ಕರ್ನಾಟಕದಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಎಷ್ಟು ತೆರಿಗೆ ವಿನಾಯತಿ
ಧಾರವಾಡ, ಮಾರ್ಚ್ 14: ದಿ ಕಾಶ್ಮೀರ್ ಫೈಲ್ಸ್ ಹಿಂದಿ ಸಿನಿಮಾಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗುಜರಾತ್, ಹರ್ಯಾಣ, ಮಧ್ಯಪ್ರದೇಶದಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯತಿ ಘೋಷಿಸಲಾಗಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಮೇಲಿನ ಮನರಂಜನಾ ತೆರಿಗೆಯನ್ನು ತೆಗೆದು ಹಾಕಿರುವುದಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ದಿ ಕಾಶ್ಮೀರ ಫೈಲ್ಸ್ ಚಲನಚಿತ್ರ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದಲ್ಲಿ ಪ್ರಕಟಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚಿತ್ರ ಹಿಂದಿಯಲ್ಲಿದ್ದು, ನಾನು ನೋಡುವುದಿಲ್ಲ ಎಂದಿದ್ದಾರೆ.
ಈ ಚಿತ್ರಕ್ಕೆ ಜಿಎಸ್‍ಟಿ ವಿನಾಯಿತಿ
ದಿ ಕಾಶ್ಮೀರ ಫೈಲ್ಸ್ ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರವು ತನ್ನ ಪಾಲಿನ ರಾಜ್ಯ ಜಿಎಸ್‍ಟಿಯನ್ನು ವೀಕ್ಷಕರಿಗೆ ವಿಧಿಸದಿರಲು ಸಿನೆಮಾ ಪ್ರದರ್ಶಕರಿಗೆ ಸೂಚಿಸಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಧಾರವಾಡ ಜಿಲ್ಲೆಯ ಸಿನೆಮಾ, ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ಟಿಕೇಟ್‍ನಲ್ಲಿ ಶೇ.9 ರಿಯಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ. ಉಳಿದ ಜಿಲ್ಲೆಗಳಿಂದಲೂ ಇದೇ ರೀತಿ ಆದೇಶ ಜಾರಿಗೆ ಬರಲಿದೆ.

ಮುಖ್ಯಮಂತ್ರಿಯವರ ನಿರ್ದೇಶನದ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಸಿನೆಮಾ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳ ನೊಂದಾಯಿತ ತೆರಿಗೆ ಪಾವತಿದಾರರು ವೀಕ್ಷಕರು ಹಾಗೂ ಗ್ರಾಹಕರಿಗೆ ರಾಜ್ಯದ ಪಾಲಿನ ಶೇ.9 ಜಿಎಸ್‍ಟಿ ವಿಧಿಸಬಾರದು, ಈ ಹಣವನ್ನು ಸರ್ಕಾರ ಭರಿಸಲಿದೆ.
ಟಿಕೆಟ್ ಮೇಲೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಸಂಗ್ರಹಿಸಿರುವುದಿಲ್ಲ ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿಸಿರಬೇಕು. ಈ ಆದೇಶವು ಇಂದು ಮಾರ್ಚ್ 14 ರಿಂದ ಮುಂದಿನ ಆರು ತಿಂಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ.
ಸಿನೆಮಾ, ಮಲ್ಟಿಪ್ಲೆಕ್ಸ್ ಮಂದಿರಗಳ ಮಾಲೀಕರು ರಾಜ್ಯ ಜಿಎಸ್‍ಟಿ ಮರುಪಾವತಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರ್ಕಾರ ಪ್ರಕಟಿಸಲಿದೆ. ಜಿಎಸ್‍ಟಿ ಅಧಿಕಾರಿಗಳು ಈ ಆದೇಶ ಜಾರಿಗೊಳಿಸಿ ವರದಿ ನೀಡಲು ಸೂಚಿಸಲಾಗಿದೆ.












Click it and Unblock the Notifications