ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ: ಸಚಿವ ಈಶ್ವರಪ್ಪ
ಬೆಂಗಳೂರು, ಫೆಬ್ರವರಿ 09: ಕೆಂಪುಕೋಟೆ ಸೇರಿದಂತೆ ಎಲ್ಲಿ ಬೇಕಾದರೂ ನಾವು ಕೇಸರಿ ಧ್ವಜ ಹಾರಿಸುತ್ತೇವೆ. ಸುಮಾರು ವರ್ಷಗಳ ನಂತರ, ಮುಂದೊಂದು ದಿನ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ದಿನ ಬರಲಿದೆ ಎಂದು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಬುಧವಾರ ಹೇಳಿದ್ದಾರೆ.
ರಾಜ್ಯದಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ ವಿಚಾರವೂ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನಿನ್ನೆ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಾರಿಸುವ ಧ್ವಜಸ್ಥಂಭದಲ್ಲಿ ಭಗವಾಧ್ವಜವನ್ನು ಹಾರಿಸಿದ್ದಾರೆ. ಈ ನಡುವೆ ವಿದ್ಯಾರ್ಥಿಗಳು ಧ್ವಜಸ್ಥಂಭದಲ್ಲಿದ್ದ ರಾಷ್ಟ್ರ ಧ್ವಜವನ್ನು ಕೆಳಕ್ಕೆ ಇಳಿಸಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ ಎಂದು ಸುದ್ದಿ ಆಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ. ಎಸ್ ಈಶ್ವರಪ್ಪ, "ಕಾಂಗ್ರೆಸ್‌ನವರು ರಾಷ್ಟ್ರಧ್ವಜವನ್ನು ತೆಗೆದು ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಹಾಗೆ ಆಗಿಲ್ಲ. ಕೇಸರಿ ಧ್ವಜವನ್ನು ಎಲ್ಲಿ ಬೇಕಾದರೂ ಹಾಕಬಹುದು. ಇವತ್ತಲ್ಲ ನಾಳೆ ಕೆಂಪು ಕೋಟೆಯಲ್ಲೂ ಕೇಸರಿ ಧ್ವಜ ಹಾರಬಹುದು. ಇವತ್ತೆ ಎಂದು ಹೇಳುತ್ತಿಲ್ಲ. ಮುಂದೆ ಹಾರಬಹುದು," ಎಂದು ತಿಳಿಸಿದ್ದಾರೆ.

"ಇವತ್ತು ರಾಷ್ಟ್ರದಲ್ಲಿ ಈಗ ತ್ರಿವರ್ಣ ಧ್ವಜವಿದೆ. ರಾಷ್ಟ್ರಧ್ವಜಕ್ಕೆ ದೇಶದಲ್ಲಿರುವ ಎಲ್ಲರೂ ಗೌರವ ಕೊಡಲೇಬೇಕು. ರಾಷ್ಟ್ರಧ್ವಜ ಗೌರವಿಸದವನು ರಾಷ್ಟ್ರದ್ರೋಹಿ ಆಗುತ್ತಾನೆ. ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೂ ನಿಯಮಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು," ಎಂದು ಕೂಡಾ ಹೇಳಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ
"ಇಷ್ಟರವೆಗೆ ನಾನು ಸಿದ್ಧರಾಮಯ್ಯ ಮಾತ್ರ ಸುಳ್ಳು ಹೇಳುತ್ತಾರೆ ಅಂದುಕೊಂಡಿದ್ದೆ. ಆದರೆ ಸಿದ್ಧರಾಮಯ್ಯನನ್ನು ಮೀರಿ, ಡಿಕೆ ಶಿವಕುಮಾರ್ ಇಂದು ಸುಳ್ಳುಗಾರ ಆಗಿದ್ದಾರೆ. ಕೇಸರಿ ಧ್ವಜ ಹಾರಿಸಿರುವುದು ಹೌದು. ಕೇಸರಿ ಧ್ವಜ ಹಾರಿಸಬಾರದೇ," ಎಂದು ಪ್ರಶ್ನೆ ಮಾಡಿದ್ದಾರೆ. "ಯಾವ ಧ್ವಜಸ್ಥಂಭದ ಮೇಲೆ ಬೇಕಾದರೂ ಕೇಸರಿ ಧ್ವಜವನ್ನು ಹಾರಿಸಬಹುದು. ಆದರೆ ರಾಷ್ಟ್ರ ಧ್ವಜವನ್ನು ತೆಗೆದು ಯಾವುದೇ ಕೇಸರಿ ಧ್ವಜವನ್ನು ಹಾಕಿಲ್ಲ, ಹಾಕುವುದೂ ಇಲ್ಲ," ಎಂದು ಸ್ಪಷ್ಟಪಡಿಸಿದರು.
"ಹಿಂದೂ ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸಲು ಕಾಂಗ್ರೆಸ್‌ನವರು ರಾಷ್ಟ್ರ ಧ್ವಜವನ್ನು ಕೂಡಾ ಬಳಕೆ ಮಾಡುತ್ತಿದ್ದಾರೆ, ಡಿಕೆ ಶಿವಕುಮಾರ್‌ಗಿಂತ ಹೆಚ್ಚು ನಮಗೆ ರಾಷ್ಟ್ರ ಧ್ವಜದ ಮೇಲೆ ಗೌರವ ಇದೆ. ಅಲ್ಲಿ ರಾಷ್ಟ್ರ ಧ್ವಜವನ್ನು ತೆಗೆದಿಲ್ಲ. ಧ್ವಜಸ್ಥಂಭಗಳಲ್ಲಿ ಕೇಸರಿ ಧ್ವಜವನ್ನು ಹಾಕಲಾಗಿದೆ. ಅದನ್ನು ತಿರುಚು ಹಿಂದೂ ಮುಸ್ಲಿಮರ ನಡುವೆ ಗೊಂದಲವನ್ನು ಹುಟ್ಟು ಹಾಕಲಾಗುತ್ತಿದೆ," ಎಂದು ಕೆ ಎಸ್ ಈಶ್ವರಪ್ಪ ಆರೋಪ ಮಾಡಿದ್ದಾರೆ.
"ಇಂದು ನಾಳೆಯಲ್ಲ ನೂರಾರು ವರ್ಷಗಳ ನಂತರ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಬಹುದು. ಆದರೆ ಈಗ ರಾಷ್ಟ್ರ ಧ್ವಜ ಇದೆ. ಈ ದೇಶದಲ್ಲಿ ಅನ್ನ ತಿಂದ ಪ್ರತಿ ಭಕ್ತನು ರಾಷ್ಟ್ರ ಧ್ವಜಕ್ಕೆ ಗೌರವ ನೀಡಬೇಕು. ಇದರಲ್ಲಿ ಯಾವುದೇ ಪ್ರಶ್ನೆ ಇಲ್ಲ," ಎಂದಿದ್ದಾರೆ. "ಈ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳಿದಾಗ ನಗುತ್ತಿದ್ದರು. ಆದರೆ ಈಗ ಕಟ್ಟುತ್ತಿಲ್ಲವೇ. ಹಾಗೆಯೇ ಯಾವುದೋ ಕಾಲದಲ್ಲಿ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು. ಆದರೆ ಈಗ ನಾವು ಸಂವಿಧಾನಬದ್ಧವಾಗಿ ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜವೆಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಗೌರವ ನೀಡಲೇ ಬೇಕು," ಎಂದು ತಿಳಿಸಿದರು.
ರಾಷ್ಟ್ರಧ್ವಜ ಬದಲಾವಣೆ ಆಗುತ್ತಾ?
ಈ ನಡುವೆ ರಾಷ್ಟ್ರಧ್ವಜ ಬದಲಾವಣೆಯ ಆಗುತ್ತದೆಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಸ್ಪಷ್ಟಣೆ ನೀಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, "ಬಿಜೆಪಿ ಎಂದಿಗೂ ಕೂಡಾ ಭಾರತದ ರಾಷ್ಟ್ರ ಧ್ವಜವನ್ನು ಬದಲಾವಣೆ ಮಾಡಬೇಕು ಎಂದು ಹೇಳಿಲ್ಲ. ನಾವು ಎಂದಿಗೂ ರಾಷ್ಟ್ರ ಧ್ವಜವನ್ನು ಬದಲಾವಣೆ ಮಾಡುವುದಿಲ್ಲ. ಸಚಿವ ಈಶ್ವರಪ್ಪ ಕೇವಲ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ ಅಷ್ಟೇ," ಎಂದು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications