ರಾತ್ರಿ ಹನ್ನೊಂದು ಗಂಟೆ ನಂತರ ರೋಡಿಗಿಳಿದರೆ ಎಚ್ಚರ; ಗೃಹ ಸಚಿವರ ವಾರ್ನಿಂಗ್
ಬೆಂಗಳೂರು, ಡಿಸೆಂಬರ್ 24: ಬ್ರಿಟನ್ ನಲ್ಲಿ ಹೊಸ ರೂಪಾಂತರದ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಹಾಗೆಯೇ ಹೊಸ ವರ್ಷಾಚರಣೆ ಸಂದರ್ಭ ಹೆಚ್ಚು ಜನರು ಒಂದೆಡೆ ಸೇರುವುದನ್ನು ತಪ್ಪಿಸಲು ರಾಜ್ಯಾದ್ಯಂತ ಗುರುವಾರ (ಡಿ.24) ದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಡಿ.24ರಿಂದ ಜನವರಿ 2ರವೆಗೂ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ. ಈ ನಡುವೆ ರಾತ್ರಿ ಸುಖಾಸುಮ್ಮನೆ ಓಡಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹ ಸಚಿವರು ಸೂಚಿಸಿದ್ದಾರೆ. ಮುಂದೆ ಓದಿ...

11 ಗಂಟೆ ಬಳಿಕ ರಸ್ತೆಗಿಳಿದರೆ ಕಠಿಣ ಕ್ರಮ
ಗುರುವಾರದಿಂದ ರಾತ್ರಿ ಹನ್ನೊಂದು ಗಂಟೆ ಬಳಿಕ ರಸ್ತೆಗೆ ಇಳಿಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೇಕಾಬಿಟ್ಟಿ ಓಡಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಅಗತ್ಯ ಸೇವೆ ಮತ್ತು ರಾತ್ರಿ ಪಾಳಿ ಕೆಲಸ ಮಾಡುರುವವರನ್ನು ಹೊರತುಪಡಿಸಿ ಯಾರಾದರೂ ರಸ್ತೆಗಿಳಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

"ಊರುಗಳಿಗೆ ಹೋಗುವವರಿಗೆ ತೊಂದರೆಯಿಲ್ಲ"
ಶುಕ್ರವಾರ ಕ್ರಿಸ್ ಮಸ್ ರಜದೊಂದಿಗೆ ಶನಿವಾರ, ಭಾನುವಾರ ರಜಾ ಸಮಯದಲ್ಲಿ ಊರಿಗೆ ಹೋಗಲು ಮುಂದಾಗಿದ್ದವರಿಗೆ ರಾತ್ರಿ ಕರ್ಫ್ಯೂ ಗೊಂದಲ ಮೂಡಿಸಿತ್ತು. ಬಸ್ ಇರುತ್ತದೋ ಇಲ್ಲವೋ ಎಂಬ ಗೊಂದಲ ಉಂಟಾಗಿತ್ತು. ದೂರದ ಊರುಗಳಿಗೆ ಪ್ರಯಾಣ ಮಾಡುವವರಿಗೆ ಯಾವುದೇ ತೊಂದರೆಯಿಲ್ಲ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಆಟೋ ಟ್ಯಾಕ್ಸಿಗೆ ತೊಂದರೆಯಿಲ್ಲ
ಕರ್ಫ್ಯೂನಲ್ಲಿ ಸಾರಿಗೆ ಸರಕು ಸಾಗಣೆಗೆ ಯಾವುದೇ ತೊಂದರೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಜೊತೆಗೆ ಬಸ್ಸುಗಳಲ್ಲಿ ಊರು ತಲುಪುವುದು ತಡರಾತ್ರಿ ಆಗುತ್ತದೆ. ಇಲ್ಲವೇ ಬೆಳಗ್ಗಿನ ಜಾವ ಆಗಿರುತ್ತದೆ. ಹೀಗಾಗಿ ಆಟೋ-ಟ್ಯಾಕ್ಸಿ ಲಭ್ಯವಿರುತ್ತದೆ ಎಂದೂ ತಿಳಿಸಿದೆ. ದೂರದ ಸ್ಥಳಗಳಿಗೆ ಹೋಗುವ ಬಸ್ ಗಳು, ರೈಲುಗಳು ಲಭ್ಯವಿರಲಿವೆ ಎಂದು ಸ್ಪಷ್ಟನೆ ನೀಡಿದೆ.

ಸೂಕ್ತ ದಾಖಲೆ ತೋರಿಸುವುದು ಕಡ್ಡಾಯ
ಆದರೆ ಪ್ರಯಾಣ ಮಾಡಿದ್ದ ದಾಖಲೆಯಂತೆ ಪೊಲೀಸರಿಗೆ ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. ಪ್ರಯಾಣದ ನೆಪದಲ್ಲಿ ಅನಗತ್ಯ ಓಡಾಡುವವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.












Click it and Unblock the Notifications