Government employee: HRMS ಕೆಜಿಐಡಿ ಪಾಲಿಸಿ ಸರಿಪಡಿಸುವ ಮಾಹಿತಿ
ಬೆಂಗಳೂರು, ಫೆಬ್ರವರಿ 27; ಕರ್ನಾಟಕದ ಸರ್ಕಾರಿ ನೌಕರರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣವಾಗಿ ಗಣಕೀಕರಣ ಮಾಡುವ ಕಾರ್ಯವು ಪ್ರಗತಿಯಲ್ಲಿದೆ. ಇದರಲ್ಲಿ ಪ್ರಸ್ತುತ ವಿಮಾದಾರರಿಗೆ ಆನ್‌ಲೈನ್ ಮೂಲಕ ಸೇವೆಯನ್ನು ನೀಡಲು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ತಪ್ಪಾಗಿ ನಮೂದಾಗಿರುವ ಕೆ.ಜಿ.ಐ.ಡಿ. ಪ್ರಥಮ ಪಾಲಿಸಿ ಸಂಖ್ಯೆಯನ್ನು ಸರಿಪಡಿಸಲು ಅವಕಾಶ ನೀಡಲಾಗಿದೆ.
ಈ ಕುರಿತು ಡಾ. ಪಿ. ಸಿ. ಜಾಫರ್, ಸರ್ಕಾರದ ಕಾರ್ಯದರ್ಶಿ (ಆಯವ್ಯಯ ಮತ್ತು ಸಂಪನ್ಮೂಲಗಳು) ಆರ್ಥಿಕ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ತಪ್ಪಾಗಿ ನಮೂದಾಗಿರುವ ಕೆ.ಜಿ.ಐ.ಡಿ. ಪ್ರಥಮ ಪಾಲಿಸಿ ಸಂಖ್ಯೆಯನ್ನು ಸರಿಪಡಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಅದರಲ್ಲಿ ಪ್ರಸ್ತುತ ವಿಮಾದಾರರಿಗೆ online ಮೂಲಕ ಸೇವೆಯನ್ನು ನೀಡಲು ಪ್ರಾರಂಭಿಸಲಾಗಿದೆ. ಈ ಸಂಬಂಧ ಗಣಕೀಕೃತ ಮಾಹಿತಿಯಲ್ಲಿನ ವಿಮಾದಾರರ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆಯ ದತ್ತಾಂಶವನ್ನು ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿರುವ ವಿಮಾದಾರರ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆಯ ದತ್ತಾಂಶದೊಂದಿಗೆ ಪರಿಶೀಲಿಸಲಾಗಿ ಈ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.

* ರಾಜ್ಯ ಸರ್ಕಾರದ ವಿವಿಧ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಅಧಿಕಾರಿ/ ನೌಕರರ ಪ್ರಕರಣಗಳಲ್ಲಿ ಪ್ರಥಮ ಕೆ.ಜಿ.ಐ.ಡಿ, ಪಾಲಿಸಿ ಸಂಖ್ಯೆಯನ್ನು ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ನಮೂದಿಸದೆ ಇತರ ಸಂಖ್ಯೆಯನ್ನು ನಮೂದಿಸಿ ವೇತನವನ್ನು ಸೆಳೆಯಲಾಗುತ್ತಿದೆ.
* ಕೆಲವು ಅಧಿಕಾರಿ/ ನೌಕರರ ಪ್ರಕರಣಗಳಲ್ಲಿ ಇತರೆ ವಿಮಾದಾರರ ಪ್ರಥಮ/ ತರುವಾಯದ ಪಾಲಿಸಿ ಸಂಖ್ಯೆಯನ್ನು ಪ್ರಥಮ ಪಾಲಿಸಿ ಸಂಖ್ಯೆಯನ್ನಾಗಿ ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ನಮೂದಾಗಿರುವುದು ಕಂಡುಬರುತ್ತಿದೆ.
* ಕೆಲವು ಅಧಿಕಾರಿ/ ನೌಕರರ ಪ್ರಕರಣಗಳಲ್ಲಿ ವಿಮಾ ಪಾಲಿಸಿಗಳಲ್ಲಿ ನಮೂದಿಸಿರುವ ಜನ್ಮ ದಿನಾಂಕ ಹಾಗೂ ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ನಮೂದಿಸಿರುವ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಿರುವುದು ಕಂಡುಬರುತ್ತಿದೆ.
ಇದರಿಂದಾಗಿ ವಿಮಾದಾರರ ವೇತನದಲ್ಲಿ ಕಟಾವಣೆ ಮಾಡಲಾಗಿರುವ ವಿಮಾ ಕಂತು ಹಾಗೂ ಸಾಲದ ಕಂತುಗಳ ಮಾಹಿತಿಯು ವಿಮಾದಾರರ ಖಾತೆಗೆ ಜಮಾವಣೆಗೊಂಡಿರುವುದಿಲ್ಲ. ಅದರಿಂದ ವಿಮಾ ಕಂತುಗಳು ಹಾಗೂ ಸಾಲದ ಕಂತುಗಳು ಬಾಕಿ ಎಂದು ಪರಿಗಣಿಸಲಾಗುತ್ತಿದೆ. ಇಂತಹ ವಿಮಾದಾರರು ವಿಮಾ ಇಲಾಖೆಯಿಂದ ನೀಡಲಾಗುತ್ತಿರುವ ಆನ್‌ಲೈನ್ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ವಿಮಾ ಇಲಾಖೆಯೂ ಸಹ ವಿಮಾದಾರರ ಹಕ್ಕು ಪ್ರಕರಣಗಳನ್ನು (ಫಲಪ್ರದ, ಮರಣಜನ್ಯ ಹಾಗೂ ವಿಮಾತ್ಯಾಗ ಮೌಲ್ಯ) ಸಕಾಲದಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಹೆಚ್. ಆರ್. ಎಂ. ಎಸ್. ನಿರ್ದೇಶನಾಲಯವು ಇಎಸ್ಎಸ್ (Employee Self Service) ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. https://hrmsess.karnataka.gov.in/login/loadLoginPage ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಲ್ಲಿ ಎಲ್ಲಾ ಸರ್ಕಾರಿ ನೌಕರರು ಸದರಿ ಸೇವೆಯಲ್ಲಿ ಲಭ್ಯವಿರುವ ವೇತನ ಪತ್ರ/ ಚೀಟಿಯನ್ನು ಪಡೆಯಲು, ಕರ್ನಾಟಕ ಆರೋಗ್ಯ ಸಂಜೀವಿನಿ ಸೇವೆಯಡಿ ತಮ್ಮ ಕುಟುಂಬದ ಸದಸ್ಯರುಗಳನ್ನು ನೋಂದಾಯಿಸಲು, ತಮ್ಮ ಎಲ್ಲಾ ಕೆ.ಜಿ.ಐ.ಡಿ ಪಾಲಿಸಿಗಳ ಮಾಹಿತಿಯನ್ನು ಪರಿಶೀಲಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ.
ಇದರಿಂದ ತಮ್ಮ ಎಲ್ಲಾ ಪಾಲಿಸಿಗಳ ಸರಿಯಾದ ವಿವರಗಳನ್ನು ಹೆಚ್‌ಆರ್‌ಎಂಎಸ್-2 ನಲ್ಲಿ ದಾಖಲಿಸಲು ಅನುಕೂಲವಾಗುವುದಲ್ಲದೇ, ತಮ್ಮ ಕೆಜಿಐಡಿ ಪಾಲಿಸಿಗಳ ಸರಿಯಾದ ಮಾಹಿತಿಯ ಸಾಫ್ಟ್ ಪ್ರತಿಯನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಪಾಲಿಸಿಯ ವ್ಯವಹಾರಗಳು ಕೆ.ಜಿ.ಐ.ಡಿ, ಖಜಾನೆ ಹಾಗೂ ಹೆಚ್. ಆರ್. ಎಂ. ಎಸ್. ನಲ್ಲಿ ಸುಗಮವಾಗಿ ಸಾಗಲು ಅನುಕೂಲವಾಗುತ್ತದೆ. ಆದ್ದರಿಂದ ಈ ಕಾರ್ಯವನ್ನು ಸುಗಮವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ವಿಮಾ ಇಲಾಖೆಯಿಂದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ವಿಮಾಧಿಕಾರಿಯನ್ನಾಗಲೀ ಅಥವಾ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ. ಶ್ರೀಧರ ಹಳ್ಳಿಕೇರಿ (9380067461). [email protected]. ಲ್ಯಾಂಡ್ ಲೈನ್ ಸಂಖ್ಯೆ 080-22536132.
ಈ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುವಾಗುವಂತೆ ಎಲ್ಲಾ ಇಲಾಖೆಗಳು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ, ಮೊದಲ ಕೆ.ಜಿ.ಐ.ಡಿ. ಪಾಲಿಸಿಯನ್ನು ಹೊರತುಪಡಿಸಿ ಇತರ ಸಂಖ್ಯೆಯನ್ನು ನಮೂದಿಸಲಾಗಿರುವ ಪ್ರಕರಣಗಳ ಇಲಾಖಾವಾರು ಮಾಹಿತಿಯನ್ನು ಗುರುತಿಸಿದ್ದು, ಸದರಿ ಮಾಹಿತಿಯನ್ನು ಜಿಲ್ಲಾ ವಿಮಾಧಿಕಾರಿಗಳ ಮೂಲಕ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ತಿಳಿಸಲು ಕ್ರಮವಹಿಸಲಾಗಿದೆ.
ಅಲ್ಲದೆ ಸದರಿ ಮಾಹಿತಿಯನ್ನು ವಿಮಾ ಇಲಾಖೆಯ ಸೇವಾ ವೆಬ್‌ಸೈಟ್- https://kgidonline.karnataka.gov.in/kgid-note ರಲ್ಲಿಯೂ ಪ್ರಕಟಿಸಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಪ್ರಕರಣಗಳಲ್ಲಿ ವಿಮಾ ಇಲಾಖೆಯಿಂದ ನೀಡಲಾಗಿರುವ ಪ್ರಥಮ ಮೂಲ ವಿಮಾ ಪತ್ರ (Original Policy Bond) ದಲ್ಲಿರುವ ಪಾಲಿಸಿ ಸಂಖ್ಯೆಯನ್ನೇ ಕಡ್ಡಾಯವಾಗಿ ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ಅಳವಡಿಸಲು ಮತ್ತು ವಿಮಾ ಪತ್ರಗಳಲ್ಲಿ ಹಾಗೂ ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ವ್ಯತ್ಯಾಸವಿರುವ ಜನ್ಮ ದಿನಾಂಕ ಹಾಗೂ ಇತರ ಅವಶ್ಯ ಮಾಹಿತಿಯನ್ನು ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ವಿಮಾದಾರರಿಗೆ ಮತ್ತು ಡಿಡಿಓ/ ಇಲಾಖಾ ಮುಖ್ಯಸ್ಥರು/ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.












Click it and Unblock the Notifications