caste census: ಜಾತಿ ಗಣತಿ ವರದಿಯ ಮೂಲ ಪ್ರತಿ ಕಳವು ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರವೇನು?
ಜಾತಿ ಗಣತಿ ವರದಿ ಎಂಬ ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ ಸಿಲುಕಿದೆ. ವಿಪಕ್ಷಗಳು ಕೂಡ ಈ ವರದಿ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿವೆ. ಜಾತಿ ಗಣತಿಯ ಮೂಲ ಪ್ರತಿಯೇ ಕಣ್ಮರೆಯಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಅಲ್ಲದೆ ಈ ವರದಿಯ ಮೂಲ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರ ಬಳಿಯೇ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಆರೋಪಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಮೂಲ ಪ್ರತಿ ಮುಖ್ಯಮಂತ್ರಿಗಳ ಬಳಿಯಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮತ್ತೊಮ್ಮೆ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಅಶೋಕ್ ಅವರು ಎಂದಾದರೂ ಸತ್ಯವನ್ನು ಹೇಳಿದ್ದಾರಾ? ಮೂಲ ಪ್ರತಿ ನನ್ನ ಬಳಿ ಇರಲು ಹೇಗೆ ಸಾಧ್ಯ? ರಾಹುಲ್ ಗಾಂಧಿಯವರಿಗೆ ನಾವು ಯಾವುದೇ ಪತ್ರ ಬರೆದಿಲ್ಲ, ಆದರೆ ಅವರೊಂದಿಗೆ ಚರ್ಚೆ ಮಾಡಿಯೇ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವರದಿ ಮಂಡಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಯಾರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ, ಜೋರಾಗಿ ಮಾತನಾಡಲಿಲ್ಲ. ಸಮೀಕ್ಷೆಯನ್ನು ಓದಿಕೊಂಡು ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗಿದೆ. ಸಚಿವರು ಅಭಿಪ್ರಾಯ ತಿಳಿಸಿದ ನಂತರ ಪುನ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಯಾವ ಜಾತಿಗೂ ಅನ್ಯಾಯವಾಗಬಾರದು ಎನ್ನುವುದು ನಮ್ಮ ಸರ್ಕಾರದ ಉದ್ದೇಶ. ಇದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ. ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿದ್ದರೂ ಬಡವ ಬಡವನಾಗಿಯೇ ಉಳಿಯಬೇಕೆ? ಸಮಾನತೆ ಬೇಡವೇ, ಜಾತಿಗೆ ಅಂಟಿಕೊಂಡೇ ಇರಬೇಕೆ? ಹಿಂದುಳಿದವರಿಗೆ, ಮುಸ್ಲಿಂಮರಿಗೆ ಮಾತ್ರವಲ್ಲದೆ ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರಿಗೆ ಶಿಕ್ಷಣ ಸಿಗಬೇಕು, ಸಾಮಾಜಿಕ ಆರ್ಥಿಕ ಶಕ್ತಿ ತುಂಬಬೇಕು. ಇದೇ ನಮ್ಮ ಗುರಿ. ಇದು ಸಾಮಾಜಿಕ, ಶೈಕ್ಷಣಿಕ ಗಣತಿಯ ಆಶಯ ಎಂದು ಹೇಳಿದ್ದಾರೆ.
ಮೂಲ ಪ್ರತಿ ನಾಪತ್ತೆ ನಿಗೂಢ!
ಕಳೆದು ಹೋಗಿರುವ ಜಾತಿ ಜನಗಣತಿ ವರದಿಯ ಮೂಲಪ್ರತಿ ಇನ್ನೂ ಪತ್ತೆಯಾಗಿಲ್ಲ. ಮೂಲ ಜಾತಿಗಣತಿಯಲ್ಲೇನಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಇಷ್ಟೆಲ್ಲಾ ನಿಗೂಢಗಳು ಗೂಡಾಗಿರುವ ಜಾತಿಗಣತಿ ವರದಿಯನ್ನ ಈಗ ತರಾತುರಿಯಲ್ಲಿ ಮುನ್ನೆಲೆಗೆ ತರಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ಎಲ್ಲಕ್ಕಿಂತ ನಿಗೂಢವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದ್ದಾರೆ.

ಜಾತಿ ಗಣತಿ ರಾಜಕೀಯ ಫಸಲಿಗೆ ಹೊಂಚು ಹಾಕಿರುವ ಸಿದ್ದರಾಮಯ್ಯನವರೇ, ಸತ್ಯವನ್ನೇ ಹೇಳಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ತಾಕೀತು ಮಾಡಿದ್ದಾರೆ. ಅತೀ ಹಿಂದುಳಿದ 2A ಪ್ರವರ್ಗದಲ್ಲಿ ಸಿಂಹಪಾಲು ಬೆಣ್ಣೆ ನುಂಗಿದ ಭೂಪರು ಯಾರು? ಕಿರುಬೆರಳ ತುದಿಯಲ್ಲೇ ದತ್ತಾಂಶವಿದೆ. ನೀವು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವೇ? ಸತ್ಯಮೇವ ಜಯತೇ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮಗೂ ಗೊತ್ತು, 2A ಪ್ರವರ್ಗದಲ್ಲಿ 101 ಜಾತಿಗಳಿವೆ. ಶೇ 15% ಮೀಸಲು ಪಾಲು ಇದೆ. ಈ ಪಾಲಿನಲ್ಲಿ ಅತಿ ಹೆಚ್ಚು ಪಾಲು ನುಂಗಿದವರು ಯಾರು ದೇವ್ರು? ಈ ನುಂಗುವಿಕೆಯಲ್ಲಿಯೂ ನಿಮ್ಮ ಪಾತ್ರವೇನು ಸ್ವಾಮಿ? ಸತ್ಯ ಹೇಳಿ. ಕಳೆದ 15ರಿಂದ 20 ವರ್ಷಗಳಲ್ಲಿ A B C D ಗ್ರೂಪ್‌ಗಳಲ್ಲಿ ನಡೆದಿರುವ ನೇಮಕಾತಿ, ವೃತ್ತಿಪರ ಕೋರ್ಸ್ ಪ್ರವೇಶ, ಇನ್ನಿತರೆ ಎಲ್ಲ ಸೌಲಭ್ಯಗಳ ಅಂಕಿ ಅಂಶ ಸುಳ್ಳು ಹೇಳುವುದಿಲ್ಲ ಅಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.
ಭ್ರಷ್ಟ ಕರ್ನಾಟಕ ಸರ್ಕಾರ ಎಷ್ಟರ ಮಟ್ಟಿಗೆ ಬೇಜವಾಬ್ದಾರಿ ಎನ್ನುವುದಕ್ಕೆ ಇಲ್ಲಿದೆ ಸುಸ್ಪಷ್ಟ ನಿದರ್ಶನ. ಈ ಹಿಂದೆ ಜಾತಿಗಣತಿಯನ್ನು ಮಾಡಿ ಕಾಂತರಾಜ್ ಆಯೋಗ ಸಲ್ಲಿಸಿದ್ದ ಜಾತಿಗಣತಿ ವರದಿ ನಾಪತ್ತೆಯಾಗಿದೆಯಂತೆ. ಸಿಎಂ ಸಿದ್ದರಾಮಯ್ಯ ಅವರೇ ನಿಜಕ್ಕೂ ಕಾಂತರಾಜ್ ಆಯೋಗ ಸಲ್ಲಿಸಿದ್ದ ಜಾತಿಗಣತಿ ವರದಿ ನಾಪತ್ತೆಯಾಗಿದೆಯೋ ಅಥವಾ ನಿಮ್ಮ ವಂಧಿಮಾಗದರು ಎಲ್ಲಾದರೂ ಅಡಗಿಸಿ ಇಟ್ಟಿದಾರೋ ಎಂಬುದನ್ನು ಪತ್ತೆ ಹಚ್ಚಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
10 ವರ್ಷಗಳ ಹಿಂದೆ ಆರಂಭವಾದ ಸಿಎಂ ಸಿದ್ದರಾಮಯ್ಯನವರ ಜಾತಿ ಜನಗಣತಿ ಎಂಬ ಬೃಹನ್ನಾಟಕ ಮೆಗಾ ಸೀರಿಯಲ್ ರೀತಿ ಇನ್ನೂ ಮುಂದುವರೆಯುತ್ತಲೇ ಇದೆ. ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಶೂನ್ಯತೆ ಬಗ್ಗೆ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರುವ ಜನಾಕ್ರೋಶದ ಕಿಚ್ಚಿನಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನ ಮುನ್ನೆಲೆಗೆ ತಂದಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶದ ಜ್ವಾಲೆ ಕಡಿಮೆಯಾಗುವ ತನಕ ಜಾತಿ ಜನಗಣತಿ ಜಪ ಮಾಡುತ್ತಲೇ ಇರುವ ನಿರ್ಧಾರ ಮಾಡಿದಂತಿದೆ ಎಂದು ದೂರಿದೆ.
ಜಾತಿ ಜನಗಣತಿ ಸಮೀಕ್ಷೆಯಲ್ಲಿ ಸಾಲು ಸಾಲು ಎಡವಟ್ಟು!
ಸಿಎಂ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಕಾಟಾಚಾರಕ್ಕೆ ನಡೆಸಿದ ಜಾತಿ ಜನಗಣತಿ ಸಮೀಕ್ಷೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿತ್ತು. ಅವ್ಯವಸ್ಥೆಯ ಗೂಡಾಗಿತ್ತು ಎನ್ನುವುದಕ್ಕೆ ಅಂದಿನ ಪತ್ರಿಕಾ ವರದಿಗಳೇ ಸಾಕ್ಷಿ. ಜಾತಿ ಜನಗಣತಿಗಾಗಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿಗಳಿಗೆ ಗಣತಿ ಅರ್ಜಿ ತುಂಬುವ ಬಗ್ಗೆ ತರಬೇತಿಯನ್ನೇ ನೀಡಿರಲಿಲ್ಲ. ಗಣತಿ ಅರ್ಜಿಯಲ್ಲಿದ್ದ 56 ಕಾಲಂಗಳಲ್ಲಿ ಸಮೀಕ್ಷೆದಾರರು ಪ್ರಾಮಾಣಿಕವಾಗಿ ತುಂಬುತಿದ್ದು ಕೇವಲ 8-10 ಕಾಲಂ ಮಾತ್ರ. ಉಳಿದ ಕಾಲಂಗಳ ಭರ್ತಿಗೆ ಮಾನದಂಡ ಅಂದಾಜು. ಉಪಜಾತಿ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಗೊಂದಲದಿಂದ ಕಾಲಂ ಖಾಲಿ ಇತ್ತು ಎಂದು ಟೀಕಿಸಿದೆ.
ಬಿಸಿಲು, ಮಳೆಯ ನೆಪವೊಡ್ಡಿ ಸಮೀಕ್ಷೆದಾರರು ಮನೆಮನೆಗೂ ತೆರಳಿ ಸಮೀಕ್ಷೆ ನಡೆಸಲು ಹಿಂದೇಟು. ಹಲವೆಡೆ 2011ರ ಜನಗತಿಯ ನಕಲು ಪ್ರತಿಗಳನ್ನು ಆಧಾರವನ್ನಾಗಿಟ್ಟುಕೊಂಡು ಮಕ್ಕಳ ಕೈಯಲ್ಲಿ ಜಾತಿ ಗಣತಿ ಅರ್ಜಿ ಭರ್ತಿ. ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ. ಸಮೀಕ್ಷೆಗೆ ಒಳಪಟ್ಟವರ ಸಹಿಯನ್ನೂ ಮಕ್ಕಳೇ ಹಾಕುತ್ತಾರೆ. ಅಗತ್ಯವಿದ್ದಲ್ಲಿ ಹೆಬ್ಬೆಟ್ಟನ್ನು ಸಹ ಮಕ್ಕಳೇ ಒತ್ತುತ್ತಾರೆ ಎಂದು ದೂರಿದೆ.
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂಬಂತೆ ಇಷ್ಟೆಲ್ಲ ಎಡವಟ್ಟುಗಳಿರುವ ಜಾತಿ ಜನಗಣತಿ ವರದಿಯನ್ನ ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಏನಿದೆ? ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅಲುಗಾಡುತ್ತಿರುವ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಜನಗಣತಿ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಯಾಕೆ ಬಿತ್ತುತ್ತೀರಿ? ಎಂದು ಹರಿಹಾಯ್ದಿದೆ.












Click it and Unblock the Notifications