ಹನಿಟ್ರ್ಯಾಪ್ ರಾಜಕೀಯ ತಂತ್ರವೋ? ಜನನಾಯಕರ ನೈತಿಕ ಅಧಃಪತನವೋ?
ಬೆಂಗಳೂರು, ಏಪ್ರಿಲ್ 01: ರಾಜ್ಯ ಕಾಂಗ್ರೆಸ್‌ನ ಸಿದ್ದರಾಮಯ್ಯ ಪಾಳಯದಲ್ಲಿ ಸೇನಾಧೀಪತಿಯಂತೆ ಮುನ್ನಲೆಯಲ್ಲಿದ್ದುಕೊಂಡು ಸದಾ ಒಂದಲ್ಲ ಒಂದು ವಿಚಾರವನ್ನು ಪ್ರಸ್ತಾಪಿಸುತ್ತಿದ್ದ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ದಾಳ ಉರುಳಿಸುತ್ತಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣರವರು ಇದೀಗ ಮೌನಕ್ಕೆ ಜಾರಿದ್ದಾರೆ. ಸದನದಲ್ಲಿ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಬೊಬ್ಬಿರಿದಿದ್ದವರು ಇದೀಗ ಆ ಬಗ್ಗೆ ಪ್ರಸ್ತಾಪಿಸದೆ ಇರುವುದು ಮತ್ತು ಹನಿಟ್ರ್ಯಾಪ್‌ನಿಂದ ಕೊಲೆ ಸುಫಾರಿ ಕಡೆಗೆ ಇಡೀ ಪ್ರಕರಣ ಮಗ್ಗಲು ಬದಲಿಸಿದ್ದು ಎಲ್ಲವನ್ನೂ ನೋಡುತ್ತಿದ್ದರೆ ಇಡೀ ಪ್ರಕರಣ ತಾರ್ಕಿಕ ಅಂತ್ಯ ಕಾಣದೆ ಸಮಾಧಿಯಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಹನಿಟ್ರ್ಯಾಪ್ ವಿಚಾರದ ಬೆನ್ನು ಹತ್ತಿ ಹೋದರೆ ಅದು ಹಲವು ನಾಯಕರ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆಗಳಿರುವ ಕಾರಣದಿಂದಾಗಿ ಅದನ್ನು ಬಿಟ್ಟು ಕೊಲೆ ಸುಫಾರಿ ಕಡೆಗೆ ಹೆಚ್ಚಿನ ಫೋಕಸ್ ಮಾಡುತ್ತಿರುವುದು ಈಗಿನ ಬೆಳವಣಿಗೆಯಾಗಿದೆ. ಆದರೆ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಜನರಲ್ಲಿ ಕುತೂಹಲವಿದೆ. ಇದರ ಸೂತ್ರಧಾರಿಗಳು ಯಾರು? ಎಂಬುವುದನ್ನು ಅರಿಯುವ ಕಾತರವಿದೆ. ಇದು ಸದನದಲ್ಲಿ ಪ್ರಸ್ತಾಪವಾದ ವಿಚಾರವಾಗಿರುವುದರಿಂದ ಈ ಬಗ್ಗೆ ಜನರ ಮುಂದೆ ಸರ್ಕಾರ ನೈಜ ವಿಚಾರವನ್ನು ತೆರೆದಿಡಬೇಕಾಗುತ್ತದೆ. ಒಂದು ವೇಳೆ ಅದ್ಯಾವುದನ್ನು ಮಾಡದೆ ಮೌನಕ್ಕೆ ಶರಣಾದರೆ ಅದು ಪ್ರಜೆಗಳಿಗೆ ಮಾಡುವ ದ್ರೋಹವಾಗುತ್ತದೆ.

ರಾಜಕೀಯದಲ್ಲಿ ಬೇರೆ, ಬೇರೆ ರೀತಿಯ ತಂತ್ರಗಾರಿಕೆಯನ್ನು ನೋಡಿದವರಿಗೆ ಹನಿಟ್ರ್ಯಾಪ್ ಇತ್ತೀಚೆಗಿನ ಹೊಸ ರೀತಿಯ ತಂತ್ರಗಾರಿಕೆಯಾಗಿದೆ ಎನ್ನುವುದನ್ನು ಅಚ್ಚರಿಯಾಗಿ ಕಂಡರೂ ನೈತಿಕತೆಯನ್ನು ಮರೆತವರನ್ನು ಬಗ್ಗುಬಡಿಯಲು ವಿರೋಧಿಗಳು ಇಂತಹದೊಂದು ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ ಎನ್ನುವುದೇ ರಾಜಕೀಯದ ದುರಂತವಾಗಿದೆ. ಇದುವರಗೆ ಭ್ರಷ್ಟಾಚಾರದ, ಅವ್ಯವಹಾರದ, ಆರೋಪಗಳನ್ನು ಮಾಡುವುದು, ಪ್ರತಿಭಟನೆ ನಡೆಸಿ ಜನಪ್ರಿಯತೆ ಕುಗ್ಗಿಸುವ ತಂತ್ರ ಮಾಡುತ್ತಿದ್ದುದನ್ನು ನೋಡಿದವರಿಗೆ ರಾಜಕೀಯ ತಂತ್ರವಾಗಿ ಹನಿಟ್ರ್ಯಾಪ್ ನ್ನು ಕೂಡ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಂತಾಗಿದೆ.
ಎದುರಾಳಿಗಳನ್ನು ಕಟ್ಟಿಹಾಕಲು ಹನಿಟ್ರ್ಯಾಪ್?
ಪ್ರಭಾವಿ ನಾಯಕರನ್ನು ಚುನಾವಣೆಯಲ್ಲಿ ಸೋಲುವಂತೆ ಮಾಡಿ ಗೆಲುವು ಪಡೆಯುವುದು, ಇನ್ಯಾವುದೋ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡು ತೇಜೋವಧೆ ಮಾಡುವುದು ಹೀಗೆ ಹತ್ತಾರು ತಂತ್ರಗಳನ್ನು ಮಾಡುತ್ತಾ ಬಂದವರಿಗೆ ಯಾರನ್ನು ಯಾವಾಗ ಮಟ್ಟ ಹಾಕಬೇಕು, ಆತ ಬಾಯಿ ಬಿಚ್ಚದಂತೆ ಹೇಗೆ ನೋಡಿಕೊಳ್ಳಬೇಕು ಎಂಬುದಕ್ಕೆ ಹನಿಟ್ರ್ಯಾಪ್ ರಾಜಕೀಯದಲ್ಲಿ ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಎಂತಹ ದಡ್ಡರಿಗೂ ಅರ್ಥವಾಗುತ್ತದೆ. ರಾಜಕೀಯದಲ್ಲಿ ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ನೈತಿಕತೆ ಇಲ್ಲದೆ ಹೋದರೆ ಅಂತಹವರು ಹನಿಟ್ರ್ಯಾಪ್ ನಂತಹ ಬಲೆಗೆ ಬೀಳುತ್ತಾರೆ.

ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಬೊಬ್ಬೆ ಹೊಡೆಯುವ ನಾಯಕರು ಹೇಗೆ ಬಲೆಗೆ ಬಿದ್ದರು ಎಂಬುದು ಜನರಿಗೆ ಗೊತ್ತಾಗದ ವಿಚಾರವೇನಲ್ಲ. ಹೀಗಾಗಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನುವುದಾದರೆ ಯಾರು ಮಾಡಿದ್ದಾರೆ? ಏಕೆ ಮಾಡಿದ್ದಾರೆ? ಎಂಬುದರ ತನಿಖೆಯಾಗಲೇ ಬೇಕಲ್ಲವೆ? ಹೀಗೂ ರಾಜಕೀಯದಲ್ಲಿ ತಮ್ಮ ಎದುರಾಳಿಗಳನ್ನು ಸದೆಬಡಿಯಬಹುದು ಎಂಬುದು ಜನರಿಗೆ ಗೊತ್ತಾಗಲಿ. ಅದು ಬಿಟ್ಟು ಅದನ್ನು ತನಿಖೆ ಮಾಡದೆ ಸಮಾಧಿ ಮಾಡುವುದೆಷ್ಟು ಸರಿ? ಹೀಗೆಂದು ಜನವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಸಿಡಿ ಫ್ಯಾಕ್ಟರಿಯ ಮಹಾನಾಯಕ ಯಾರು?
ಹನಿಟ್ರ್ಯಾಪ್ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿಗಳು ಬಂದರೆ ಅದನ್ನು ಊಹಾಪೋಹ, ತಮಗಾಗದವರು ಮಾಡಿಸಿದ್ದಾರೆ ಎಂದೆಲ್ಲ ಕಾರಣಗಳನ್ನು ನೀಡಿ ತಳ್ಳಿಹಾಕಿ ಬಿಡಬಹುದಿತ್ತು. ಆದರೆ ಈ ವಿಚಾರ ಸದನದಲ್ಲಿ ಪ್ರಸ್ತಾಪವಾಗಿದೆ. ಜತೆಗೆ ಘನತೆವೆತ್ತ ಸಚಿವರೇ ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂಬುದನ್ನು ಹೇಳಿದ್ದಲ್ಲದೆ, ತನಿಖೆಗೂ ಒತ್ತಾಯಿಸಿರುವಾಗ ಅದು ರಾಷ್ಟ್ರಮಟ್ಟದ ಸುದ್ದಿಯಾಗಿ ಇಡೀ ದೇಶ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಮತ್ತು ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಬೆಳವಣಿಗೆ ಏನಾಗಬಹುದು ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಆದರೀಗ ಈ ಬಗ್ಗೆ ಯಾರೂ ಸೊಲ್ಲೆತ್ತದಿರುವುದನ್ನು ಗಮನಿಸಿದರೆ ದೇಶದ ಜನ ನಮ್ಮ ರಾಜಕೀಯ ನಾಯಕರನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳಿ.
ರಾಜ್ಯದ ವಿವಿಧ ಪಕ್ಷಗಳ 48ಕ್ಕೂ ಹೆಚ್ಚು ನಾಯಕರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎಂಬುದು ಸದನದಲ್ಲಿಯೇ ಪ್ರಸ್ತಾಪವಾಗಿರುವಾಗ ಆ ನಾಯಕರು ಯಾರಿರಬಹುದು ಎಂದು ತಿಳಿಯುವ ಕಾತರ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಇಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೆ ಅಷ್ಟೂ ನಾಯಕರ ಹೆಸರು ಹೊರ ಬರಲಿದೆ. ಹೀಗಾಗಿ ಮಾನ ಮರ್ಯಾದೆಗೆ ಅಂಜಿ ನಾಯಕರು ದೂರು ನೀಡುವ ಯಾವ ಪ್ರಯತ್ನಕ್ಕೂ ಕೈಹಾಕಲ್ಲ ಎಂಬುದು ಗೊತ್ತಾಗಿತ್ತಿದೆ. ಹೀಗಾಗಿ ಯಾವ ಮಹಾನಾಯಕ ಇಂತಹದೊಂದು ತಂತ್ರ ಮಾಡಿದ್ದಾನೋ ಅವನು ಮಹಾನಾಯಕನಾಗಿಯೇ ಉಳಿಯಲಿದ್ದಾನೆ. ಏಕೆಂದರೆ ಇವರೆಲ್ಲರ ಜುಟ್ಟು ಅವನ ಕೈನಲ್ಲಿ ಭದ್ರವಾಗಿರಲಿದೆ.
ಹನಿಟ್ರ್ಯಾಪ್ ರಾಜಕೀಯ ತಂತ್ರವೋ? ಅಧಃಪತನವೋ?
ಇದನ್ನು ನಮ್ಮ ರಾಜಕೀಯದ ದುರಂತ ಎನ್ನಬೇಕೋ? ಅಧಃಪತನ ಎನ್ನಬೇಕೋ ಗೊತ್ತಾಗುತ್ತಿಲ್ಲ. ಮತದಾರರು ತಮಗೊಬ್ಬ ನಾಯಕನಿರಲಿ ಎಂದು ಮತ ನೀಡಿ ಆರಿಸಿ ಕಳಿಸಿದರೆ ಜನಪ್ರತಿನಿಧಿಗಳಾದವರು ಹೀಗೆ ಮಾಡುವುದಾ? ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಒಂದು ವೇಳೆ ಜನನಾಯಕರು ಭ್ರಷ್ಟಚಾರ ಮಾಡಿದ್ದರೂ ಜನ ಸಹಿಸುತ್ತಿದ್ದರೇನೋ? ಆದರೆ ನೈತಿಕತೆಯನ್ನು ಮೀರಿದ ಕೆಲಸವನ್ನು ಮಾಡಿ ಜನರ ಮುಂದೆ ಬೆತ್ತಲಾಗಿ ಇದೀಗ ಅದನ್ನು ಅಧಿಕಾರದ ಮೂಲಕ ಮುಚ್ಚಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಲ್ಲವೆ? ಇದನ್ನು ಸಹಿಸಕ್ಕೆ ಆಗುತ್ತಾ? ದುರಂತ ಏನೆಂದರೆ ಮತ ನೀಡಿದ ತಪ್ಪಿಗೆ ಮತದಾರರು ಎಲ್ಲವನ್ನು ಸಹಿಸಿಕೊಳ್ಳಲೇ ಬೇಕಾಗಿದೆ.












Click it and Unblock the Notifications