School Holiday: ಭಾರೀ ಮಳೆ ರೆಡ್ ಅಲರ್ಟ್! ಜೂ.27ರಂದು ಕರ್ನಾಟಕದ ಈ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
School Holiday Today: ಕರ್ನಾಟಕದಾದ್ಯಂತ ಮುಂಗಾರು ಮಳೆ ಮತ್ತೆ ಶುರುವಾಗಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಇನ್ನಿಲ್ಲದಂತೆ ಮಳೆ ಸುರಿಯುತ್ತಿದೆ. ಧಾರವಾಡ, ಹಾವೇರಿ, ಕೊಡಗು, ಚಿಕ್ಕಮಗಳೂರು, ಮಂಗಳೂರು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ ಹೀಗೆ ರಾಜ್ಯವ್ಯಾಪಿ ಮಳೆ ಆಗುತ್ತಿದೆ. ಇದೀಗ ಭಾರೀ ಮಳೆ ಪ್ರಯುಕ್ತ ಕರ್ನಾಟಕದ ಕೆಲವು ಜಿಲ್ಲೆಗಳ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹೌದು ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮುಂಗಾರು ಮತ್ತೆ ಮೂರನೇ ಭಾರಿಗೆ ಚುರುಕಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಗೆ 'ರೆಡ್ ಅಲರ್ಟ್' ಘೋಷಣೆ ಆಗಿದೆ. ಇಲ್ಲಿ 200 ಮಿಲಿ ಮೀಟರ್‌ಗಿಂತಲೂ ಹೆಚ್ಚಿನ ಮಳೆ ಆಗಲಿದೆ. ಅದೇ ರೀತಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿಗೆ ಭಾರೀ ಮಳೆ ಕಾರಣಕ್ಕೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ ಶಾಲೆ-ಅಂಗನವಾಡಿಗಳಿಗೆ ಜೂನ್ 27ರಂದು ರಜೆ ಘೋಷಣೆ ಮಾಡಲಾಗಿದೆ.

ಮಕ್ಕಳ ಹಿತದೃಷ್ಟಿ, ಸುರಕ್ಷತೆಯ ಮುಂಜಾಗ್ರತಾ ದೃಷ್ಟಿಯಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆ-ಅಂಗನವಾಡಿ ಕೇಂದ್ರಗಳಿಗೆ ಸ್ಥಳೀಯ ಆಡಳಿತ ರಜೆ ಘೋಷಿಸಿದೆ. ಇನ್ನು ಚಿಕ್ಕಮಗಳೂರಿನ 05 ತಾಲೂಕುಗಳ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಶುಕ್ರವಾರ (ಜೂನ್ 27ರಂದು) ರಜೆ ನೀಡಲಾಗಿದೆ. ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಶಾಲೆಗಳು ಬಂದ್ ಆಗಿರಲಿವೆ. ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಜಿಲ್ಲಾಡಳಿತ ಪೋಷಕರಿಗೆ ತಿಳಿಸಿದೆ.
ಶಾಲೆಗಳಿಗೆ ಮಳೆ ರಜೆ ನೀಡುವುದು ಏಕೆ?
ಮೇ ಅಂತ್ಯದಲ್ಲಿ ರಾಜ್ಯದಲ್ಲಿ ಬೇಸಿಗೆ ರಜೆ ಕಳೆದ ಮಕ್ಕಳು ಶಾಲೆಗೆ ತೆರಳಿದ್ದರು. ಅಲ್ಲಿಂದ ಈವರೆಗೆ ಒಟ್ಟು ಒಂದು ತಿಂಗಳಿನ ಅಂತರದಲ್ಲಿ ಮಳೆ ರಜೆ ಘೋಷಣೆಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ. ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ ಉಂಟಾಗುತ್ತದೆ. ಸಣ್ಣ ಸಣ್ಣ ಮಕ್ಕಳು ಶಾಲೆಗೆ ಬರುವಾಗ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ಕ್ರಮವಾಗಿ ಸ್ಥಳೀಯ ಆಡಳಿತ (ತಹಶೀಲ್ದಾರ್ ಇಲ್ಲವೇ ಜಿಲ್ಲಾಧಿಕಾರಿಗಳು) ರಜೆ ಘೋಷಿಸುತ್ತವೆ.
ಕರ್ನಾಟಕ ಹವಾಮಾನ ವರದಿ
ಜೂನ್ 27 & 28ರಂದು ಕರಾವಳಿ ಮೂರು ಜಿಲ್ಲೆಗಳು ಹಾಗೂ ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ಸಹ ಭಾರೀ ಮಳೆ ನಿರೀಕ್ಷೆ ಇದ್ದು 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಉಳಿದಂತೆ ಧಾರವಾಡ, ಚಿತ್ರದುರ್ಗ, ತುಮಕೂರು, ಮೈಸೂರು, ಬೆಂಗಳೂರು, ಹಾವೇರಿ ಇತರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications