ಆದರೆ ಇತರೆ ಸಂಸ್ಥೆಗಳ ಅಧ್ಯಯನದಲ್ಲಿ ಯೋಜನೆ ಕಾರ್ಯಸಾಧುವಲ್ಲವೆಂದು ಹೇಳಿವೆ. ಹಾಗಾಗಿ ಗೊಂದಲ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಯನ ಅಗತ್ಯವಿದೆ ಎಂದು ವಾದಿಸಿದರು.
ಕೋರ್ಟ್ ಹಿಂದಿನ ಆದೇಶವೇನು?: ನ್ಯಾಯಪೀಠ, 2021ರ ಡಿ.1ರಂದು''ರೈಲ್ವೆ ಯೋಜನೆ ಪಶ್ಚಿಮ ಘಟ್ಟಗಳಲ್ಲಿನ ಅಪರೂಪದ ವನ್ಯಜೀವಿಗಳಿಗೆ ತೊಂದರೆ ಆಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮೌಲ್ಯಮಾಪನ ನಡೆಸಬೇಕು, ಅದಕ್ಕೆ ಅದು ಈಗಾಗಲೇ ಲಭ್ಯವಿರುವ ಸಮೀಕ್ಷೆಗಳು ಹಾಗೂ ವರದಿಗಳನ್ನು ಪರಿಶೀಲಿಸಬೇಕು. ಅಗತ್ಯಬಿದ್ದರೆ ತಜ್ಞರ ನೆರವನ್ನು ಪಡೆದುಕೊಳ್ಳಬಹುದು''ಎಂದು ಆದೇಶಿಸಿತ್ತು.

ಅಭಿವೃದ್ಧಿ ಕಾರ್ಯಗಳು ನಡೆಯಬೇಕು, ಆದರೆ ಅದರಿಂದ ವನ್ಯಜೀವಿ ಸಂಪತ್ತಿಗೆ ತೊಂದರೆ ಆಗಬಾರದು. ಹಾಗಾಗಿ ಮಂಡಳಿ ಆ ಬಗ್ಗೆ ಸಮೀಕ್ಷೆ ನಡೆಸಿ, ಮುಂದಿನ ವಿಚಾರಣೆಯೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶ ನೀಡಿತು.
ಅರ್ಜಿದಾರರ ಪರ ವಕೀಲರು, 40 ವರ್ಷಗಳಿಂದ ಬಾಕಿ ಇರುವ ರೈಲ್ವೆ ಯೋಜನೆ ಇದಾಗಿದೆ, ಹಲವು ವರ್ಷಗಳ ಹಿಂದೆ ನಡೆಸಿ ಸಮೀಕ್ಷೆ ಆಧರಿಸಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಯೋಜನೆಗೆ ಒಪ್ಪಿಗೆ ನೀಡಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಶಿಫಾರಸು ಮಾಡಿದೆ. ಮೂಲತಃ ಯೋಜನೆಯಿಂದ ಅಪರೂಪದ ವನ್ಯಜೀವಿಗಳಿಗೆ ಧಕ್ಕೆ ಆಗಲಿದೆ ಎಂದರು.
2020ರ ಮಾ.20ರಂದು ರಾಜ್ಯ ವನ್ಯಜೀವಿ ಮಂಡಳಿ ಕೈಗೊಂಡಿರುವ ನಿರ್ಣಯ ಆಧರಿಸಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಸಂಬಂಧ ಮುಂದಿನ ಕ್ರಮ ಜರುಗಿಸಬಾರದು ಎಂದು ಸರಕಾರಕ್ಕೆ ಸೂಚಿಸಿ ಜೂ.18ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ನಂತರ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸುತ್ತಾ ಬಂದಿದೆ.
ಅಲ್ಲದೆ ನ್ಯಾಯಪೀಠ, ಹಲವು ವರ್ಷಗಳ ಹಿಂದಿನ ಸಮೀಕ್ಷೆ ಆಧರಿಸಿ ಯೋಜನೆಗೆ ಅನುಮತಿ ನೀಡಲಾಗಿದೆ. ಹಾಗಾಗಿ ಯೋಜನೆಗೆ ಅನುಮತಿ ನೀಡಿ ಕರ್ನಾಟಕ ವನ್ಯಜಿವಿ ಮಂಡಳಿ ಕೈಗೊಂಡಿರುವ ನಿರ್ಣಯ ಹಿಂಪಡೆಯಬಹುದಲ್ಲವೇ ಎಂದು ಸರಕಾರವನ್ನುಮೌಖಿಕವಾಗಿ ಪ್ರಶ್ನಿಸಿತು.












Click it and Unblock the Notifications