ಬುಧವಾರದಿಂದ ಅಧಿವೇಶನ, ಮತ್ತೆ ಮಾತಿನ ಸಮರ!
ಬೆಂಗಳೂರು, ಜ.21 : ಬುಧವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಜ.22ರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಉಭಯ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಯಾರಿ ನಡೆಸಿವೆ.
ಸೋಮವಾರ ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಹಾಗೂ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಅಧೀವೇಶನದಲ್ಲಿ ಭಾಷಣ ಮಾಡಲು ಅಧಿಕೃತ ಆಹ್ವಾನ ನೀಡಿದರು. ಜ.22ರಿಂದ 30ರವರೆಗೆ ಏಳು ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರಮೂರ್ತಿ, ಅಧಿವೇಶನ ಈ ತಿಂಗಳ ಜ.22ರಿಂದ 30ರವರೆಗೆ ನಡೆಯಲಿದೆ. ವಿಧಾನಪರಿಷತ್ತಿನಲ್ಲಿ ಎರಡು ವಿಧೇಯಕಗಳು ಮಂಡನೆಗೆ ಬಾಕಿ ಉಳಿದಿವೆ. ಅತ್ಯವಶ್ಯಕ ಸೇವೆಗಳ ವಿಧೇಯಕ ಕೂಡ ಇದರಲ್ಲಿ ಸೇರಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು ಎಂದು ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಇವುಗಳಲ್ಲಿ ಮೊದಲ ಮೂರು ಅಧಿವೇಶನಗಳು ಬೆಂಗಳೂರಿನಲ್ಲೇ ನಡೆಯಲಿದ್ದು, ನವೆಂಬರ್ ತಿಂಗಳಿನಲ್ಲಿ ಮಾತ್ರ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಾತ್ಕಾಲಿಕ ವೇಳಾಪಟ್ಟಿಯಂತೆ ವರ್ಷದ ಆರಂಭದಲ್ಲಿ ಜನವರಿಯಲ್ಲಿ ರಾಜ್ಯಪಾಲರ ಭಾಷಣ ಸೇರಿದಂತೆ 10ರಿಂದ 15 ದಿನಗಳ ಅಧಿವೇಶನ, ಫೆಬ್ರವರಿ- ಮಾರ್ಚ್ ನಲ್ಲಿ 10ರಿಂದ 20 ದಿನಗಳ ಬಜೆಟ್ ಅಧಿವೇಶನ, ಜೂನ್- ಜುಲೈ ತಿಂಗಳಲ್ಲಿ ಕನಿಷ್ಠ 20 ದಿನಗಳ ಅಧಿವೇಶನ ಹಾಗೂ ನವೆಂಬರ್ ನಲ್ಲಿ 10ರಿಂದ 15 ದಿನಗಳ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಪ್ರತಿಪಕ್ಷ ಯಾವುದು : ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಲಾಗಿದೆ. ಆದ್ದರಿಂದ ವಿಧಾನಸಭೆಯಲ್ಲಿ ಬಿಜೆಪಿ ಬಲ 44ಕ್ಕೆ ಏರಿದ್ದು, ಬುಧವಾರದ ಮೊದಲ ದಿನದ ಅಧಿವೇಶನದಲ್ಲಿ ಸ್ಪೀಕರ್ ಪ್ರತಿಪಕ್ಷ ಸ್ಥಾನವನ್ನು ಬಿಜೆಪಿಗೆ ನೀಡುವ ಸಾಧ್ಯತೆ ಇದೆ. [ಕೆಜೆಪಿ-ಬಿಜೆಪಿ ವಿಲೀನ, ಪ್ರತಿಪಕ್ಷ ಯಾವುದು]
ಈಗಾಗಲೇ ಬಿಜೆಪಿ ಮತ್ತು ಕೆಜೆಪಿ ಸ್ಪೀಕರ್ ಅವರನ್ನು ಭೇಟಿ ಮಾಡಿ ಪಕ್ಷ ವಿಲೀನದ ಪತ್ರವನ್ನು ನೀಡಿವೆ. ಪ್ರತಿಪಕ್ಷ ಸ್ಥಾನ ನೀಡುವಂತೆಯೂ ಮನವಿ ಮಾಡಿವೆ. ಸ್ಪೀಕರ್ ಈ ಕುರಿತು ಬುಧವಾರ ಸದನದಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು, ಪ್ರತಿಪಕ್ಷ ಸ್ಥಾನ ಬಿಜೆಪಿ ಪಾಲಾದರೆ, ವಿಧಾನಸಭೆಯಲ್ಲಿ 40 ಸದಸಯ ಬಲ ಹೊಂದಿರುವ ಜೆಡಿಎಸ್ ವಿಪಕ್ಷ ಸ್ಥಾನ ಕಳೆದುಕೊಳ್ಳಲಿದೆ. ಎಚ್.ಡಿ.ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕನ ಸ್ಥಾನ ಬಿಟ್ಟು ಕೊಡಬೇಕಾಗುತ್ತದೆ.












Click it and Unblock the Notifications