HSRP; ವಾಹನ ಸವಾರರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ
ಬೆಂಗಳೂರು, ಮೇ 22: ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರು ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾಗಲಿದ್ದಾರೆ. ಹೆಚ್‌ಎಸ್‌ಆರ್‌ಪಿ ಅಳವಡಿಸದವರ ವಿರುದ್ಧ ಜೂನ್ 12ರ ವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಸಿದ್ದಪಡಿಸುವ ಕಂಪನಿಗಳಲ್ಲಿ ಒಂದಾದ ಬಿಎನ್‌ಡಿ ಎನಾರ್ಜಿ ಲಿಮಿಟೆಡ್ ನಂಬರ್ ಫಲಕ ಅಳವಡಿಸಲು ವಿಧಿಸಿರುವ ಮೇ 31ರ ಗಡುವು ವಿಸ್ತರಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ರಜಾಕಾಲದ ನ್ಯಾಯಪೀಠ ವಿಚಾರಣೆ ನಡೆಸಿತು.

ಜೂ.11ರಂದು ವಿಚಾರಣೆ: ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೋಬಿನ್ ಜೇಕಬ್, ಅರ್ಜಿ ವಿಚಾರಣೆ ಜೂನ್ 11ರಂದು ಪಟ್ಟಿಯಾಗಿದೆ. ಹೀಗಾಗಿ ಈ ಸಂಬಂಧ ಯಾವುದೇ ಆದೇಶ ಹೊರಡಿಸಬಾರದು ಎಂದು ಮನವಿ ಮಾಡಿದರು.
ಈ ವೇಳೆ ನ್ಯಾಯಪೀಠ, ಅಲ್ಲಿಯವರೆಗೂ ಕಾಲಾವಕಾಶ ನೀಡಬಹುದೇ? ಎಂದು ಪ್ರಶ್ನಿಸಿದರು. ಇದಕ್ಕೆ ಸರ್ಕಾರಿ ವಕೀಲರು, ಜೂನ್ 12ರ ವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ: ಹಳೆಯ ವಾಹನಗಳಿಗೆ (2019ಕ್ಕೂ ಮುನ್ನ ನೋಂದಣಿಯಾಗಿರುವ) ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಕುರಿತಂತೆ ಇರುವ ಗೊಂದಲಗಳು ಈವರೆಗೂ ಪರಿಹಾರ ಸಿಕ್ಕಿಲ್ಲ. ಅಲ್ಲದೆ, ಅಂತರ್‌ಜಾಲದ ಕುರಿತು ಜ್ಞಾನವಿಲ್ಲದವರಿಗೆ ಈವರೆಗೂ ಗೊಂದಲ ನಿವಾರಣೆಯಾಗಿಲ್ಲ.
ಆದರೆ, ಮೇ ತಿಂಗಳ ಅಂತ್ಯದ ವೇಳೆಗೆ ಎಲ್ಲ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ನಂಬರ್ ಅಳವಡಿಸುವುದು ಕಡ್ಡಾವಾಗಿದೆ ಈ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಅಂತಿಮ ದಿನಾಂಕ ಪ್ರಸ್ತಾಪಿಸಿಲ್ಲ. ಆದರೆ, ರಾಜ್ಯ ಸರ್ಕಾರ ಗಡುವು ವಿಧಿಸಿದೆ. ಅದಕ್ಕೆ ಅವಕಾಶವಿಲ್ಲ ಎಂದು ಗೌರಿಶಂಕರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.
ಅಲ್ಲದೆ, ಹೆಚ್ಎಸ್ಆರ್‌ಪಿ ನಂಬರ್ ಫಲಕ ಉತ್ಪಾದನೆ ಸಂಬಂಧ ಟೆಂಡರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ವಿವಿಧ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು.












Click it and Unblock the Notifications