ರಾಜಕೀಯ..ಪ್ರತಿಭಟನೆ..ಹೋರಾಟ..ಬಂದ್: ಕಾವೇರಿ ಸಂಕಷ್ಟವನ್ನು ರಾಜ್ಯ ನಿಭಾಯಿಸುವುದು ಹೇಗೆ?
ಬೆಂಗಳೂರು, ಸೆಪ್ಟೆಂಬರ್ 25: ರಾಜ್ಯದ ಜನತೆಗೆ ಕಾವೇರಿ ಸಂಕಷ್ಟ ಎದುರಾಗಿದೆ. ರೈತರ ಬೆಳೆಗೆ ನೀರು ಹರಿಸುವುದಿರಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದೀಗ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ನೀಡಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ(CWRC)ಯ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಸೂಚಿಸಿರುವುದು ಕರ್ನಾಟಕದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಬೆಳವಣಿಗೆಯನ್ನು ಗಮನಿಸಿದ ನಂತರ ಮುಂದೇನು? ಎಂಬ ಪ್ರಶ್ನೆ ಈಗ ರಾಜ್ಯದ ಜನರ ಮತ್ತು ಸರ್ಕಾರದ ಮುಂದೆ ನಿಂತಿದೆ. ಈ ತೀರ್ಪು ಬರುತ್ತಿದ್ದಂತೆಯೇ ರೈತರ ಮತ್ತು ಕಾವೇರಿ ನೀರನ್ನು ಆಶ್ರಯಿಸಿದವರ ಎದೆ ಬಡಿತ ಜೋರಾಗಿದೆ. ಇದನ್ನು ನಮ್ಮ ರಾಜ್ಯದ ನಾಯಕರು ರಾಜಕೀಯಕ್ಕೆ ಬಳಸಿಕೊಳ್ಳದೆ ಹೇಗೆ ನಿಭಾಯಿಸುತ್ತಾರೆ? ಎಂಬುದೇ ಈಗಿರುವ ಸವಾಲ್ ಆಗಿದೆ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಪ್ರತಿಭಟನೆಗಳು ಜೋರಾಗಿವೆ.
ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗುವ ಲಕ್ಷಣಗಳು ಮುಂಗಾರು ಆರಂಭದಲ್ಲಿಯೇ ಗೋಚರಿಸಿತ್ತು. ಈ ವೇಳೆ ರಾಜ್ಯ ಸರ್ಕಾರ ಸರ್ವ ಸಭೆ ಕರೆದು, ನೀರಾವರಿ ತಜ್ಞರಿಂದ ಸಲಹೆ ಪಡೆದು ಮುಂದಿನ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದರು ಎಂಬಂತೆ ರಾಜ್ಯ ಸರ್ಕಾರದ ನಡೆ ಇದೀಗ ಸಂಕಷ್ಟವನ್ನು ತಂದೊಡ್ಡಿದೆ. ರೈತರ ಪರ ಎಂಬ ಪೊಳ್ಳು ಆಶ್ವಾಸನೆ ನೀಡುತ್ತಾ ಬಂದಿದ್ದ ರಾಜಕೀಯ ಪಕ್ಷಗಳು ಇವತ್ತು ನಮ್ಮ ನಾಡಿನ ರೈತರಿಗೆ ಯಾವ ರೀತಿಯಲ್ಲಿ ನೆರವಾಗುತ್ತಾರೆ ಎಂಬದು ಈಗ ಗೊತ್ತಾಗಲಿದೆ.

ತಮಿಳುನಾಡು ರಾಜಕೀಯ ಮಾಡುತ್ತಿದೆ
ತಮಿಳುನಾಡಿನಲ್ಲಿ ಆಡಳಿತರೂಢ ಮತ್ತು ವಿಪಕ್ಷಗಳಿಗೆ ಅಲ್ಲಿನ ಮತದಾರರನ್ನು ಸಂತೃಪ್ತಗೊಳಿಸಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಅದು ಕಾವೇರಿ ನೀರು ಬಿಡುವಂತೆ ಕರ್ನಾಟಕದ ಮೇಲೆ ಒತ್ತಡ ಹೇರುವುದು ಮತ್ತು ಆ ಮೂಲಕ ರಾಜಕೀಯ ಮಾಡುವುದಾಗಿದೆ. ಆದರೆ ನಮ್ಮ ರಾಜ್ಯದ ರಾಜಕಾರಣಿಗಳು ಅವರ ಮೇಲೆ ಇವರು, ಇವರ ಮೇಲೆ ಅವರು ಗೂಬೆ ಕೂರಿಸುವುದರಲ್ಲಿಯೇ ಸಮಯ ಕಳೆಯುತ್ತಾರೆಯೇ ವಿನಃ ಒಟ್ಟಾಗಿ ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸದಿರುವುದು ಇಂದಿನ ಪರಿಸ್ಥಿತಿ ಕಾರಣವಾಗಿದೆ.
ನಮ್ಮ ರಾಜಕೀಯ ಪಕ್ಷಗಳಿಗೆ ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದು ಕೊಡಬಹುದು ಎಂಬುದರ ಬಗ್ಗೆಯಷ್ಟೆ ಚಿಂತೆಯಾಗಿದೆ. ಆ ಗೆಲುವಿಗೆ ಕಾವೇರಿ ಜಲವಿವಾದವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆಯೇ ವಿನಃ ಅದರಾಚೆಗೆ ಆಡುತ್ತಿರುವುದೆಲ್ಲವೂ ನಾಟಕದಂತೆ ಕಾಣಿಸುತ್ತಿದೆ. ಈ ಹಿಂದೆಯೆ ಸರ್ಕಾರ ಸರ್ವ ಪಕ್ಷ ಸಭೆ ಕರೆದು ಎಲ್ಲರ ತೀರ್ಮಾನ ಪಡೆದು ಮುಂದುವರೆದಿದ್ದರೆ ನಮ್ಮ ರಾಜ್ಯಕ್ಕೆ ಇವತ್ತಿನ ಸಂಕಷ್ಟ ಎದುರಾಗುತ್ತಿರಲಿಲ್ಲ.

ನೀರಾವರಿ ಸಚಿವರ ಉದ್ದಟತನದ ಮಾತು
ಮುಂಗಾರು ಆರಂಭದಲ್ಲಿ ಮಳೆ ಸುರಿಯದಿದ್ದರೂ ಆಗಸ್ಟ್ ನಂತರ ಚೆನ್ನಾಗಿ ಮಳೆಯಾಗುತ್ತದೆ. ಹೀಗಾಗಿ ಯಾವುದೇ ತೊಂದರೆಯಾಗಲಾರದು ಎಂಬ ನಿರೀಕ್ಷೆಯಲ್ಲಿ ರಾಜ್ಯದಿಂದ ನೀರು ಹರಿಸಲಾಗಿತ್ತು. ಈ ವೇಳೆ ಇಲ್ಲಿನ ರೈತರ, ಕನ್ನಡಪರ ಸಂಘಟನೆಗಳ ಪ್ರತಿಭಟನೆಗೂ ಸೊಪ್ಪು ಹಾಕಲಿಲ್ಲ. ಬದಲಿಗೆ ಹೋರಾಟಗಾರರಿಗೆ ಮೇಕೆದಾಟು ಪಾದಯಾತ್ರೆ ಮಾಡುವಾಗ ಎಲ್ಲಿ ಹೋಗಿದ್ದರು ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ನೀರಾವರಿ ಸಚಿವರು ಉದ್ದಟತನ ತೋರಿದ್ದರು.
ಅತ್ತ ಮಳೆ ಬಾರದೆ, ಇತ್ತ ಜಲಾಶಯದಲ್ಲಿ ನೀರಿನ ಮಟ್ಟ ಇಳಿಮುಖವಾಗಿ ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆಯೇ ಸರ್ಕಾರಕ್ಕೆ ಬಿಸಿ ಮುಟ್ಟಲಾರಂಭಿಸಿತು. ಜೊತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ನೀರು ಬಿಡುವಂತೆ ಸೂಚನೆ ನೀಡಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇಷ್ಟರಲ್ಲೇ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯದ ಜನತೆ ಮುಂದೆ ಹೇಳಿಕೆ ನೀಡಿದ್ದರೂ ನೀರು ಹರಿಸಲಾಗಿತ್ತು. ಈಗ ಸುಪ್ರೀಂಕೋರ್ಟ್ ನೀರು ಹರಿಸುವಂತೆ ಆದೇಶ ನೀಡಿದೆ.
ಸಂಕಷ್ಟ ನಿಭಾಯಿಸುವುದು ಹೇಗೆ?
ಸರ್ಕಾರ ನೀರು ಹರಿಸಲೇ ಬೇಕಾಗಿದೆ. ಇದನ್ನು ಖಂಡಿಸಿ ಹೋರಾಟಗಳು ದೊಡ್ಡ ಮಟ್ಟದಲ್ಲಿ ನಡೆಯುವುದಂತು ಖಚಿತ. ಇದೆಲ್ಲವನ್ನು ಸರ್ಕಾರ ಹೇಗೆ ನಿಭಾಯಿಸುತ್ತದೋ ಗೊತ್ತಿಲ್ಲ. ಆದರೆ ಕರ್ನಾಟಕಕ್ಕೆ ಅನ್ಯಾಯವಾಗಿದ್ದಂತು ನಿಜ. ಮುಂದೆ ಬೇಸಿಗೆಯ ದಿನಗಳು ಹತ್ತಿರವಾಗುತ್ತಿರುವಂತೆಲ್ಲ ನೀರಿಗೆ ಹಾಹಾಕಾರ ಶುರುವಾಗಲಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಕಟ್ಟೆಗಳು ಒಣಗಲಾರಂಭಿಸಿವೆ. ರೈತರು ಬೆಳೆ ಬೆಳೆಯುವುದಿರಲಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಸ್ಥಿತಿ ಎದುರಾಗುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ.
ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಬರದ ಪರಿಸ್ಥಿತಿ ಎದುರಾಗಿತ್ತು. ಕೆರೆ ಕಟ್ಟೆಗಳು ಒಣಗಿತ್ತು. ಕೆಆರ್ ಎಸ್ ಜಲಾಶಯ ಭರ್ತಿಯಾಗದೆ ಸಂಕಷ್ಟ ಎದುರಾಗಿತ್ತು. ಅದೇ ಪರಿಸ್ಥಿತಿ ಮತ್ತೆ ಎದುರಾಗಿದೆ. ಲೋಕ ಸಭಾ ಚುನಾವಣೆ ಹೊಸ್ತಿಲಲ್ಲಿ ಬರದ ಪರಿಸ್ಥಿತಿ ರಾಜ್ಯದಲ್ಲಿದೆ. ಹೀಗಿರುವಾಗ ನಮ್ಮನ್ನು ಆಳುವ ನಾಯಕರು ಯಾವ ರೀತಿಯಲ್ಲಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications