ಹಿರಿಯೂರು ʼಕೈʼಗೆ ಪ್ರತಿಷ್ಠೆಯ ಕಣ! ಅಭ್ಯರ್ಥಿ ಆಯ್ಕೆಗೆ ಸರ್ವೇ, ಟಿಕೆಟ್ ಯಾರಿಗೆ? ಡಿಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಭ್ಯರ್ಥಿ ಆಯ್ಕೆಗಾಗಿ ಪಕ್ಷದ ನಾಯಕರು ಸರ್ವೇ ನಡೆಸುತ್ತಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಧರ್ಮಪುರದಲ್ಲಿ ನೂತನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನಾನು ಇಲ್ಲಿಗೆ ಬಂದು ಹಾಗೇ ಹೋಗುವುವವನಲ್ಲ. ನಿಮ್ಮ ಸೇವೆಗೆ ಸಂಕಲ್ಪ ಮಾಡಿದ್ದೇನೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಬರಗಾಲ ವಿಚಾರದಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಒಂದು ರೂ. ನೀಡಿಲ್ಲ. ನಾನು ಕೆರೆಗಳಿಗೆ ನೀರು ತುಂಬಿಸಲು ಆದೇಶ ಮಾಡಿದ್ದೇನೆ.

ಅಭ್ಯರ್ಥಿ ಯಾರಾಗಬೇಕು ಎಂದು ಸರ್ವೇ ಮಾಡಿಸಿರುವೆ
ರೈತರು ನೀಡಿರುವ ಪಟ್ಟಿಯಲ್ಲಿನ ಸಮಸ್ಯೆ ಬಗೆಹರಿಸಲಾಗುವುದು. ನಾನು ಚುನಾವಣೆ ಸಮಯದಲ್ಲಿ ಮಾತ್ರ ಬಂದು ಹೋಗುವವರಲ್ಲ. ನಿಮ್ಮ ಜತೆ ಇದ್ದು ನಿಮ್ಮ ಸೇವೆ ಮಾಡುವವರು. ನಾನು ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಲ್ಲ. ಆದರೂ ಉಪಚುನಾವಣೆಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ನಾಲ್ಕು ಸರ್ವೇ ಮಾಡಿಸಿದ್ದೇನೆ. ನಿಮ್ಮ ಅಭ್ಯರ್ಥಿಯಾಗಿ ನಾನೇ ಇದ್ದೇನೆ. ಈ ಡಿ ಕೆ ಶಿವಕುಮಾರ್ ನಿಮ್ಮ ಅಭ್ಯರ್ಥಿ. ಧರ್ಮಪುರದ ಜನ ಧರ್ಮವನ್ನು ಕಾಪಾಡುವವರು, ಧರ್ಮದಿಂದ ಮತಹಾಕಿ, ನಿಮ್ಮ ಸೇವೆ ಮಾಡುವ ಪಕ್ಷವನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.
ಪ್ರತ್ಯೇಕ ತಾಲ್ಲೂಕು ರಚನೆ ಬೇಡಿಕೆ ಬಗ್ಗೆ ಪರಿಶೀಲನೆ
"ನೀವು ತಾಲ್ಲೂಕು ವಿಚಾರ ಕೇಳಿದ್ದೀರಿ. ನಿಮ್ಮ ಮನವಿ ಬಗ್ಗೆ ನಮಗೆ ಚಿಂತನೆ ಇದೆ. ಯಾವ ಹೊಬಳಿಗಳನ್ನು ಸೇರಿಸಿಕೊಂಡು ಎಷ್ಟು ಜನಸಂಖ್ಯೆಯೊಂದಿಗೆ ತಾಲ್ಲೂಕು ಮಾಡಬೇಕು ಎಂದು ನನಗೆ ಆಲೋಚನೆ ಇದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಾಗ ಏಯಿತು? ಚನ್ನಪಟ್ಟಣದಲ್ಲಿ ಕುಮಾರಣ್ಣನ ಮಗನನ್ನು ಬಲವಂತವಾಗಿ ನಿಲ್ಲಿಸಿದರು. ನಮ್ಮ ಅಭ್ಯರ್ಥಿ ಯೋಗೇಶ್ವರ್ ಅವರು 25 ಸಾವಿರ ಅಂತರದಲ್ಲಿ ಗೆದ್ದರು. ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಪುತ್ರನ ವಿರುದ್ಧ ಪೈಲ್ವಾನ್ ಪಠಾಣ್ ಅವರು ಗೆದ್ದರು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಜನ ಸೋಲಿಸಿದರು.
ಇಲ್ಲೂ ಯಾರು ಬಂದು ನಿಲ್ಲುತ್ತಾರೋ ನಿಲ್ಲಲಿ. ಯಾವುದೇ ದೊಡ್ಡ ನಾಯಕರು ಬೇಕಾದರೂ ಬಂದು ನಿಲ್ಲಲಿ. ಆದರೆ ನಿಮ್ಮ ಋಣ ತೀರಿಸಲು ನಾನು, ನಮ್ಮ ಸರ್ಕಾರ ನಿಮ್ಮ ಜತೆ ಇದೆ. ಇಲ್ಲಿರುವ ಎಲ್ಲಾ ಪಕ್ಷಗಳ ನಾಯಕರಿಗೆ ಒಂದು ಮಾತು ಹೇಳುತ್ತೇನೆ. ಆ ಪಕ್ಷ ಈಗ ಏನು ಆಗುವುದಿಲ್ಲ. ಈ ರಾಜ್ಯದಲ್ಲಿ 2028ರಲ್ಲೂ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅವರಿಗೆ ಅಧಿಕಾರ ಇದ್ದಾಗಲೇ ಏನೂ ಮಾಡಲಿಲ್ಲ, ಅಧಿಕಾರ ಇಲ್ಲದಿದ್ದಾಗ ಏನು ಮಾಡಲು ಸಾಧ್ಯ? ಎಂದು ಹಳ್ಳಿಗಳಲ್ಲಿ ಎಲ್ಲರಿಗೂ ಹೇಳಿ ನಮ್ಮ ಪಕ್ಷಕ್ಕೆ ಕೆರೆದುಕೊಂಡು ಬನ್ನಿ ಎಂದು ಕರೆ ನೀಡಿದರು.
ನನಗೆ ಕನಕಪುರದಷ್ಟೇ, ಹಿರಿಯೂರು ಮುಖ್ಯ
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದ ಕಾರಣ ಈ ಯೋಜನೆಗಳು ಜಾರಿಗೆ ಬಂದವು. ಜತೆಗೆ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಧರ್ಮಾಪುರ ಹೊಬಳಿಗಳ ಕೆರೆ ತುಂಬಿಸಿ ಈ ಭಾಗದ ರೈತರ ಬದುಕು ಬದಲಿಸುವ ಐತಿಹಾಸಿಕ ತೀರ್ಮಾನ ಮಾಡಿರುವುದು ನಿಮ್ಮ ಸರ್ಕಾರ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ನೀವು ಇಂದು ಕೊಟಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸುವೆ. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಹಿರಿಯೂರು ಕ್ಷೇತ್ರವೂ ಅಷ್ಟೇ ಮುಖ್ಯ. ನಿಮ್ಮ ಸೇವೆಗೆ ನಾನು ಬದ್ಧನಾಗಿದ್ದೇನೆ ಎಂದರು.
2,200 ಕೋಟಿ ಮೊತ್ತದ ಯೋಜನೆಗಳ ಮಂಜೂರು
ನಾನು ಹಾಗೂ ನಮ್ಮ ಸಚಿವರು ಹಿರಿಯೂರು ಕ್ಷೇತ್ರಕ್ಕೆ ಬರಿಗೈನಲ್ಲಿ ಬಂದಿಲ್ಲ. ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷಿಯನ್ನು ಕರೆತಂದಿದ್ದೇವೆ. 2200 ಕೋಟಿಯಷ್ಟು ಮೊತ್ತದ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಮೂಲಕ ಆದೇಶ ಹೊರಡಿಸಿದ್ದೇವೆ. ಪಂಚಾಯತ್ ರಾಜ್ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರು ಈ ಕ್ಷೇತ್ರದಲ್ಲಿ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ. ಪ್ರತಿ ಊರಿನಲ್ಲಿ, ಹಳ್ಳಿಗಳ ರಸ್ತೆ ಏನಾಗಬೇಕು ಎಂದು ಪಟ್ಟಿ ತಯಾರು ಮಾಡಿದ್ದೇವೆ.
ಮಾಜಿ ಶಾಸಕರಾದ ಪೂರ್ಣಿಮಾ ಅವರು ಅವರ ಪತಿ ಶ್ರೀನಿವಾಸ್ ಅವರು ನಿಮ್ಮ ಮುಂದೆ ಕೂತಿದ್ದಾರೆ. ನಾನು ಅವರ ತಂದೆ ಒಟ್ಟಾಗಿ ಕೆಲಸ ಮಾಡಿದವರು. ಹಿರಿಯೂರಿನಲ್ಲಿ ಜನರ ವಿಶ್ವಾಸ ಗಳಿಸಿ ಕೆಲಸ ಮಾಡಿದ್ದಾರೆ. ಅವರು ಈ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ ಈ ರಾಜ್ಯಕ್ಕೆ ಭವಿಷ್ಯ ಇರುವುದು ಕಾಂಗ್ರೆಸ್ ನಿಂದ ಮಾತ್ರ ಎಂದು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ನಿಮ್ಮ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸ್ನೇಹಿತ ಸುಧಾಕರ್ ಬದುಕಿದ್ದರೆ ಬಹಳ ಖುಷಿಪಡುತ್ತಿದ್ದ
"ನಾನು ಈ ಕಾರ್ಯಕ್ರಮಕ್ಕೆ ಬಹಳ ದುಖಃದಿಂದ ಬಂದಿರುವೆ. ನಾನು ಸಿಎಂ ಆಗಿರುವಾಗ ಸುಧಾಕರ್ ಇದ್ದಿದ್ದರೆ ಆತ ಎಷ್ಟು ಸಂತೋಷ ಪಡುತ್ತಿದ್ದ ಎಂಬುದಕ್ಕೆ ನಮ್ಮ ಸಹೋದ್ಯೋಗಿಗಳೇ ಸಾಕ್ಷಿ. ಆತ ಸಾಯುವ 2 ತಿಂಗಳ ಮುನ್ನ. ನಾನು ಮಂತ್ರಿಯಾಗಿ ಇಲ್ಲದಿದ್ದರೂ ಚಿಂತೆ ಇಲ್ಲ. ನನ್ನ ಸ್ನೇಹಿತ ಡಿ ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ್ದ ಸ್ನೇಹಿತ. ಆತನ ಕನಸು, ಈ ಜನರ ಮೇಲೆ ಇಟ್ಟಿದ್ದ ಪ್ರೀತಿ ಅಪಾರ. ಆತನಿಗೆ ಜಾತಿ ಧರ್ಮ ಇರಲಿಲ್ಲ. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದ. ನಾನು ಪ್ರಜಾಸೇವಕನಾಗಿ ನಿಮ್ಮ ಮುಂದೆ ನಿಂತಿರುವೆ" ಎಂದರು.
ಸಮಾಜಕಲ್ಯಾಣ ಇಲಾಖೆಯಿಂದ ಎಲ್ಲಾ ಜಾತಿ, ಸಮುದಾಯಗಳಿಗೆ ಸಂಬಂಧಿಸಿದ ಸಮುದಾಯ ಭವನಗಳನ್ನು ನಿರ್ಮಿಸಲು ಆದೇಶ ನೀಡಲಾಗಿದೆ. ಬಾಲಕೃಷ್ಣ ಅವರು ನಿಮ್ಮ ಸಮಸ್ಯೆ ಹೇಳಿದ್ದಾರೆ. ಒಕ್ಕಲಿಗರ ಸಮುದಾಯ ಭವನ ಬೇಕು ಎಂದರು ಅದಕ್ಕೆ 5 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದೇನೆ. ಗೊಲ್ಲರ ಸಮುದಾಯ ಭವನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಕನಕ ಭವನಕ್ಕೂ ಅನುದಾನ ನೀಡಲಾಗುವುದು. ಈ ಸರ್ಕಾರಕ್ಕೆ ನೀವು ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.


Click it and Unblock the Notifications
