ಆ ಸಚಿವರ ಮೇಲೆ Honey Trap: ಹನಿ ಟ್ರ್ಯಾಪ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 20: ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು . ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ಆರಗ ಜ್ಞಾನೇಂದ್ರ , ಶಾಸಕ ಸುನೀಲ್ ಕುಮಾರ್, ಸಚಿವರಾದ ಕೆ ಎನ್ ರಾಜಣ್ಣ ಅವರು ಹನಿ ಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದು, ಈ ಬಗ್ಗೆ ಉತ್ತರಿಸಲು ಕೋರಿ ಇದಕ್ಕೆ ಕಾರಣರಾದವರನ್ನು ವಜಾ ಮಾಡಬೇಕು ಹಾಗೂ ಸದನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಿ ಸದನದ ಮೌಲ್ಯವನ್ನು ಎತ್ತಿಹಿಡಿಯಬೇಕೆಂದು ಹಾಗೂ ನ್ಯಾಯಾಂಗ ತನಿಖೆಗೆ ವಿಪಕ್ಷಗಳು ಒತ್ತಾಯಿಸಿದ್ದು, ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ಮಾಡಿರುವ ಆರೋಪಕ್ಕೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ಪ್ರಕರಣದಲ್ಲಿ ಯಾರೇ ಆಗಿದ್ದರೂ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿ ಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ ಎಂದರು. ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರುಚ್ಚರಿಸಿದರು.

ಬಜೆಟ್ ಮೇಲಿನ ಚರ್ಚೆಗಳಿಗೆ ಸದನದಲ್ಲಿ ಸಿಎಂ ಉತ್ತರ
ಬಜೆಟ್ ಮೇಲಿನ ವಿರೋಧ ಪಕ್ಷದವರ ಮಾತುಗಳನ್ನು ಕೇಳಿದ್ದೇನೆ ಮತ್ತು ಓದಿದ್ದೇನೆ. ಅನೇಕರು ಬಜೆಟ್ಟನ್ನು ಅಧ್ಯಯನ ಮಾಡಲು ಪ್ರಯತ್ನಿಸಿದ್ದಾರೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ, ಅವರೆಲ್ಲರನ್ನೂ ಅಭಿನಂದಿಸುತ್ತೇನೆ.
ಸದನದಲ್ಲಿ ನಾನು ಗಮನಿಸಿದ ಹಾಗೆ 4-5 ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಚರ್ಚಿಸಲಾಗಿದೆ. ಮುಖ್ಯವಾಗಿ, 1) ರಾಜ್ಯದ ಸಾಲ ಹಾಗೂ ಆರ್ಥಿಕ ಪರಿಸ್ಥಿತಿ 2) ಗ್ಯಾರಂಟಿ ಯೋಜನೆಗಳು 3) ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ವಿಚಾರ 4) ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ 5) ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನ ಹಾಗೂ ಪ್ರದೇಶವಾರು ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ. ನಾನು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗಳಿಗೆ ಉತ್ತರ ಕೊಡುವಾಗ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನಗಳು, ಗ್ಯಾರಂಟಿ ಯೋಜನೆಗಳು ಮುಂತಾದ ವಿಚಾರಗಳ ಕುರಿತು ದೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಹಾಗಾಗಿ ಅವುಗಳಿಗೆ ಕಡಿಮೆ ಸಮಯ ಮೀಸಲಿಟ್ಟು ಉಳಿದ ವಿಚಾರಗಳಿಗೆ ತುಸು ಹೆಚ್ಚು ಸಮಯ ಕೊಟ್ಟು ಇಂದು ಉತ್ತರ ನೀಡಲಿದ್ದೇನೆ.
ನಮ್ಮ ಬಜೆಟ್ ಬಗ್ಗೆ ವಿರೋಧ ಪಕ್ಷದವರು ಏನಂದರು? ಆಡಳಿತ ಪಕ್ಷದವರು ಏನಂದರು ಹಾಗೂ ಉಳಿದೆಲ್ಲ ಜನಪ್ರತಿನಿಧಿಗಳ ಪ್ರತಿಕ್ರಿಯೆ ಹೇಗಿತ್ತು ಎನ್ನುವುದು ಒಂದು ಆಯಾಮ. ಅದಕ್ಕೆ ಈ ಸದನ ಸಾಕ್ಷಿಯಾಗಿದೆ. ಸದನದ ದಾಖಲೆಗಳಲ್ಲಿದೆ. ಎರಡನೆಯದಾಗಿ ನಮ್ಮ ಬಜೆಟ್ಟನ್ನು ಈ ಬಾರಿ ಮಾಧ್ಯಮಗಳು ಅಭೂತಪೂರ್ವವಾಗಿ ಸ್ವಾಗತಿಸಿವೆ. ಶ್ಲಾಘನೆ ಮಾಡಿವೆ. ವಿಶ್ಲೇಷಣೆಗಳನ್ನು ಬರೆದಿವೆ. ನಮ್ಮ ಬಜೆಟ್ಟನ್ನು ಅರ್ಥ ಮಾಡಿಕೊಂಡು ಜನರಿಗೆ ತಲುಪಿಸಿದ್ದಕ್ಕಾಗಿ ಮಾಧ್ಯಮಗಳನ್ನು ಅಭಿನಂದಿಸುತ್ತೇನೆ ಎಂದರು.












Click it and Unblock the Notifications