ದೇವ್ರು ಪ್ರತ್ಯಕ್ಷನಾದ್ರೆ ಅವನನ್ನು ಸಾಯಿಸಿ ಬಿಜೆಪಿಯವರು ಗುಡಿ ಕಟ್ತಾರೆ, ದ್ವಾರಕನಾಥ್
ಚಾಮರಾಜನಗರ, ಡಿ 31: ಶಿವ,ರಾಮ, ಕೃಷ್ಣನ ಹೆಸರನ್ನು ಇಟ್ಟುಕೊಂಡು ಅದರಿಂದ ರಾಜಕೀಯ ಬೇಳೆ ಹೇಗೆ ಬೇಯಿಸಿಕೊಳ್ಳಬಹುದು ಎನ್ನುವುದು ಬಿಜೆಪಿಯವರಿಗೆ ಇರುವ ಚಿಂತೆಯೇ ಹೊರತು ದೇವರ ಮೇಲಿನ ಭಕ್ತಿಯಿಂದಲ್ಲ ಎಂದು ಖ್ಯಾತ ವಕೀಲ ಮತ್ತು ರಾಜ್ಯ ಹಿಂದುಳಿದ ವರ್ಗ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕನಾಥ್ ಮತ್ತೊಂದು ವಿವಾದಕಾರಿ ಹೇಳಿಕೆ ನೀಡಿದ್ದಾರೆ.
ನಗರದದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಶನಿವಾರ (ಡಿ 30) ಆಯೋಜಿಸಲಾಗಿದ್ದ ಸಂಕೀರ್ಣದಲ್ಲಿ ಮಾತನಾಡುತ್ತಿದ್ದ ದ್ವಾರಕನಾಥ್, ಒಂದು ವೇಳೆ ದೇವರು ಪ್ರತ್ಯಕ್ಷನಾದರೆ, ಅವನನ್ನು ಸಾಯಿಸಿ ದೇವಸ್ಥಾನ ಕಟ್ಟಲೂ ಬಿಜೆಪಿಯವರು ಹಿಂದೆಮುಂದೆ ನೋಡುವವರಲ್ಲ ಎಂದು ದ್ವಾರಕನಾಥ್ ಕಿಡಿಕಾರಿದ್ದಾರೆ. (ಶ್ರೀರಾಮನ ಅಸ್ತಿತ್ವದ ಬಗ್ಗೆ ಪುರಾವೆ ಇಲ್ಲ: ದ್ವಾರಕನಾಥ್)

ಇತ್ತೀಚೆಗೆ ಮಂಗಳೂರಿನಲ್ಲಿ, ದೇಶದ ಇತಿಹಾಸದಲ್ಲಿ ಶ್ರೀರಾಮಚಂದ್ರ ಹುಟ್ಟಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ, ಬುದ್ಧ, ಕ್ರಿಸ್ತ, ಪೈಗಂಬರ್ ಇರುವಿಕೆಗೆ ಸಾಕಷ್ಟು ಪುರಾವೆಗಳಿವೆ ಎನ್ನುವ ಹೇಳಿಕೆ ಮೂಲಕ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ದ್ವಾರಕನಾಥ್ ಗುರಿಯಾಗಿದ್ದರು.
ವಾಲ್ಮೀಕಿ, ಕುವೆಂಪು ಅವರು ಹೇಳುವ ರಾಮಾಯಣ ಬೇರೆ, ಬಿಜೆಪಿಯವರ ರಾಮಾಯಣ ಬೇರೆ. ಬಿಜೆಪಿಯವರ ರಾಮ, ನನ್ನ ರಾಮನಲ್ಲ.ನನಗೆ ರಾವಣನೇ ಹೀರೊ. ಬಿಜೆಪಿ ಮತ್ತು ಕಾಂಗ್ರೆಸ್ ನವರಿಗೆ ಅಂತಹ ವ್ಯತ್ಯಾಸವೇನೂ ಇಲ್ಲ ಎಂದು ದ್ವಾರಕನಾಥ್ ಹೇಳಿದ್ದಾರೆ.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಒಬ್ಬ ವಿಷಪೂರಿತ ಮನುಷ್ಯ. ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಾನೆ. ಜಾತ್ಯಾತೀತರಂತೆ ಕರೆದುಕೊಳ್ಳುವವರು ಅಪ್ಪ- ಅಮ್ಮನ ರಕ್ತದ ಗುರುತು ಇಲ್ಲದವರು. ಜಾತ್ಯಾತೀತರು ಇತಿಹಾಸ ಗೊತ್ತಿಲ್ಲದ ಮೂರ್ಖರು ಎಂದು ಹೇಳುವ ಅನಂತ್ ಕುಮಾರ್ ಹೆಗಡೆ 'ಹೆಗ್ಗಣ'ಕ್ಕೆ ಸಮಾನ ಎಂದು ದ್ವಾರಕನಾಥ್, ಏಕವಚನದಲ್ಲಿ ಹೆಗಡೆ ವಿರುದ್ದ ಕಿಡಿಕಾರಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅವರ ಜಂಡಾ (ಬಾವುಟ) ಬೇರೆಬೇರೆ.. ಆದರೆ ಅಜೆಂಡಾ ಎಲ್ಲಾ ಒಂದೇ, ಹಾಗಾಗಿ ಮೂರೂ ಪಕ್ಷವನ್ನು ಜನ ತಿರಸ್ಕರಿಸಬೇಕೆಂದು ದ್ವಾರಕನಾಥ್ ಮನವಿ ಮಾಡಿದ್ದಾರೆ. ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದ್ವಾರಕನಾಥ್ ವಿರುದ್ಧ ದೂರು ದಾಖಲಾಗಿತ್ತು.
ಕೊನೇ ಮಾತು: ಶ್ರೀರಾಮ ಹುಟ್ಟಿದ್ದಕ್ಕೆ ಪುರಾವೆಯಿಲ್ಲ, ರಾಮಾಯಣ ಇಲ್ಲ ಎನ್ನುವ ನಿಮಗೆ ರಾವಣ ಅದು ಹೇಗೆ 'ಹೀರೋ' ಆಗ್ಬಿಡ್ತಾನೆ ಎನ್ನುವುದನ್ನೊಮ್ಮೆ ವಿವರಿಸಿಬಿಡಿ. ಜೊತೆಗೆ, ಮೂರೂ ಪಕ್ಷವನ್ನು ತಿರಸ್ಕರಿಸಿ ಬಿಟ್ರೆ, ಇನ್ಯಾವ ಪಕ್ಷಕ್ಕೆ ವೋಟ್ ಹಾಕಬೇಕು ಎನ್ನುವ ಫರ್ಮಾನನ್ನೂ ಹೊರಡಿಸ್ಬಿಡಿ ಅತ್ಲಾಗೆ...












Click it and Unblock the Notifications