HSRP ಅಳವಡಿಕೆಗೆ ಕಾಲಾವಕಾಶ ವಿಸ್ತರಣೆ: ಹೈಕೋರ್ಟ್‌ಗೆ ಸರ್ಕಾರದ ನೀಡಿದ ಮಾಹಿತಿ ಏನು?
ಬೆಂಗಳೂರು ಜುಲೈ 05: ರಾಜ್ಯದಲ್ಲಿ ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ನೀಡಿರುವ ಗಡುವನ್ನು ರಾಜ್ಯ ಸರ್ಕಾರ ಸೆಪ್ಟಂಬರ್ 15ರವರೆಗೆ ವಿಸ್ತರಣೆ ಮಾಡಿದೆ. ಅಲ್ಲದೇ ಈ ಕುರಿತು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದರಿಂದಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡದ ವಾಹನ ಸವಾರರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟು ನಿಧಾನವಾಗಿ ಅತಿಸುರಕ್ಷಿತ ನೋಂದಣಿ ಫಲಕವನ್ನು ಅಳವಡಿಸಿಕೊಳ್ಳಬಹುದಾಗಿದೆ.
ಎಚ್‌ಎಸ್‌ಆರ್‌ಪಿ ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಏಕಸದಸ್ಯ ನ್ಯಾಾಯಪೀಠದ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದವು.

ಈ ವೇಳೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ ನ್ಯಾಯಪೀಠದ ಮುಂದೆ ಹಾಜರಾಗಿ, ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ನಿಗದಿಪಡಿಸಲಾಗಿದ್ದ ಅವಧಿಯನ್ನು ಸೆಪ್ಟಂಬರ್ 15ರವರೆಗೆ ರಾಜ್ಯ ಸರ್ಕಾರ ವಿಸ್ತರಿಸಿದೆ ಎಂದು ಮಾಹಿತಿ ನೀಡಿದರು.
ಆಗ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶದ ವಿಚಾರವಾಗಿ ನಮ್ಮ ವಾದ ಮಂಡಿಸಬೇಕಿದೆ ಎಂದು ಮೇಲ್ಮನವಿದಾರ ಕಂಪನಿಗಳ ಪರ ವಕೀಲರು ಕೋರಿದರು. ಅದಕ್ಕೆ ಸರ್ಕಾರ ಅವಧಿಯನ್ನು ಸೆಪ್ಟಂಬರ್ 15ರವರೆಗೆ ವಿಸ್ತರಿಸಿದೆ. ಆದರೆ, ಮೇಲ್ಮನವಿದಾರರ ವಾದ ಆಲಿಸಬೇಕಿದೆ ಎಂದು ಹೇಳಿದ ನ್ಯಾಾಯಪೀಠ ಅರ್ಜಿಯನ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿತು.
ಎಚ್‌ಎಸ್‌ಆರ್‌ಪಿ ಅಳವಡಿಕೆ ಅವಧಿಯನ್ನು ಆಗಸ್‌ಟ್ ಅಥವಾ ಸೆಪ್ಟಂಬರ್‌ವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳುವುದಕ್ಕೂ ಸರ್ಕಾರ ಸಿದ್ಧವಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ರೀತಿಯ ಬಲವಂತದ ಕ್ರಮ ಅಥವಾ ನಿರ್ಧಾರ ಕೈಗೊಳ್ಳಬಾರದು ಎಂದು ನ್ಯಾಯಾಲಯ ಮೇ 21ರಂದು ಮಧ್ಯಂತರ ಆದೇಶ ನೀಡಿದೆ.
ಹಾಗಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ. ಒಂದು ವೇಳೆ ಮೇ 21ರ ಆದೇಶಕ್ಕೆ ಮಾರ್ಪಾಡು ಮಾಡಿದರೆ, ಆಗಸ್ಟ್ -ಸೆಪ್ಟಂಬರ್‌ವರೆಗೆ ಗಡುವು ವಿಸ್ತರಿಸುವ ಬಗ್ಗೆ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರ ಜೂನ್ 12ರಂದು ಹೇಳಿತ್ತು.
ಅದಕ್ಕೆ ಸಮ್ಮತಿಸಿದ್ದ ನ್ಯಾಯಪೀಠ, ಆಗಸ್ಟ್ ಅಥವಾ ಸೆಪ್ಟಂಬರ್‌ವರೆಗೆ ಗಡುವು ವಿಸ್ತರಿಸುವುದಕ್ಕೆ ಸರ್ಕಾರಕ್ಕೆ ಅನುಮತಿ ನೀಡಿತ್ತು. ಅದರಂತೆ, ಸೆಪ್ಟಂಬರ್ 15ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಗುರುವಾರ ಸರ್ಕಾರ ನ್ಯಾಯಪೀಠಕ್ಕೆ ತಿಳಿಸಿತು. ರಾಜ್ಯದಲ್ಲಿ ಇಲ್ಲಿವರೆಗೆ 43 ಲಕ್ಷ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದ್ದು, ಇನ್ನೂ 1.3ರಿಂದ 1.4 ಕೋಟಿ ವಾಹನಗಳು ಬಾಕಿ ಇವೆ ಎಂದು ಹೇಳಲಾಗಿದೆ.












Click it and Unblock the Notifications