Good News: ಹೋಳಿ ಪ್ರಯುಕ್ತ ಬೆಂಗಳೂರು-ಬೀದರ್-ಕಲಬುರಗಿ ರೈಲುಗಳ ಸೇವೆ ವಿಸ್ತರಣೆ, ವೇಳಾಪಟ್ಟಿ
ಬೆಂಗಳೂರು: ಹೋಳಿ ಹಬ್ಬದ ಸಡಗರಕ್ಕೆ ಸಾಥ್ ನೀಡಲು ನೈರುತ್ಯ ರೈಲ್ವೆಯು ಸಜ್ಜಾಗಿದೆ!. ಹೋಳಿ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಸಾಲು ಸಾಲು ರಜೆಗಳು ಎದುರಾಗುವ ಹಿನ್ನೆಲೆ ಬೆಂಗಳೂರಿನಿಂದ ಬೇರೆ ಬೇರೆ ಕಡೆಗಳಲ್ಲಿ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹಬ್ಬದ ಸಮಯದಲ್ಲಿ ಪ್ರಯಾಣಿಕರ ಭಾರೀ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲು ಇಲಾಖೆಯು ಆಯ್ದ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಿದೆ. ಕರ್ನಾಟಕದ ಯಾವೆಲ್ಲ ಮಾರ್ಗದ ರೈಲುಗಳು ವಿಸ್ತರಣೆ ಆಗಿವೆ, ಅವುಗಳ ಸಂಖ್ಯೆ, ಸಮಯ, ವೇಳಾಪಟ್ಟಿ ಇಲ್ಲಿದೆ.

ಮಾರ್ಚ್ 3ರಂದು ಹೋಳಿ ಹಬ್ಬ ಸಂಭ್ರಮಾಚರಣೆ ಮಾಡಲಾಗುತ್ತದೆ. ಈ ಸಂಬಂಧ ರಾಜಧಾನಿ ಬೆಂಗಳೂರಿನಿಂದ ಬೀದರ್, ಕಲಬುರಗಿ ಮತ್ತು ಸಂತ್ರಾಗಾಚಿಯಂತಹ ದೂರದ ಊರುಗಳಿಗೆ ಸಂಚರಿಸುವ ರೈಲುಗಳ ಅವಧಿಯನ್ನು 2026 ಮಾರ್ಚ್ ಅಂತ್ಯ ತಿಂಗಳಾಂತ್ಯದವರೆಗೆ ಕಾರ್ಯಾಚರಣೆ ಮುಂದುವರಿಸಲಿವೆ. ಎಸ್‌ಎಂವಿಟಿ ಬೆಂಗಳೂರು-ಬೀದರ್ ರೈಲು (06539) ಈಗ ಮಾರ್ಚ್ 29ರವರೆಗೆ ಲಭ್ಯವಿರುತ್ತದೆ. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಪ್ರಯಾಣ ಬೆಳೆಸುವವರಿಗೂ ರೈಲು ಸೇವೆ ಲಭ್ಯವಾಗಲಿದೆ.
ವಿಸ್ತರಣೆ ಆದ ರೈಲುಗಳ ವೇಳಾಪಟ್ಟಿ
1. ಬೆಂಗಳೂರು- ಬೀದರ್- ಬೆಂಗಳೂರು ಮಧ್ಯದ ದ್ವಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು (06539 / 06540) ಫೆಬ್ರವರಿ 27ಕ್ಕೆ ಅಂತ್ಯವಾಗದೇ ಮಾರ್ಚ್ 01 ರಿಂದ ಮಾರ್ಚ್ 29 ರವರೆಗೆ ಸಂಚಾರ ಮಾಡಲಿದೆ.
2. ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ- ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು (06207 / 06208) ಫೆಬ್ರವರಿಗೆ ಕೊನೆಗೊಳ್ಳದೇ 29 ರವರೆಗೆ ಸೇವೆ ನೀಡುವಂತೆ ವಿಸ್ತರಣೆ ಮಾಡಲಾಗಿದೆ.
3. ಸಂತ್ರಾಗಚಿ- ಯಲಹಂಕ- ಸಂತ್ರಾಗಚಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳು (02863 /02864) ಮಾರ್ಚ್ 5ರಿಂದ ಮಾರ್ಚ್ 28 ರವರೆಗೆ ಸೇವೆಗೆ ಲಭ್ಯ ಇರುವಂತೆ ವಿಸ್ತರಿಸಲಾಗಿದೆ.
ಹಬ್ಬಕ್ಕಾಗಿ ಊರುಗಳಿಗೆ ತೆರಳುವ ಪ್ರಮಾಣಿಕರಿಗೆ ಅನುಕೂಲ ಆಗಲಿದೆ. ಈ ವಿಶೇಷ ರೈಲುಗಳು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲಿವೆ. ಹಾಲಿ ರೈಲುಗಳ ಮೇಲಿನ ಒತ್ತಡ ಕಡಿಮೆ ಮಾಡಲಿವೆ. ವಿಸ್ತರಣೆಗೊಂಡ ರೈಲುಗಳ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು https://enquiry.indianrail.gov.in/mntes/ ಗೆ ಭೇಟಿ ನೀಡಬೇಕು. ಜೊತೆಗೆ 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು-ಬೆಳಗಾವಿ ರೈಲು ಸಮಯ ಪರಿಷ್ಕರಣೆ
ಸಾಂಸ್ಕೃತಿಕ ನಗರಿ ಮೈಸೂರು-ಉತ್ತರ ಕರ್ನಾಟಕದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ರೈಲು (17326) ಮೈಸೂರಿನಿಂದ ಈ ಮೊದಲು ಬೆಳಗ್ಗೆ 7 ಗಂಟೆಗೆ ಹೊರಡುತ್ತಿತ್ತು. ಅದರ ಸಮಯ ಪರಿಷ್ಕರಣೆ ಬಳಿಕ ಇಂದಿನಿಂದ ಬೆಳಗ್ಗೆ 08.45ಕ್ಕೆ ಸಂಚಾರ ಮಾಡಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.












Click it and Unblock the Notifications