ಪುನೀತ್ ಕೆರೆಹಳ್ಳಿ ಬಿಡುಗಡೆಗೆ ಆಗ್ರಹಿಸಿದ ಹಿಂದೂ ಕಾರ್ಯಕರ್ತರು: ಸರ್ಕಾರಕ್ಕೆ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 13: ರಾಜ್ಯ ಸರ್ಕಾರದ ವಿರುದ್ಧ ಬೆಳ್ಳಂ ಬೆಳಿಗ್ಗೆಯೇ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಹಿಂದೂ ವಿರೋಧಿ ಸರ್ಕಾರ ಅಂತ ಗರಂ ಆಗಿ ಜೊತೆ ಜೊತೆಗೆ ಮಾಜಿ ಸರ್ಕಾರದ ವಿರುದ್ಧ ಅಂದರೆ ಬಿಜೆಪಿ ಸರ್ಕಾರದ ವಿರುದ್ಧ ಕೂಡ ಕಿಡಿಕಾರಿದ್ದು, ಎಚ್ಚರಿಕೆ ಸಹ ನೀಡಿದ್ದಾರೆ.
ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಬಂಧನವೇ ಇದಕ್ಕೆಲ್ಲ ಪ್ರಮುಖ ಕಾರಣವಾಗಿದೆ. ಪುನೀತ್ ವಿರುದ್ಧ ರಾಜ್ಯ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿರುವುದೇ ಹಿಂದೂ ಸಂಘಟನೆ ಕಣ್ಣು ಕೆಂಪಾಗಲು ಕಾರಣವಾಗಿದೆ.

ಸಮಾಜದಲ್ಲಿ ಸಾಮರಸ್ಯ ಕದಡುವ, ಸಮಾಜ ವಿರೋಧ ಕಾರ್ಯಗಳ, ಅಪರಾಧ ಪ್ರಕರಣಗಳನ್ನು ಆಧರಿಸಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಕೂಡ ಅಧಿಕೃತ ಮಾಹಿತಿ ನೀಡಿದ್ದು, ಈ ನಡೆಯ ವಿರುದ್ಧವೇ ಇವತ್ತು ಬೆಳ್ಳಂಬೆಳಗ್ಗೆ ಹಿಂದೂ ಸಂಘಟನೆಗಳ ಆಕ್ರೋಶ ಹೊರಹಾಕಿದ್ದಾರೆ.
ಗೂಂಡಾ ಕಾಯ್ದೆ ಅಡಿ ಪುನೀತ್ ಕೆರೆಹಳ್ಳಿ ಬಂಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮತ್ತು ಬಿಜೆಪಿ ನಾಯಕರ ವಿರುದ್ಧ ಹಿಂದೂ ಸಂಘಟನೆಗಳ ಕಿಡಿಕಾರಿದೆ. ಮತ್ತೆ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಆಕ್ರೋಶವನ್ನು ಹಿಂದೂ ಸಂಘಟನೆ ಹೊರ ಹಾಕಿದೆ. ಪುನೀತ್ ಕೆರೆಹಳ್ಳಿ ಬೆಂಬಲವಾಗಿ ಬಿಜೆಪಿ ನಾಯಕರು ನಿಲ್ಲದಿದ್ದರೆ, ಬಿಜೆಪಿ ನಾಯಕರ ವಿರುದ್ಧವು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂ ಸಂಘಟನೆಗಳನ್ನು ತಮ್ಮ ದ್ವೇಷದ ರಾಜಕಾರಣಕ್ಕೆ ಬಲಿಪಶು ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಪುನೀತ್ ಕೆರೆಹಳ್ಳಿ ಮೇಲೆ ಗೂಂಡ ಕಾಯ್ದೆ ಹಾಕಿ ಬಂದಿರುವುದು. ಮುಸ್ಲಿಮರ ಮತ ಬ್ಯಾಂಕಿನಿಂದ ಗೆದ್ದಿರುವ ಕಾಂಗ್ರೆಸ್ ಜಿಹಾದಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಿದ್ದು, ಇದು ದೇಶಕ್ಕೆ ಮಾರಕ ಅಂತ ಶ್ರೀರಾಮ ಸೇನೆ ಕೆಂಡವಾಗಿದೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ ಅಪರಾಧಿಗಳು, ಪಾದರಾಯನಪುರ ಗಲಭೆ ಕೋರರು, ಹುಬ್ಬಳ್ಳಿಯಲ್ಲಿ ಪೊಲೀಸ್ ಜೀಪ್‌ಗಳಿಗೆ ಬೆಂಕಿ ಹಚ್ಚಿದ್ದು, ಅಪರಾಧಿಗಳು, ರಾಜ್ಯದಲ್ಲಿ ಸುಮಾರು ಕಡೆ ಗಲಭೆ ಸೃಷ್ಟಿದ ಮುಸ್ಲಿಮರ ವಿರುದ್ಧ ಯಾವುದೇ ಕಠಿಣ ಕ್ರಮ ಇಲ್ಲ. ಗೋ ರಕ್ಷಣೆ, ಹಿಂದೂ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಪ್ರಚಾರ ಮಾಡಿ ಜಾಗೃತಿ ಮೂಡಿಸುತ್ತಿರುವ ಹಿಂದೂ ಮುಖಂಡರುಗಳಿಗೆ ಕಡಿವಾಣ ಹಾಕುವುದು ಈ ದುಷ್ಟ ಕಾಂಗ್ರೆಸ್ಸಿನ ಮನಸ್ಥಿತಿ ಎಂದು ಕಿಡಿಕಾರಿದ್ದಾರೆ.
ಶೀಘ್ರವೇ ಪುನೀತ್ ಕೆರೆಹಳ್ಳಿಯನ್ನು ಬಿಡುಗಡೆ ಮಾಡದಿದ್ದರೆ ರಾಜ್ಯ ಸರ್ಕಾರ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಜೊತೆಗೆ ಡೋಂಗಿ ಹಿಂದುತ್ವದ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿ ಪುನೀತ್ ಕೆರೆ ಹಳ್ಳಿಯ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ಕೊಟ್ಟಿದ್ದಾರೆ. ಹೀಗೆ ಮಾಡದೇ ಹೋದಲ್ಲಿ ಬಿಜೆಪಿ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ ಈ ಪುನೀತ್ ಕೆರೆ ಹಳ್ಳಿ ಬಂಧನ ಇನ್ಯಾವ ಮಜಲು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.












Click it and Unblock the Notifications