ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ; ಕೇಸರಿ ಪಕ್ಷ ಆರೋಪ
ಬೆಂಗಳೂರು, ಫೆಬ್ರವರಿ 5: ಕರಾವಳಿ ಹಾಗೂ ಮಲೆನಾಡಿನ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಈಗ ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ. ಹಿಜಾಬ್ ವಿವಾದ ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ರಾಜಕೀಯ ಪ್ರೇರಿತವಾಗಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಜನಮಾನಸದಿಂದ ಮಾಸಿ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಮತೀಯವಾದಿ ಶಕ್ತಿಗಳ ಜೊತೆ ಸೇರಿ ಈ ವಿವಾದವನ್ನು ರಾಜ್ಯದಲ್ಲಿ ವಿಸ್ತಾರಗೊಳಿಸುತ್ತಿದೆ ಎಂದು ಕಿಡಿಕಾರಿದೆ.
ಹಿಜಾಬ್ ವಿವಾದ ಸುತ್ತ ಮತಬ್ಯಾಂಕ್ ರಾಜಕಾರಣ ಮಾತ್ರವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದವನ್ನು ತುರುಕಲು ವಿಪಕ್ಷ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದ್ದ ನಿಯಮಗಳೇ ಈಗ ಇರುವುದು ಅಂದು ಇಲ್ಲದ ವಿವಾದ ಇಂದೇಕೆ? ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗುವುದಕ್ಕಾಗಿ ಸಿದ್ದರಾಮಯ್ಯ ಅವರು ಹಿಜಾಬ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದು ಆಡಳಿತರೂಢ ಬಿಜೆಪಿ ಹರಿಹಾಯ್ದಿದೆ.

ಒಡೆದು ಅಳುವ ನೀತಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬ್ರಿಟಿಷರಿಂದ ಬಂದ ಬಳುವಳಿ. ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ, ಒಡೆದು ಹಾಕುವ ಕಾಂಗ್ರೆಸ್ ಆಟ ನಡೆಯಲ್ಲ. ಹಿಜಾಬ್ ಪ್ರಕರಣದ ಹಿಂದಿರುವ "ಕಾಣದ ಕೈ"ಗಳು ಯಾರು ಎಂಬುದು ತಿಳಿಯದಷ್ಟು ಮೂರ್ಖ ಜನರು ಇಲ್ಲ ಎಂದು ಟೀಕಿಸಿದೆ.
ಮಸೀದಿ ಒಳಗೆ ಏಕೆ ಪ್ರವೇಶವಿಲ್ಲ; ಸಚಿವ ಸುನಿಲ್ ಕುಮಾರ್
ರಾಜ್ಯದಲ್ಲಿ ಹಿಜಾಬ್ ವಿವಾದ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ಬಹಳ ವ್ಯವಸ್ಥಿತವಾದ ಷಡ್ಯಂತ್ರವಾಗಿದೆ ಎಂದರು ಕಿಡಿಕಾರಿದರು.
ಶಾಲೆಯ ಕಾಂಪೌಂಡ್ ತನಕ ಹಿಜಾಬ್, ಬುರ್ಕಾ ಹಾಕಿಕೊಂಡು ಬರಲಿ. ಆದರೆ ಶಾಲೆಯ ಒಳಗೆ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ರಾಜ್ಯದ ಶಾಲೆಗಳಲ್ಲಿ ವಸ್ತ್ರಸಂಹಿತೆ ಸಾಂಪ್ರದಾಯಿಕವಾಗಿ ಬಂದಿದೆ. ಕೆಲ ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ಅರಾಜಕತೆ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಕೆಲ ಸಂಘಟನೆಗಳು ಹಿಜಾಬ್ ವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುತ್ತಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಸೀದಿ ಒಳಗೆ ಮಹಿಳೆಯರಿಗೆ ಪ್ರವೇಶ ಕೊಡಲಿ. ಮಹಿಳೆಯರಿಗೆ ಎಲ್ಲೂ ಪ್ರವೇಶ ನೀಡದವರು ಸರ್ಕಾರಿ ಶಾಲೆಯಲ್ಲಿ ಅವರದ್ದೆ ಆದ ಒಂದು ನಿಯಮ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ತ್ರಿಬಲ್ ತಲಾಕ್ ರದ್ದು ಮಾಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಭದ್ರತೆ ಕೊಟ್ಟಿದ್ದು ಮೋದಿ ಸರ್ಕಾರ. ಇದನ್ನು ಮುಸ್ಲಿಂ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಎಸ್‌ಡಿಪಿಐ, ಸಿದ್ದರಾಮಯ್ಯ, ಯುಟಿ ಖಾದರ್ ಹೇಳಿಕೆಯಿಂದ ಈ ರೀತಿ ಮಾಡಬೇಡಿ ಎಂದು ಮಂಗಳೂರಿನಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿದರು.
ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ; ನಳಿನ್ ಕುಮಾರ್ ಕಟೀಲ್
ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಹಿಜಾಬ್ ಆಗಲಿ ಅಥವಾ ಇಂತಹ ಯಾವುದೇ ಘಟನೆಗಳಿಗೆ ಇಲ್ಲಿ ಆಸ್ಪದವಿಲ್ಲ ಎಂದರು.

ಶಾಲೆ ಎನ್ನುವುದು ಸರಸ್ವತಿ ಮಂದಿರ, ಶಾಲೆಯ ನಿಯಮ, ಅನುಶಾಸನದೊಂದಿಗೆ ಶಿಕ್ಷಣ ಪಡೆಯುವುದು ಧರ್ಮ. ಅದರೊಳಗೆ ಬೇರೆ ಧರ್ಮ ತರುವುದು ಸರಿಯಲ್ಲ ಎಂದು ಹೇಳಿದರು.
ಮಕ್ಕಳಿಗೆ ಅವಶ್ಯಕತೆ ಇರುವುದು ಶಿಕ್ಷಣ. ಯಾರಿಗೆ ಈ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಮನಸ್ಸಿಲ್ಲವೋ ಅವರು ಬೇರೆ ದಾರಿ ಹುಡುಕಬಹುದು. ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಶಾಲೆಯ ನಿಯಮದ ಅಡಿಯಲ್ಲಿ ಕಲಿಯಬೇಕು. ಇಲ್ಲಿ ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
Recommended Video
ಈ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆ ನೋಡಿದ್ದೇನೆ, ಅವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ನಡೆಸಿ ಸಾಮರಸ್ಯ ಹಾಳು ಮಾಡಿದ್ದಾರೆ. ಶಾದಿ ಭಾಗ್ಯದ ಹೆಸರಲ್ಲಿ ಕೆಲವೇ ಕೆಲವು ಸಮುದಾಯಗಳಿಗೆ ಯೋಜನೆ ನೀಡಿದ್ದರು. ಈಗ ಇವರು ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರು ತುಂಬ ಎಚ್ಚರಿಕೆಯಿಂದ ಮಾತನಾಡಬೇಕು. ಹಿಜಾಬ್ ವಿಚಾರ ಈಗ ನ್ಯಾಯಾಲಯದಲ್ಲಿದೆ. ಅಲ್ಲಿಂದ ಏನು ನಿರ್ದೇಶನ ಬರುತ್ತದೆ ಎಂದು ಕಾದು ನೋಡುತ್ತೇವೆ ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದರು.












Click it and Unblock the Notifications