ಹಳೆ ಮೈಸೂರು: ಜೆಡಿಎಸ್ ಭದ್ರಕೋಟೆಯಲ್ಲಿ "ಕನಕಪುರ ಬಂಡೆ" ಸದ್ದು ಮಾಡಿದ್ದು ಹೇಗೆ?, ಇಲ್ಲಿದೆ ವಿವರ

ಬೆಂಗಳೂರು, ಮೇ, 16: ರಾಷ್ಟ್ರೀಯ ಪಕ್ಷಗಳ ನಡುವೆ ಸದಾ ಹೋರಾಟ ಮಾಡುತ್ತಾ ಕೆಲವೊಮ್ಮೆ ಕಿಂಗ್ ಮೇಕರ್ ಆಗಿಯೂ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿರುವ ಜೆಡಿಎಸ್ ಪಕ್ಷ ಪ್ರತಿ ಚುನಾವಣೆಯಲ್ಲಿಯೂ ಸ್ಥಾನಗಳನ್ನು ಹಾಗೂ ನಾಯಕರನ್ನು ಕಳೆದುಕೊಳ್ಳುತ್ತಾ ಬಂದಿದೆ. ಅದರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಭದ್ರಕೋಟೆಯಾಗಿದ್ದ ಹಳೆ ಮೈಸೂರು ಕಾಂಗ್ರೆಸ್‌ ಪಾಲಾಗಿದೆ. ಇದರೊಂದಿಗೆ ಎಚ್.ಡಿ.ಕುಮಾರಸ್ವಾಮಿ ಬದಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ನಾಯಕನನ್ನಾಗಿ ಒಕ್ಕಲಿಗರು ಒಪ್ಪಿಕೊಂಡರಾ ಎಂಬ ಚರ್ಚೆ ಶುರುವಾಗಿದೆ.

ಹಳೆ ಮೈಸೂರಿನಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದ್ದನ್ನು ನೋಡಿದರೆ ಎಲ್ಲೋ ಒಂದು ಕಡೆ ಆ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜವೇ ಆಗಿದೆ. ಮಂಡ್ಯ, ರಾಮನಗರ, ಮೈಸೂರು ಮತ್ತು ಹಾಸನದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗುತ್ತಿರುವುದು ಜೆಡಿಎಸ್‌ನ ವರ್ಚಸ್ಸು ಕುಸಿಯಲು ಕಾರಣವಾಗಿದೆ. ಜೆಡಿಎಸ್‌ನಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರಮುಖ ನಾಯಕರಾಗಿದ್ದು, ಅವರೇ ಐಕಾನ್ ಆಗಿದ್ದಾರೆ. ಆದರೆ ಪಕ್ಷದ ಸೋಲು ಅವರನ್ನು ಕಂಗೆಡುವಂತೆ ಮಾಡಿದೆ.

How did DK Shivakumar Become Political Icon in JDS Stronghold Old Mysuru Region

ಎಚ್.ಡಿ.ದೇವೇಗೌಡರ ನಂತರ ಒಕ್ಕಲಿಗ ನಾಯಕನಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಎಲ್ಲೋ ಒಂದು ಕಡೆ ಜೆಡಿಎಸ್ ಎಂದರೆ ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿಯೂ ಇತ್ತು. ಹೀಗಾಗಿಯೇ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಗಟ್ಟಿಯಾಗಿ ನೆಲೆಯೂರಿತ್ತು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರಿದ್ದು, ಅವರೆಲ್ಲರೂ ದೇವೇಗೌಡರ ಕುಟುಂಬವನ್ನು ಬೆಂಬಲಿಸುತ್ತಾ ಬಂದಿದ್ದರು.

"ಕೈ", ಕಮಲವನ್ನು ಕಟ್ಟಿಹಾಕಿದ್ದ ಜೆಡಿಎಸ್

ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಹಾಸನ, ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್ ಇತ್ತೀಚೆಗಿನ ವರ್ಷಗಳಲ್ಲಿ ಭದ್ರವಾಗಿತ್ತು. ಈ ವ್ಯಾಪ್ತಿಯ ನಾಯಕರು ಪಕ್ಷವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದರು. ಅದರಲ್ಲೂ 2018ರ ಚುನಾವಣೆಯಲ್ಲಿ ರಾಮನಗರ, ಮಂಡ್ಯ, ಮೈಸೂರು, ಹಾಸನದಲ್ಲಿ ಜೆಡಿಎಸ್ ತಳಮಟ್ಟದಿಂದ ಸಂಘಟನೆ ಆಗುವುದರೊಂದಿಗೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಕಟ್ಟಿಹಾಕಿತ್ತು.

ಹಳೇ ಮೈಸೂರು ಭಾಗದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ವಿರೋಧಿಗಳಾಗಿದ್ದು, ತಳಮಟ್ಟದಿಂದ ಅಂದರೆ ಗ್ರಾಮಪಂಚಾಯಿತಿಯಿಂದಲೂ ಇದೆರಡು ಪಕ್ಷಗಳು ತೀವ್ರ ಪೈಪೋಟಿ ನಡೆಸಿಕೊಂಡು ಬಂದಿವೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಕ್ಕಲಿಗರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಒಕ್ಕಲಿಗ ನಾಯಕನೆಂದೇ ಒಪ್ಪಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಎಲ್ಲೋ ಒಂದು ಕಡೆ ಒಕ್ಕಲಿಗರು ಡಿ.ಕೆ.ಶಿವಕುಮಾರ್ ಅವರತ್ತ ಒಲವು ತೋರಿರುವುದು ಕಂಡುಬಂದಿದೆ.

ಚುನಾವಣಾ ಪೂರ್ವದ ದಿನಗಳನ್ನು ಇಲ್ಲಿ ಸ್ಮರಿಸುವುದಾದರೆ, ಚುನಾವಣಾ ಪ್ರಚಾರದ ವೇಳೆ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರ ಸಹಕಾರ ಕೋರಿದ್ದರು. ನಿಮ್ಮ ಬೆಂಬಲದಿಂದ ಸಿಎಂ ಆಗುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಒಕ್ಕಲಿಗರೆಲ್ಲ ಒಗ್ಗಟ್ಟಾಗಿ ಒಲವು ತೋರುವಂತೆ ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಹಳೇ ಮೈಸೂರು ಭಾಗದತ್ತ ಹೆಚ್ಚಿನ ಗಮನಹರಿಸಿದ್ದರು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಅವರು ಮಾಡಿದ ಪಾದಯಾತ್ರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಚೈತನ್ಯ ತಂದುಕೊಟ್ಟಿತ್ತು. ಅಲ್ಲದೆ, ಹಳೇ ಮೈಸೂರು ಭಾಗದಲ್ಲಿ ಅವರ ವರ್ಚಸ್ಸನ್ನು ವೃದ್ಧಿಸುವಂತೆ ಮಾಡಿತು.

ಇದಾದ ಬಳಿಕವೂ ಹಳೇ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಕ್ರಿಯವಾಗಿ ಕಾಣಿಸಿಕೊಳ್ಳಲಾರಂಭಿಸಿದರು. ಒಕ್ಕಲಿಗರು ಕೂಡ ಡಿ.ಕೆ.ಶಿ ಅವರ ನಾಯಕತ್ವವನ್ನು ನಿಧಾನವಾಗಿ ಒಪ್ಪಿಕೊಳ್ಳಲಾರಂಭಿಸಿದರು. ತಮ್ಮ ಸಮುದಾಯದ ನಾಯಕ ಮುಖ್ಯಮಂತ್ರಿ ಆಗುವುದನ್ನು ನೋಡುವ ಬಯಕೆ ಪ್ರತಿಯೊಬ್ಬ ಒಕ್ಕಲಿಗನಲ್ಲಿತ್ತು. ಹೀಗಾಗಿ ಹೆಚ್ಚಿನವರು ಜೆಡಿಎಸ್‌ನಿಂದ ದೂರವಾಗಿ ಡಿ.ಕೆ.ಶಿ ಅವರ ಕಾರಣಕ್ಕಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಹೀಗಾಗಿಯೇ ಹಳೇ ಮೈಸೂರಿನಲ್ಲಿ ಕಾಂಗ್ರೆಸ್ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು.

ಜೆಡಿಎಸ್ ಭದ್ರಕೋಟೆಗೆ ಲಗ್ಗೆಯಿಟ್ಟ ಕಾಂಗ್ರೆಸ್

ಆದರೆ ಎಲ್ಲೋ ಒಂದು ಕಡೆ ಬಹುಮತದಿಂದ ಅಧಿಕಾರ ಪಡೆಯಲು ಸಾಧ್ಯವಾಗದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಪಡೆದು ಕಿಂಗ್ ಮೇಕರ್ ಆಗಬಹುದು ಎಂಬ ಆಲೋಚನೆ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರದ್ದಾಗಿತ್ತು. ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಮತದಾರರು ತನ್ನ ಕೈ ಹಿಡಿಯುತ್ತಾರೆ ಎಂಬ ಅಚಲ ನಂಬಿಕೆಯೂ ಅವರಲ್ಲಿತ್ತು. ಹಾಗಾಗಿ ಅವರು ಹಳೇ ಮೈಸೂರಿಗಿಂತ ಹೆಚ್ಚಾಗಿ ಎಲ್ಲಿ ಪಕ್ಷದ ಪ್ರಾಬಲ್ಯ ಇಲ್ಲವೋ ಅಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡಿದ್ದರು.

ಹಳೇ ಮೈಸೂರು ಜೊತೆಗೆ ಇತರೆ ಕಡೆಯೂ ಪಕ್ಷ ಸಂಘಟನೆಯಾದರೆ ಅದರಿಂದ ಹೆಚ್ಚಿನ ಸ‍್ಥಾನಗಳನ್ನು ಪಡೆಯಬಹುದು ಎಂಬುದು ಎಚ್.ಡಿ.ಕುಮಾರಸ್ವಾಮಿ ಅವರ ಆಲೋಚನೆಯಾಗಿತ್ತು. ಆದರೆ ಹಳೇ ಮೈಸೂರು ತಮ್ಮ ಭದ್ರಕೋಟೆಯಾಗಿರುವುದರಿಂದ ಇಲ್ಲಿಯವರು ತಮ್ಮ ಕೈಹಿಡಿಯಲಿರುವುದರಿಂದ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬ ನಂಬಿಕೆ ಹೊಂದಿದ್ದರು.

ಆದ್ದರಿಂದ ಈ ಕಡೆಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಇದರೊಂದಿಗೆ ಸರ್ವ ಜನಾಂಗದ ಶಾಂತಿಯ ತೋಟದ ಮಂತ್ರ ಜಪಿಸುತ್ತಾ ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲ ವರ್ಗದ ಜನರ ಮತ ಸೆಳೆಯುವ ಪ್ರಯತ್ನವನ್ನು ಮಾಡಿದ್ದರು. ಅಷ್ಟರಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಹಳೇ ಮೈಸೂರಿನ ಜೆಡಿಎಸ್ ಭದ್ರಕೋಟೆಗೇ ಲಗ್ಗೆಯಿಟ್ಟಾಗಿತ್ತು.

ಜೆಡಿಎಸ್‌ನ ಮುಂದಿನ ನಿರ್ಧಾರ ಏನು?

ಕಾಂಗ್ರೆಸ್ ಮತ್ತು ಬಿಜೆಪಿ ಹಳೇ ಮೈಸೂರು ಕಡೆಗೆ ಹೆಚ್ಚಿನ ಒಲವು ತೋರಿ ಸಂಘಟನಾತ್ಮಕ ಕೆಲಸ ಮಾಡಿದ ಪರಿಣಾಮ ಜೆಡಿಎಸ್‌ನ ಹೆಚ್ಚಿನ ಮತಗಳನ್ನು ಕಸಿದುಕೊಳ್ಳಲು ಎರಡು ಪಕ್ಷಗಳಿಗೆ ಅನುಕೂಲವಾಯಿತು. ಜಡಿಎಸ್ ಮತಗಳನ್ನು ಕಾಂಗ್ರೆಸ್‌ಗಿಂತಲೂ ಬಿಜೆಪಿ ಕಸಿದುಕೊಂಡಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಜೆಡಿಎಸ್‌ಗೆ ಎರಡು ರಾಷ್ಟ್ರೀಯ ಪಕ್ಷಗಳು ಕೂಡ ಎದುರಾಳಿಗಳಾಗಿದ್ದು, ಈ ಎರಡು ಪಕ್ಷಗಳನ್ನು ಬದಿಗೆ ತಳ್ಳಿ ಮತ್ತೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತಾ ಎಂಬ ಪ್ರಶ್ನೆ ಮೂಡಿದೆ. ಇದೆಲ್ಲದರ ನಡುವೆ ಹಳೆ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಒಕ್ಕಲಿಗರು ತಮ್ಮ ನಾಯಕನನ್ನಾಗಿ ಒಪ್ಪಿಕೊಂಡರೆ ಮುಂದೆ ಜೆಡಿಎಸ್ ಕಥೆ ಏನು? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+