ಹೊಸಕೋಟೆ ಉಪ ಕದನ; ಬಿಜೆಪಿ, ಎಂಟಿಬಿಗೆ ಕಷ್ಟದ ಸಮಯ!
Recommended Video
ಬೆಂಗಳೂರು, ನವೆಂಬರ್ 11 : ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಬಿಜೆಪಿ ಟಿಕೆಟ್‌ಗಾಗಿ ಇಬ್ಬರು ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದು, ಎಂಟಿಬಿ ನಾಗರಾಜ್‌ಗೆ ಹಿನ್ನಡೆಯಾಗಿದೆ.
15 ಕ್ಷೇತ್ರಗಳ ಉಪ ಚುನಾವಣೆಗೆ ಸೋಮವಾರ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 18ರ ತನಕ ಅವಕಾಶವಿದೆ. ಹೊಸಕೋಟೆ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಟಿಕೆಟ್ ಯಾರಿಗೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಕಾಂಗ್ರೆಸ್ ಪದ್ಮಾವತಿ ಸುರೇಶ್ ಉಪ ಚುನಾವಣೆ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕ್ಷೇತ್ರದಲ್ಲಿ ಅವರು ಪ್ರಚಾರವನ್ನು ಆರಂಭಿಸಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಜೆಡಿಎಸ್ ಕ್ಷೇತ್ರದ ಚುನಾವಣಾ ಕಣಕ್ಕಿಳಿಯುವ ಕುರಿತು ಇನ್ನೂ ಚಿಂತನೆ ನಡೆಸುತ್ತಿದೆ.
ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಶರತ್ ಬಚ್ಚೇಗೌಡ ಘೋಷಣೆ ಮಾಡಿದ್ದಾರೆ. ಉಪ ಚುನಾವಣೆ ವಿಚಾರದಲ್ಲಿ ಚಿಕ್ಕಬಳ್ಳಾಪುರ ಸಂಸದ ಬಿ. ಎನ್. ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ನಡುವೆ ಅಸಮಾಧಾನ ಉಂಟಾಗಿದೆ.

ನವೆಂಬರ್ 15ರಂದು ನಾಮಪತ್ರ
ಹೊಸಕೋಟೆ ಕ್ಷೇತ್ರದಿಂದ ಉಪ ಚುನಾವಣೆಗೆ ನವೆಂಬರ್ 15ರ ಶುಕ್ರವಾರ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತು ಎಂಟಿಬಿ ನಾಗರಾಜ್‌ಗೆ ಸಂಕಷ್ಟ ಎದುರಾಗಿದೆ. ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್‌ಗಾಗಿ ಇಬ್ಬರ ನಡುವೆ ಪೈಪೋಟಿ ಜೋರಾಗಿದೆ.

ಯಡಿಯೂರಪ್ಪ ಮೊರೆ
ಮಾಜಿ ಸಚಿವ ಎಂಟಿಬಿ ನಾಗರಾಜ್ ಎದುರಾಳಿಗಿಂತ ಶರತ್ ಬಚ್ಚೇಗೌಡ ಅವರಿಂದಲೇ ಹೆಚ್ಚು ಹೆದರಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದು, ಶರತ್ ಬಚ್ಚೇಗೌಡರನ್ನು ಹೇಗಾದರೂ ತಡೆಯಿರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮೊರೆ ಹೋಗಿದ್ದಾರೆ. ಬಿಜೆಪಿಯ ಈ ಒಗಳವೇ ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆ ಇದೆ.

ಬಚ್ಚೇಗೌಡರು ಅಸಹಾಯಕ
ಚಿಕ್ಕಬಳ್ಳಾಪುರ ಸಂಸದ ಬಿ. ಎನ್. ಬಚ್ಚೇಗೌಡ ಅಸಹಾಯಕರಾಗಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನನ್ನ ಮಗ ಮನೆಗೆ ಬರುತ್ತಿಲ್ಲ. ನಾನು ಬಿಜೆಪಿ ಸಂಸದನಾಗಿದ್ದೇನೆ. ನನ್ನ ಮಗನ ತೀರ್ಮಾನ ಅವರಿಗೆ ಬಿಟ್ಟ ವಿಚಾರ. ನಾನು ಮಗನ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ. ಅವನ ಪರವಾಗಿ ಪ್ರಚಾರವನ್ನೂ ಮಾಡಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನಿಂದ ಬಿರುಸಿನ ಪ್ರಚಾರ
ಹೊಸಕೋಟೆ ಕ್ಷೇತ್ರಕ್ಕೆ ಪದ್ಮಾವತಿ ಸುರೇಶ್ ಕಾಂಗ್ರೆಸ್ ಅಭ್ಯರ್ಥಿ. ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಆಪ್ತರಾಗಿದ್ದ ಎಂಟಿಬಿ ನಾಗರಾಜ್ ಸೋಲಿಸಬೇಕು ಎಂದು ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ.












Click it and Unblock the Notifications