ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಪರಿಚಯ
ಬೆಂಗಳೂರು, ಜನವರಿ 18 : ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ ಅಧಿಕಾರ ವಹಿಸಿಕೊಂಡರು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಯೋಜನೆ ರೂಪಿಸುವ ಮಹತ್ವದ ಜವಾಬ್ದಾರಿ ಅವರ ಮೇಲಿದೆ.
ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಹಿಂದಿನ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಚ್.ಕೆ.ಪಾಟೀಲ (65) ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹನುಮಂತಗೌಡ ಕೃಷ್ಣಗೌಡ ಪಾಟೀಲ (ಎಚ್.ಕೆ.ಪಾಟೀಲ) ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಗದಗ ಕ್ಷೇತ್ರದಲ್ಲಿ 77,699 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಎಚ್.ಕೆ.ಪಾಟೀಲ ಪರಿಚಯ ಓದಿ....

ಎಚ್.ಕೆ.ಪಾಟೀಲ
ಗದಗ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಬಂದಿರುವ ಹನುಮಂತಗೌಡ ಕೃಷ್ಣಗೌಡ ಪಾಟೀಲ (ಎಚ್.ಕೆ.ಪಾಟೀಲ) ಅವರು ಮೂರು ದಶಕದಿಂದ ರಾಜಕೀಯದಲ್ಲಿದ್ದಾರೆ. 2013ರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು.

ವಿವಿಧ ಖಾತೆಗಳನ್ನು ನಿಭಾಯಿಸಿದ್ದಾರೆ
ಎಚ್.ಕೆ.ಪಾಟೀಲ ಅವರು ಅನುಭವಿ ರಾಜಕಾರಣಿ. 1984 ರಿಂದ 2008ರ ವರೆಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 1993ರ ಜನವರಿಯಿಂದ 1994ರ ಡಿಸೆಂಬರ್ ತನಕ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಜವಳಿ ಖಾತೆಯ ರಾಜ್ಯ ಸಚಿವರಾಗಿದ್ದರು. 1994ರಿಂದ 1999ರ ತನಕ ಮತ್ತು 2006 ರಿಂದ 2008ರ ತನಕ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರು
1999 ರಿಂದ 2003ರ ತನಕ ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಜಲ ಸಂಪನ್ಮೂಲ ಬಳಿಕ ಕೃಷಿ ಮತ್ತು ಕಾನೂನು ಮತ್ತು ಸಂಸದೀಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 2013ರ ಚುನಾವಣೆಯ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿಯೂ ಸಚಿವರಾಗಿದ್ದರು.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ
ಬಿಎಸ್‌ಸಿ ಪದವೀಧರರಾದ ಎಚ್.ಕೆ.ಪಾಟೀಲ ಅವರು ಕೆ.ಎಚ್.ಪಾಟೀಲ ಪ್ರತಿಷ್ಠಾನ ಮತ್ತು ರೂರಲ್ ಮೆಡಿಕಲ್ ಸೊಸೈಟಿ ಮೂಲಕ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ 45 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದಾರೆ.

ಪ್ರಚಾರ ಸಮಿತಿಯ ಅಧ್ಯಕ್ಷರು
ಎಐಸಿಸಿ ಎಚ್.ಕೆ.ಪಾಟೀಲ ಅವರನ್ನು ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಯೋಜನೆ ರೂಪಿಸುವ ಮಹತ್ವದ ಜವಾಬ್ದಾರಿ ಅವರ ಮೇಲಿದೆ. ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಚುನಾವಣೆಯನ್ನು ಎದುರಿಸುತ್ತಿದೆ.












Click it and Unblock the Notifications