ಜೆಡಿಎಸ್ ಕಾರ್ಯಕರ್ತರನ್ನು ಕಾಡುತ್ತಿರುವ ಕೆಟ್ಟ ಕುತೂಹಲǃ
ಬೆಂಗಳೂರು, ಜುಲೈ 05: 2018ರ ವಿಧಾನಸಭೆ ಚುನಾವಣೆಗಾಗಿ ಭರದಿಂದ ಸಿದ್ಧತೆ ನಡೆಸಿರುವ ಜೆಡಿಎಸ್ ನಲ್ಲಿ ಒಂದು ಗೊಂದಲ ಬಹುದಿನಗಳಿಂದ ಕೊರೆಯುತ್ತಲೆ ಇದೆ.
ದೇವೇಗೌಡರ ಕುಟುಂಬದಿಂದ ಈ ಬಾರಿ ಎಷ್ಟು ಮಂದಿ ಕಣಕ್ಕಿಳಿಯುತ್ತಾರೆ ಎಂಬ ಕುತೂಹಲದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.
ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾಲ್ವರು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಾಸನ ಜಿಲ್ಲೆಯ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ಅದರೆ, ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಬೆಂಗಳೂರಿನ ಕಾರ್ಯಕರ್ತರು ಹೇಳುತ್ತಿದ್ದಾರೆ.

ಈ ಮೊದಲು ಎಚ್.ಡಿ. ಕುಮಾರಸ್ವಾಮಿ,ಎಚ್.ಡಿ. ರೇವಣ್ಣ ಮಾತ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ರೇವಣ್ಣ ಆವರ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯಕ್ಕೆ ಬರಲು ಆಸಕ್ತಿ ಹೊಂದಿದ್ದು, ಈ ಚುನಾವಣೆಯಲ್ಲಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.
ರೇವಣ್ಣ ಅವರ ಪತ್ನಿ ಭವಾನಿ ಅವರನ್ನು ಕಣಕ್ಕಿಳಿಸುವಂತೆ ಬೇಲೂರಿನ ಕಾರ್ಯಕರ್ತರಿಂದ ಭಾರಿ ಒತ್ತಡ ಬಂದಿದೆ. ಆದರೆ, ಭವಾನಿ ಅವರ ರಾಜಕೀಯ ಪ್ರವೇಶಕ್ಕೆ ದೊಡ್ಡ ಗೌಡರು ಎಂದೋ ಬ್ರೇಕ್ ಹಾಕಿದ್ದಾರೆ. ಈಗ ಪ್ರಜ್ವಲ್ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ದೊಡ್ಡಗೌಡರ ಬಳಿ ಬೇಡಿಕೆ ಇಟ್ಟಿದ್ದು, ಒತ್ತಡಕ್ಕೆ ಮಣಿದಿದ್ದಾರೆ ಎಂಬ ಸುದ್ದಿ ಯಿದೆ.
ಇನ್ನು ಚನ್ನಪಟ್ಟಣದಲ್ಲಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂಬ ಜೆ.ಡಿ.ಎಸ್. ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ. ಒಟ್ಟಾರೆ, ಗೌಡರ ಕುಟುಂಬದಿಂದ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಅನಿತಾ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಕ್ಷೇತ್ರಗಳು ಬದಲಾಗುವ ಸಾಧ್ಯತೆ ನಿಚ್ಚಳವಾಗಿವೆ.












Click it and Unblock the Notifications