ಗೌರಿ ಹತ್ಯೆ ಆರೋಪಿಗೆ ಹಣ ಸಹಾಯ ಮಾಡಲು ಅಭಿಯಾನ
ಬೆಂಗಳೂರು, ಜೂನ್ 15: ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಘ್ಮೋರೆ ಹಾಗೂ ಅವರ ಕುಟುಂಬಕ್ಕೆ ಹಣ ಸಹಾಯ ಮಾಡಲು ಫೇಸ್‌ಬುಕ್‌ನಲ್ಲಿ ಅಭಿಯಾನ ನಡೆಯುತ್ತಿದ್ದು, ಕೆಲವು ಹಿಂದೂ ಪರ ಫೇಸ್‌ಬುಕ್ ಪೇಜ್‌ಗಳು ಅಭಿಯಾನಕ್ಕೆ ಬೆಂಬಲ ನೀಡಿವೆ. ಆದರೆ ಕೊಲೆ ಆರೋಪಿಯೊಬ್ಬನಿಗೆ ಬೆಂಬಲ ನೀಡುವುದು ಎಷ್ಟು ಸರಿ ಎಂಬುದು ಚರ್ಚೆ ಆಗಬೇಕಿದೆ.
ಶ್ರೀರಾಮಸೇನೆ ಕರ್ನಾಟಕ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ 'ಧರ್ಮ ರಕ್ಷಕರಿಗಾಗಿ ನಿಮ್ಮದೊಂದು ಪಾಲಿರಲಿ' ಎಂಬ ತಲೆಬರಹದ ಪೋಸ್ಟರ್ ಹಾಕಿದ್ದು ಅದರಲ್ಲಿ ಬ್ಯಾಂಕ್ ಖಾತೆ ನಂ. ನೀಡಿ ಪರಶುರಾಮ್ ವಾಘ್ಮೋರೆ ಕುಟುಂಬಕ್ಕೆ ಹಣ ಸಹಾಯಕ್ಕೆ ಮನವಿ ಮಾಡಲಾಗಿದೆ.
ಪರಶುರಾಮ ವಾಘ್ಮೋರೆ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು ದಯವಿಟ್ಟು ಸಹಾಯ ಮಾಡಿರೆಂದು ಕೋರಲಾಗಿದ್ದು, ಕರ್ನಾಟಕ ಬ್ಯಾಂಕ್‌ನ ಖಾತೆ ಸಂಖ್ಯೆಯನ್ನು ನೀಡಲಾಗಿದೆ. ಸಿಂಧಗಿಯ ಬ್ರಾಂಚ್‌ನ ಖಾತೆ ಇದಾಗಿದೆ.

ಜೂನ್ 15ರ ಮಧ್ಯಾಹ್ನ 12ರ ಸುಮಾರಿಗೆ ಈ ಪೋಸ್ಟ್ ಹಾಕಲಾಗಿದ್ದು ಕೇವಲ ನಾಲ್ಕು ಗಂಟೆಯಲ್ಲಿ ಈ ಪೋಸ್ಟ್ 158 ಶೇರ್‌ಗಳನ್ನು ಕಂಡಿದೆ. ಕರ್ನಾಟಕ ಶ್ರೀರಾಮ ಸೇನೆ ಪೋಸ್ಟ್ ಮಾತ್ರವಲ್ಲದೆ. ಕೇಂದ್ರ ಮಂತ್ರಿ ಅನಂತ್‌ಕುಮಾರ್ ಹೆಗ್ಡೆ ಅವರ ಚಿತ್ರವಿರುವ 'ಬೆಳಗಾವಿ ಹಿಂದೂ' ಫೇಸ್‌ಬುಕ್ ಪುಟ ಕೂಡ ಇದೇ ಮನವಿಯನ್ನು ಮಾಡಿದೆ.
ಈ ಹಿಂದೆ ರಾಜಸ್ಥಾನದಲ್ಲಿ ಮುಸ್ಲಿಂ ಒಬ್ಬನನ್ನು ಕೊಂದು ವಿಡಿಯೋ ಹಾಕಿದ್ದ ವ್ಯಕ್ತಿಗಾಗಿಯೂ ಇದೇ ರೀತಿಯ ಹಿಂದೂ ಪರ ಫೇಸ್‌ಬುಕ್ ಪೇಜ್‌ಗಳು ಹಣ ಸಂಗ್ರಹಿಸಿದ್ದವು ಆದರೆ ನಂತರ ಆ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.












Click it and Unblock the Notifications