Government Employee: ಸರ್ಕಾರಿ ನೌಕರರ ವಿರುದ್ಧ ದೂರು, ವಿಚಾರಣೆ ಹೇಗೆ ನಡೆಯಲಿದೆ?
ಬೆಂಗಳೂರು, ಅಕ್ಟೋಬರ್ 13: ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ದೂರುಗಳು ಸಲ್ಲಿಕೆಯಾದಾಗ ಅವುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ದೂರು ಬಂದಾಗ ಸರ್ಕಾರಿ ಅಧಿಕಾರಿ/ ನೌಕರರನ್ನು ಹೇಗೆ ವಿಚಾರಣೆ ನಡೆಸಬೇಕು, ಪ್ರಾಥಮಿಕ ವಿಚಾರಣೆ ಹೇಗೆ? ಎಂಬ ಕುರಿತು ಸಹ ನಿಯಮಗಳಿವೆ, ಅವುಗಳ ವಿವರವಾದ ಮಾಹಿತಿ ಇಲ್ಲಿದೆ.
ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ದೂರು ಹಂತ 6ರಲ್ಲಿ. 'ನಿಯಮ' ಹಾಗೂ 'ಉದ್ದೇಶ' ಗಳ ಕುರಿತಾದ ಮೌಲ್ಯಮಾಪನ ಮಾಡಬೇಕಿದೆ. ಕಾರಣ ಕೇಳುವ ನೋಟಿಸ್‌ಗೆ ನೀಡಿದ ಉತ್ತರವನ್ನು ನಿಯಮಗಳಡಿಯಲ್ಲಿ ಮೌಲ್ಯಮಾಪನ ಮಾಡಬೇಕು. ಕಾರಣ ಕೇಳುವ ನೋಟಿಸ್‌ಗೆ ಸಂಬಂಧಿಸಿದ ಅಧಿಕಾರಿ/ ನೌಕರರುಗಳು ನೀಡಿದ ಉತ್ತರವು ನಿಯಮಗಳಡಿಯಲ್ಲಿ ಸಮರ್ಥನೆ ಹೊಂದಿರುವ ಬಗ್ಗೆ ಅಥವಾ ಇಲ್ಲದಿರುವ ಬಗ್ಗೆ ಪರಿಶೀಲಿಸತಕ್ಕದ್ದು.

ಲಿಖಿತ ಉತ್ತರದಲ್ಲಿ 'ಉದ್ದೇಶ'ಪೂರ್ವಕವಾಗಿ ತಪ್ಪು ಮಾಡಿದ್ದಾರೆಯೇ? ಎಂಬುವುದನ್ನು ಪರಿಶೀಲಿಸತಕ್ಕದ್ದು. ಅಧಿಕಾರಿ/ ನೌಕರರುಗಳು ನೀಡಿದ ಉತ್ತರದಲ್ಲಿ ನಿಯಮಗಳಡಿಯಲ್ಲಿ ಸಮರ್ಥನೆ ಇಲ್ಲ ಹಾಗೂ ದುರುದ್ದೇಶಪೂರಿತ ಎಂದು ಮೇಲ್ನೋಟಕ್ಕೆ ಕಂಡುಬಂದ ಪಕ್ಷದಲ್ಲಿ ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಲು ಕ್ರಮವಹಿಸುವುದು.
ಅಧಿಕಾರಿ/ ನೌಕರ ನೀಡಿದ ಉತ್ತರ ನಿಯಮಗಳಡಿಯಲ್ಲಿ ಸಮರ್ಥನೆ ಮಾಡಿಕೊಳ್ಳುವಂತಹದ್ದಾಗಿದ್ದು ಹಾಗೂ ದುರುದ್ದೇಶಪೂರಿತ ಅಲ್ಲ ಎಂದು ಕಂಡುಬಂದ ಪಕ್ಷದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು. ಪ್ರಕರಣ ಮುಕ್ತಾಗೊಳಿಸಿದ ಆದೇಶದ ಪ್ರತಿಯಲ್ಲಿ ದೂರುದಾರರಿಗೆ ಒಂದು ಪ್ರತಿಯನ್ನು ಕಳುಹಿಸಿ ಪ್ರಕರಣ ಮುಕ್ತಾಯಗೊಳಿಸಿರುವ ಬಗ್ಗೆ ತಿಳಿಸುವುದು. ಒಂದು ವೇಳೆ ಮೇಲಾಧಿಕಾರಿಗಳ ಕಛೇರಿಗಳಿಂದ ದೂರಿನ ಪ್ರತಿ ಬಂದಿದ್ದಲ್ಲಿ, ಮುಕ್ತಾಯಗೊಳಿಸಿದ ಆದೇಶವನ್ನು ಮೇಲಾಧಿಕಾರಿಗಳ ಕಛೇರಿಗಳಿಗೆ ಒಂದು ಪ್ರತಿಯನ್ನು ಕಳುಹಿಸಿ ಪ್ರಕರಣ ಮುಕ್ತಾಯಗೊಳಿಸಿರುವ ಬಗ್ಗೆ ತಿಳಿಸುವುದು.
ದೂರಿನ ವಿಚಾರಣೆ ಹಂತ-7: ಉತ್ತರವು ಸಕ್ಷಮ ಪ್ರಾಧಿಕಾರಿಗಳಿಗೆ ಮನವರಿಕೆಯಾಗದಿದ್ದ ಪ್ರಕರಣದಲ್ಲಿ, ಪ್ರಾಥಮಿಕ ವಿಚಾರಣೆ. ಕಾರಣ ಕೇಳುವ ನೋಟಿಸ್‌ಗೆ ನೀಡಿದ ಉತ್ತರವು ಸಕ್ಷಮ ಪ್ರಾಧಿಕಾರಿಗಳಿಗೆ ಮನವರಿಕೆಯಾಗದಿದ್ದಲ್ಲಿ, ಪ್ರಕರಣದಲ್ಲಿ ದೂರಿನ ಕುರಿತು ಪ್ರಾಥಮಿಕ ವಿಚಾರಣೆಯನ್ನು ನಡೆಸುವುದು.
ಪ್ರಾಥಮಿಕ ವಿಚಾರಣೆ ನಡೆಸಲು ವಹಿಸಿಕೊಟ್ಟ, ಅಧಿಕಾರಿಯು ಸಂಬಂಧಪಟ್ಟವರನ್ನು ತಮ್ಮ ಕಛೇರಿಗೆ ನೋಟಿಸ್ ನೀಡಿ, ಕರೆಯಿಸಿ ಕಛೇರಿ ಹಂತದಲ್ಲಿಯೇ ವಿಚಾರಣೆ ನಡೆಸಬಹುದಾಗಿದೆ. ಪ್ರಾಥಮಿಕ ವಿಚಾರಣೆ ನಡೆಸಲು ವಹಿಸಿಕೊಟ್ಟ ಅಧಿಕಾರಿಯು ಸಂಬಂಧಪಟ್ಟ ಕ್ಷೇತ್ರಕ್ಕೆ ಖುದ್ದಾಗಿ ಹೋಗಿ ವಿಚಾರಣೆ ನಡೆಸುವುದು. ಆದರೆ, ದೂರುದಾರರ ಸಮ್ಮುಖದಲ್ಲಿಯೇ ವಿಚಾರಣೆ ನಡೆಸಬೇಕೆಂಬ ಕಾನೂನು ಯಾವ ನಿಯಮಾವಳಿಗಳಲ್ಲಿಯೂ ಇರುವುದಿಲ್ಲ.
ಆದಾಗ್ಯೂ, ದೂರುದಾರರಿಂದ ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವ ಪ್ರಕರಣಗಳಲ್ಲಿ ಮಾತ್ರ ದೂರುದಾರರಿಗೆ ಅಗತ್ಯ ದಾಖಲೆಗಳೊಂದಿಗೆ, ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ, ಭೌತಿಕ ವಿಚಾರಣೆ ನಡೆಸುವುದು, ಈ ಭೌತಿಕ ವಿಚಾರಣೆಗೆ ನೋಟಿಸ್ ನೀಡಲು ನಿಯಮಗಳನ್ನು ಪಾಲಿಸತಕ್ಕದ್ದು, ದೂರುದಾರರನ್ನು ಒಳಗೊಂಡಂತೆ ಸಂಬಂಧಪಟ್ಟ ವರಿಗೆ ಎರಡು ವಾರಗಳ ಕಾಲಾವಕಾಶ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ತಿಳಿಸತಕ್ಕದು.
ವಿಚಾರಣೆ ನಡೆಸುವ ಅಧಿಕಾರಿಯು, ಸಂಬಂಧಪಟ್ಟವರಿಂದ ಪಡೆದ ಮೌಖಿಕ ಹೇಳಿಕೆ ಹಾಗೂ ದಾಖಲೆಗಳ ಮೂಲಕ ಸಲ್ಲಿಸಿದ ಹೇಳಿಕೆಗಳನ್ನು ದಾಖಲಿಸಕೊಳ್ಳತಕ್ಕದ್ದು ಹಾಗೂ ಆರ್ಡರ್ ಶಿಟ್‌ದಲ್ಲಿ ನಮೂದಿಸತಕ್ಕದ್ದು. ವಿಚಾರಣೆ ನಡೆಸುವ ಸಮಯದಲ್ಲಿ ಹಾಜರಿದ್ದ, ದೂರುದಾರ, ವಾದಿ-ಪ್ರತಿವಾದಿಗಳ ರುಜುವನ್ನು ಒಂದು ಪ್ರತ್ಯೇಕ ಹಾಜರಾತಿ ವಹಿ ನಿರ್ವಹಿಸಿ ಪಡೆಯತಕ್ಕದ್ದು.












Click it and Unblock the Notifications