Prajwal Revanna: ಪ್ರಜ್ವಲ್ ರೇವಣ್ಣ ಪ್ರಕರಣ ಬಿಜೆಪಿ, ಜೆಡಿಎಸ್ ಗೆಲುವಿಗೆ ತೊಡಕಾಗುತ್ತದಾ?
ಕರ್ನಾಟಕದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆಗಳು ಮುಗಿದಿವೆ. ಇನ್ನೇನು ಎರಡನೇ ಹಂತದ ಚುನಾವಣೆಗಳು ಮೇ 7 ರಂದು ನಡೆಯಲಿವೆ. ಇದೇ ದಿನ ದೇಶದಲ್ಲಿ ಮೂರನೇ ಹಂತದ ಚುನಾವಣೆಗಳು ನಡೆಯಲಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಸಾಧನೆಯನ್ನು ರಿಪೀಟ್ ಮಾಡುವ ಕನಸನ್ನು ಬಿಜೆಪಿ ಹೊಂದಿದೆ. 2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಗೆದ್ದು ಕೊಂಡಿತ್ತು. ಇದೇ ಸಾಧನೆಯನ್ನು ಪುನಃ ಮಾಡುವ ಆಸೆಯೊಂದಿಗೆ ಕಮಲ ಪಡೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದೆ. ಅಂದಹಾಗೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

ಬಿಜೆಪಿ- ಜೆಡಿಎಸ್ ಮೈತ್ರಿ
2019ರ ಲೋಕಸಭಾ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಕೆಸರು ಎರೆಚುತ್ತಾ ಸಾಗಿದ ಪಕ್ಷಗಳು ಇಂದು ವೇದಿಕೆಯ ಮೇಲೆ ಕೈ ಕೈ ಹಿಡಿದುಕೊಂಡು ಮತ ಕೇಳುತ್ತಿವೆ. ಇದೆಲ್ಲಾ ರಾಜಕೀಯ ಪಡಸಾಲೆಯಲ್ಲಿ ಕಾಮನ್. ಆದರೆ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರಜ್ವಲ್ ರೇವಣ್ಣ ಪ್ರಕರಣ ನುಂಗಲಾರದ ತುತ್ತಾಗಿದೆ.
ಎಸ್‌ಐಟಿ ರಚನೆ
ಈ ಹಗರಣವನ್ನು ಬೆಳಕಿಗೆ ತರುವುದು ವಿಭಿನ್ನ ರಾಜಕೀಯ ಪರಿಣಾಮಗಳನ್ನು ಉಂಟುಮಾಡಬಹುದು. ಇದು ಜೆಡಿಎಸ್ ಮತ್ತು ಬಿಜೆಪಿಗೆ ಪ್ರತ್ಯೇಕವಾಗಿ, ಪರಿಣಾಮ ಬೀರಬಹುದು.
ಈ ಸಂಪೂರ್ಣ ಪ್ರಕರಣದ ತನಿಖೆಗಾಗಿ ಕರ್ನಾಟಕ ಸರ್ಕಾರ ಎಸ್‌ಐಟಿಯನ್ನು ರಚಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ರಾಸ ಲೀಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ವಿಚಾರ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ತೊಡಕಾಗಬಹುದು ಎನ್ನಲಾಗುತ್ತಿದೆ.

ಇಮೇಜ್‌ಗೆ ಧಕ್ಕೆ
ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ನ ಪ್ರಭಾವ ಅಷ್ಟಾಗಿ ಇಲ್ಲದೆ ಇರುವುದು ನಿಜ. ಆದರೆ ಈ ಭಾಗದಲ್ಲಿ ಇನ್ನು ಚುನಾವಣೆಗಳು ನಡೆಯಬೇಕಿದೆ. 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಇದೇ ಮೇ 7 ರಂದು ನಡೆಯಲಿದೆ. ಪ್ರಜ್ವಲ್ ಪ್ರಕರಣ ಈ ಎರಡೂ ಪಕ್ಷಗಳ ಇಮೇಜ್‌ಗೆ ಧಕ್ಕೆ ತಂದಿದೆ. ಈಗಾಗಲೇ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ಅಮಾನತ್ತು ಮಾಡಲಾಗಿದೆ.
ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್ ಬಿಜೆಪಿ ಭದ್ರ ಕೋಟೆಯಲ್ಲಿ ಮತಬೇಟೆ ನಡೆಸಲು ಮುಂದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಬಾರಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ಬಿಜೆಪಿಗೆ ಪೆನ್ ಡ್ರೈವ್ ಪ್ರಕರಣ ತೊಡಕಾಗುತ್ತಾ ಎಂಬುದಕ್ಕೆ ಜೂನ್ 4 ರಂದು ಉತ್ತರ ಸಿಗಲಿದೆ.
ಅಮಿತ್ ಶಾ ಗುಡುಗು
ಮೇ 1 ರಂದು ನಡೆದ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ, ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಅಲ್ಲದೆ ಅವರ ಪಕ್ಷ ಇಂತಹ ಕೃತ್ಯ ಎಸಗಿದವರ ಪರ ನಿಲ್ಲುವುದಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಶಾ ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ್ದರು. ಅಲ್ಲದೆ ಚುನಾವಣೆಗಳು ಮುನ್ನವೇ ಕಾಂಗ್ರೆಸ್ ಸರ್ಕಾರ ಏಕೆ ಇವರ ವಿರುದ್ಧ ಕ್ರಮವನ್ನು ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
ಮೊದಲ ಹಂತದ ಚುನಾವಣೆಗಳು ಕರ್ನಾಟಕದಲ್ಲಿ ಮುಗಿದಿದ್ದು, ಈ ಭಾಗದಲ್ಲಿ ಒಕ್ಕಲಿಗರ ಪ್ರಾಭಲ್ಯ ಹೆಚ್ಚಾಗಿದೆ. ಹಳೆಯ ಮೈಸೂರು ಭಾಗದ 14 ಕ್ಷೇತ್ರಗಳಲ್ಲಿ ಚುನಾವಣೆಗಳು ಮುಗಿದಿವೆ. ಉಳಿದ 14 ಕ್ಷೇತ್ರಗಳ ಚುನಾವಣೆ ಮೇ 7 ರಂದು ನಡೆಯಲಿದೆ. ಈ ಭಾಗದಲ್ಲಿ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದೆ. ಕರ್ನಾಟಕದ ಅತಿ ದೊಡ್ಡ ಸಮುದಾಯ ಎಂಬ ಹೆಗ್ಗಳಿಕೆಗೆ ಲಿಂಗಾಯತ ಸಮುದಾಯಕ್ಕಿದೆ.












Click it and Unblock the Notifications