ಪಿಎಸ್‌ಐ ಜಗದೀಶ್ ಹತ್ಯೆ : ಗೃಹ ಸಚಿವ ಜಾರ್ಜ್ ಹೇಳುವುದೇನು?
ರಾಮನಗರ, ಅಕ್ಟೋಬರ್ 19 : ಮಾಗಡಿ ತಾಲೂಕಿನ ಮಲ್ಲಾಪುರದಲ್ಲಿರುವ ಪಿಎಸ್‌ಐ ಜಗದೀಶ್ ಅವರ ಸಮಾಧಿ ಸ್ಥಳಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಸಚಿವರ ಸಲಹೆಗಾರ ಕೆಂಪಯ್ಯ ಅವರು ಸೋಮವಾರ ಭೇಟಿ ನೀಡಿ ನಮನ ಸಲ್ಲಿಸಿದರು.
ಶುಕ್ರವಾರ ಕಳ್ಳರಿಂದ ಹತ್ಯೆಯಾದ ಪಿಎಸ್ಐ ಜಗದೀಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಸಚಿವರು, 'ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುತ್ತದೆ' ಎಂದು ಹೇಳಿದರು. [ಕಳ್ಳರನ್ನು ಹಿಡಿಯಲು 5 ತಂಡ ರಚನೆ]

'ನಾನು ವಿದೇಶದಲ್ಲಿದ್ದೆ ಆದ್ದರಿಂದ ಜಗದೀಶ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ವಿಷಯ ಕೇಳಿ ತುಂಬಾ ನೋವಾಯಿತು. ಜಗದೀಶ್ ಅವರ ಕರ್ತವ್ಯ ನಿಷ್ಠೆಗೆ ನಾವು ತಲೆಬಾಗುತ್ತೇವೆ' ಎಂದು ತಿಳಿಸಿದರು. [ಜಗದೀಶ್ ಹತ್ಯೆ : ಯಾರು ಏನು ಹೇಳಿದರು?]
'ಸರ್ಕಾರದಿಂದ ಈಗಾಗಲೇ ಪರಿಹಾರ ವಿತರಣೆ ಬಗ್ಗೆ ಘೋಷಣೆ ಮಾಡಲಾಗಿದೆ. ಜಗದೀಶ್ ಅವರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತದೆ. ಹತ್ಯೆ ಮಾಡಿದ ಆರೋಪಿಗಳಿಗೆ ಕಾನೂನಿನ ಅನ್ವಯ ಶಿಕ್ಷೆಯಾಗಲಿದೆ' ಎಂದು ಜಾರ್ಜ್ ಹೇಳಿದರು. [ಜಗದೀಶ್ ಪರಿಚಯ ಓದಿ]
ಇಬ್ಬರು ವಶಕ್ಕೆ : ಜಗದೀಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಿಂದ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು, ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಮ್ಯಾಕಾನಿಕ್ ನಿಜಾಮ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಮಂಜುನಾಥ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ನಿಜಾಮ್ ಆರೋಪಿಗಳು ಕದ್ದ ಬೈಕ್‌ಗಳನ್ನು ರಿಪೇರಿ ಮಾಡುತ್ತಿದ್ದ ಮತ್ತು ಮಂಜುನಾಥ್ ಆರೋಪಿಗಳಿಬ್ಬರಿಗೆ ಸಿಮ್ ಕಾರ್ಡ್ ಕೊಡಿಸಿದ್ದ ಎಂದು ತಿಳಿದುಬಂದಿದ್ದು, ವಿಚಾರಣೆ ಮುಂದುವರೆದಿದೆ.












Click it and Unblock the Notifications