Nandini vs Amul : ನಂದಿನಿ ಉಳಿಸಿ ಹೋರಾಟ ಆಡಳಿತರೂಢ ಬಿಜೆಪಿಗೆ ಚುನಾವಣೆಯಲ್ಲಿ ದೊಡ್ಡ ಹೊಡೆತ ಹೇಗೆ ಗೊತ್ತೆ?
ಬೆಂಗಳೂರು, ಏಪ್ರಿಲ್. 10: ಏಪ್ರಿಲ್ 5 ರಂದು, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಕರ್ನಾಟಕ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಘೋಷಿಸಿತ್ತು. ಘೋಷಣೆ ಬೆನ್ನಲ್ಲೇ ರಾಜ್ಯದಲ್ಲಿ ಭಾರೀ ಗದ್ದಲ ಹುಟ್ಟುಹಾಕಿತು. ಅನೇಕ ರಾಜಕಾರಣಿಗಳು ಮತ್ತು ಬೆಂಗಳೂರಿನ ಜನರು ಈ ಕ್ರಮವನ್ನು ಖಂಡಿಸಿದ್ದಾರೆ.
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಬ್ರ್ಯಾಂಡ್ ನಂದಿನಿಯನ್ನು ಬೆಂಬಲಿಸಿದ್ದಾರೆ. 'ಸೇವ್ ನಂದಿನಿ' ಮತ್ತು 'ಗೋ ಬ್ಯಾಕ್ ಅಮುಲ್' ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಲು ಪ್ರಾರಂಭಿಸಿತು. ಇದರ ಜೊತೆಗೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಈ ವಿರೋಧಕ್ಕೆ ಸಾಥ್ ನೀಡಿದರು. ಆಡಳಿತರೂಡ ಭೀಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಹಾರ ಪ್ರಾರಂಭಿಸಿವೆ.

ಬಿಜೆಪಿಯು ಕರ್ನಾಟಕದ ಡೈರಿ ಬ್ರಾಂಡ್ ಅನ್ನು "ಕೊಲ್ಲುತ್ತಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ. ಮೇ 10 ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಅಮುಲ್ ಕರ್ನಾಟಕಕ್ಕೆ ಕಾಲಿಟ್ಟಿರುವುದು ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಸೇರಿ ಹಲವು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ, "ಒಂದು ರಾಷ್ಟ್ರ, ಒಂದು ಅಮುಲ್, ಒಂದು ಹಾಲು, ಒಂದು ಗುಜರಾತ್, ಎಂಬುದು ಕೇಂದ್ರ ಸರ್ಕಾರದ ಅಧಿಕೃತ ನಿಲುವು ಎಂದು ತೋರುತ್ತದೆ" ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
"ನಮ್ಮಲ್ಲಿ ಈಗಾಗಲೇ ನಂದಿನಿ ಇದೆ, ಇದು ಅಮುಲ್‌ಗಿಂತ ಉತ್ತಮ ಬ್ರಾಂಡ್ ಆಗಿದೆ. ನಮಗೆ ಯಾವುದೇ ಅಮುಲ್ ಅಗತ್ಯವಿಲ್ಲ. ನಮ್ಮ ನೀರು, ನಮ್ಮ ಹಾಲು ಮತ್ತು ನಮ್ಮ ಮಣ್ಣು ಬಲವಾಗಿದೆ" ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಪ್ರತಿಪಕ್ಷಗಳು ನಂದಿನಿ ಹಾಲು ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿವೆ ಎಂದು ಬಿಜೆಪಿ ಕೂಡ ತಿರುಗೇಟು ನೀಡಿದೆ. ಇದರ ಜೊತೆಗೆ, ಕರ್ನಾಟಕದ ಸಹಕಾರ ಸಚಿವ ಎಸ್‌ಟಿ ಸೋಮಶೇಖರ್ ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನಂದಿನಿ ಕಡಿಮೆ ಬೆಲೆಯಿಂದಾಗಿ ಅಮುಲ್‌ಗಿಂತ ಹೆಚ್ಚು ಮಾರಾಟವಾಗಲಿದೆ ಮತ್ತು ಗುಜರಾತ್ ಹಾಲಿನ ಬ್ರ್ಯಾಂಡ್ ಬರುವುದರಿಂದ ಕೆಎಂಎಫ್‌ಗೆ ಅಪಾಯವಲ್ಲ ಎಂದಿದ್ದಾರೆ.
*ಕರ್ನಾಟಕ ಚುನಾವಣೆ ಮೇಲೆ ಪರಿಣಾಮ..?*
ಈ ವಿವಾಧ ಈಗಾಗಲೇ ರಾಜಕೀಯ ತಿರುವು ಪಡೆದಿದ್ದು, ಇದಕ್ಕೆ ಜನರ ಬೆಂಬಲವು ಇದೆ. ಹೀಗಾಗಿ ಇದರಿಂದ ರಾಜಕೀಯ ಪರಿಣಾಮಗಳಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕನ್ನಡಿಗರು ನಂದಿನಿ ಬ್ರಾಂಡ್‌ನೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದು, ಇದು ಸ್ವದೇಶಿ ಮತ್ತು ಸ್ಥಳೀಯ ಬ್ರಾಂಡ್ ಬಗ್ಗೆ ಅವರು ಹೆಮ್ಮೆಪಡುತ್ತಾರೆ.
ಕೆಎಂಎಫ್ ಅನ್ನು 1974 ರಲ್ಲಿ ಸ್ಥಾಪಿಸಲಾಯಿತು. ಇದು ಅಮುಲ್ ನಂತರ ದೇಶದ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ಸಂಸ್ಥೆಯಾಗಿ ಯಶಸ್ವಿಯಾಗಿ ಬೆಳೆದಿದೆ. ವಾಸ್ತವವಾಗಿ, ದಿವಂಗತ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ನಂದಿನಿಯ ಬ್ರಾಂಡ್ ಅಂಬಾಸಿಡರ್ ಆಗಿ ಶುಲ್ಕವನ್ನು ಪಡೆಯದೆ ರಾಜ್ಯದ ರೈತರಿಗಾಗಿ ಜಾಹೀರಾತುಗಳಲ್ಲಿ ನಟಿಸಿದ್ದರು.

ಹೆಚ್ಚಿನ ಹಾಲು ಉತ್ಪಾದಕರು ಹಳೆಯ ಮೈಸೂರು ಪ್ರದೇಶದವರಾಗಿದ್ದು, ಇದು ಒಕ್ಕಲಿಗರಿಂದ ಪ್ರಾಬಲ್ಯ ಹೊಂದಿದೆ. ಅಲ್ಲಿ ಜಾತ್ಯತೀತ ಜನತಾ ದಳ ಮತ್ತು ಕಾಂಗ್ರೆಸ್ ತಮ್ಮ ಭದ್ರಕೋಟೆಯನ್ನು ಹೊಂದಿದೆ. ಲಿಂಗಾಯತರು ಪ್ರಾಬಲ್ಯವಿರುವ ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಹಿಡಿತವಿದೆ. ಹೀಗಾಗಿ, ಬಿಜೆಪಿ ತನ್ನ ಮತದಾರರಲ್ಲಿ ಯಾವುದೇ ಭಯವನ್ನು ಹೋಗಲಾಡಿಸುವ ಸಲುವಾಗಿ ಈ ವಿಷಯವನ್ನು ಚಿಕ್ಕದು ಮಾಡಲು ಪ್ರಯತ್ನಿಸುತ್ತಿದೆ.
ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರು ಕರ್ನಾಟಕ ಹಾಲು ಮಹಾಮಂಡಳವನ್ನು (ಕೆಎಂಎಫ್) ಅಮುಲ್ ಜೊತೆ ವಿಲೀನಗೊಳಿಸುವ ಸಾಧ್ಯತೆಯ ಬಗ್ಗೆ ಮಾತನಾಡಿದಾಗಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಪಟ್ಟುಬಿಡದೆ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ರಾಜ್ಯದ ಜನರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಕನ್ನಡಿಗರು ಇದನ್ನು ತಮ್ಮ ಗುರುತನ್ನು ದುರ್ಬಲಗೊಳಿಸುವ ಕೇಂದ್ರದ ಪ್ರಯತ್ನವೆಂದು ಗ್ರಹಿಸುತ್ತಾರೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
*ಕೆಎಂಎಫ್‌ನ ಬೇಡಿಕೆ*
ಕೆಎಂಎಫ್‌ನ ನಿರ್ದೇಶಕರಲ್ಲಿ ಒಬ್ಬರಾದ ಆನಂದ್ ಕುಮಾರ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿ, "ಅಮುಲ್‌ಗಿಂತ ಉತ್ತಮ ಗುಣಮಟ್ಟದ ಹಾಲನ್ನು ಹೊಂದಿದ್ದರೂ ನಂದಿನಿ ಬ್ರಾಂಡ್‌ನ ಮಾರುಕಟ್ಟೆ ಮತ್ತು ಪ್ರಚಾರದಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ. ಅದಕ್ಕಾಗಿಯೇ #SaveNandini ಮುಖ್ಯವಾಗಿದೆ.

ಅಮುಲ್ ಹಾಲಿನ ಬಳಕೆಯು ಕೇವಲ ಶೇಕಡಾ 10 ರಷ್ಟಿದ್ದರೂ, ಅವರ ಜಾಹೀರಾತು ಶೇಕಡಾ 90 ರಷ್ಟಿದೆ. ಇದು ಕರ್ನಾಟಕದ ಹೈನುಗಾರರಿಗೆ ದೊಡ್ಡ ಸಮಸ್ಯೆಯಾಗಲಿದೆ. ನಂದಿನಿಯ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ನಾವು ದೃಢವಾದ ಜಾಹೀರಾತು ಅಭಿಯಾನವನ್ನು ಜಾರಿಗೊಳಿಸಬೇಕಾಗಿದೆ ಎಂದಿದ್ದಾರೆ.
ಅಮುಲ್‌ನಂತೆ ಹೈನುಗಾರರಿಗೂ ನಂದಿನಿ ಉತ್ಪನ್ನಗಳ ಬೆಲೆ ನಿಗದಿಗೆ ಮುಕ್ತ ಅವಕಾಶ ನೀಡಬೇಕು ಎಂದು ಆನಂದ್ ಕುಮಾರ್ ಹೇಳಿದ್ದಾರೆ. ಸಬ್ಸಿಡಿಗಾಗಿ ಅವರು ಸರ್ಕಾರದ ಮೇಲೆ ಅವಲಂಬಿತರಾಗಿರುವುದು ನಮ್ಮನ್ನು ಈ ಪರಿಸ್ಥಿತಿಗೆ ಕೊಂಡೊಯ್ಯಲು ಕಾರಣವಾಗಿದೆ. ಸರ್ಕಾರವು ಹಾಲಿನ ಮೇಲೆ ಲೀಟರ್‌ಗೆ 5 ರಿಂದ 10 ರೂ ಹೆಚ್ಚುವರಿ ನೀಡಲಿ. ಮುಂದಿನ ದಿನಗಳಲ್ಲಿ ನಾವು ಈ ವಿಷಯವನ್ನು ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಅಮುಲ್ ವಿರುದ್ಧ ಪ್ರತಿಭಟನೆಗೆ ಕರೆ ನೀಡುತ್ತೇವೆ. ಈ ಕುರಿತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಹಾಗೂ ಕೇಂದ್ರಕ್ಕೆ ಪತ್ರ ಬರೆಯಲು ಕೆಎಂಎಫ್ ಮುಂದಾಗಿದೆ.
*ಅಮುಲ್ VS ನಂದಿನಿ*
ಬೃಹತ್ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ನಗರದಲ್ಲಿ ಸುಮಾರು 24,000 ದೊಡ್ಡ ಮತ್ತು ಸಣ್ಣ ಹೋಟೆಲ್‌ಗಳನ್ನು ಪ್ರತಿನಿಧಿಸುತ್ತದೆ. ಇವರೆಲ್ಲರೂ ನಂದಿನಿಯನ್ನು ಬೆಂಬಲಿಸಿದ್ದಾರೆ. ಈ ಹೋಟೆಲ್‌ಗಳು ಪ್ರತಿದಿನ ನಂದಿನಿಯಿಂದ ಸುಮಾರು 4 ಲಕ್ಷ ಲೀಟರ್ ಹಾಲು ಮತ್ತು 50,000 ಲೀಟರ್ ಮೊಸರನ್ನು ಖರೀದಿ ಮಾಡುತ್ತವೆ.
ಈ ಸಂಘಟನೆ ಕೆಎಂಎಫ್‌ನಿಂದ ತುಪ್ಪ, ಬೆಣ್ಣೆ, ಕೋವಾ, ಪನೀರ್ ಮತ್ತು ಚೀಸ್ ಅನ್ನು ಸಹ ಖರೀದಿಸುತ್ತದೆ. ರಾಜ್ಯದ ರೈತರು ಮತ್ತು ಹಾಲು ಪೂರೈಕೆದಾರರನ್ನು ಬೆಂಬಲಿಸಲು ಇನ್ನು ಮುಂದೆ ಕೇವಲ ನಂದಿನಿ ಉತ್ಪನ್ನಗಳನ್ನು ಮಾತ್ರ ಖರೀದಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ, ನಂದಿನಿ ಬೆಂಗಳೂರಿಗೆ 70% ಕ್ಕಿಂತ ಹೆಚ್ಚು ಹಾಲನ್ನು ಪೂರೈಸುತ್ತದೆ. ಅಂದರೆ ದಿನಕ್ಕೆ ಸರಿಸುಮಾರು 33 ಲಕ್ಷ ಲೀಟರ್. ನಂದಿನಿ ಒಂದು ಲೀಟರ್ ಹಾಲಿನ ಬೆಲೆ 39 ರೂಪಾಯಿಯಿದ್ದು, ಇದು ದೇಶದ ಅತ್ಯಂತ ಕಡಿಮೆ ಬೆಲೆಯ ಹಾಲು. ಅಮುಲ್ ಪ್ರತಿ ಲೀಟರ್‌ಗೆ 54 ರೂಪಾಯಿಯಿದೆ.
ಕರ್ನಾಟಕದಲ್ಲಿ 14 ಒಕ್ಕೂಟಗಳು, 24 ಲಕ್ಷ ಹಾಲು ಪೂರೈಕೆದಾರರು ಮತ್ತು 14,000 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ ಎಂದು ಕೆಎಂಎಫ್ ಹೇಳಿದೆ. ಸುಮಾರು 22,000 ಹಳ್ಳಿಗಳಿಂದ ಪ್ರತಿ ದಿನ 8.4 ಮಿಲಿಯನ್ ಲೀಟರ್ ಹಾಲು ಬರುತ್ತದೆ ಮತ್ತು ಹಾಲು ಪೂರೈಕೆದಾರರಿಗೆ ಪ್ರತಿದಿನ ಸುಮಾರು 17 ಕೋಟಿ ರೂಪಾಯಿ ನೀಡಲಾಗುತ್ತದೆ.
ಇನ್ನು, ಕೆಎಂಎಪ್‌ಗೆ ಹೋಲಿಸಿದರೆ ಅಮುಲ್ ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚು ವಹಿವಾಟು ಹೊಂದಿದೆ. 2021-22ರಲ್ಲಿ ನಂದಿನಿ ಸುಮಾರು 20,000 ಕೋಟಿ ರೂಪಾಯಿ ವಹಿವಾಟು ನಡೆಸಿದ್ದರೆ ಅಮುಲ್ ಸುಮಾರು 61,000 ಕೋಟಿ ರೂಪಾಯಿ ವಹಿವಾಟು ನಡೆಸಿದೆ.











Click it and Unblock the Notifications