ಹಿಜಾಬ್ ವಿವಾದ: ತಾಂತ್ರಿಕ ಕಾರಣಗಳಿಂದಾಗಿ ಎರಡು ಅರ್ಜಿ ವಜಾ
ಬೆಂಗಳೂರು, ಫೆಬ್ರವರಿ 17: ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತ್ರಿಸದಸ್ಯ ಪೀಠದಲ್ಲಿ ನಡೆದಿದ್ದು, ಇದೇ ವೇಳೆ ಅರ್ಜಿ ಪರ ವಾದ ಮುಂದುವರೆದಿದೆ. ಹಿಜಾಬ್ ವಿವಾದ ಕುರಿತಂತೆ ಹೈಕೋರ್ಟ್‌ನಲ್ಲಿ ಶುಕ್ರವಾರವೂ ವಿಚಾರಣೆ ಮುಂದುವರಿಯಲಿದೆ.
ಗುರುವಾರ ಕೆಲ ಕಾಲ ವಿಚಾರಣೆ ನಡೆಸಿದ ತ್ರಿಸದಸ್ಯಪೀಠ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಮನವಿ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು. ತಾಂತ್ರಿಕ ಕಾರಣಗಳಿಂದಾಗಿ ಎರಡು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತು.
ಹಿಜಾಬ್‌ಗೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣಪೀಠ ಐದನೇ ದಿನವಾದ ಗುರುವಾರವೂ ಸುಮಾರು ಒಂದೂಕಾಲು ತಾಸು ವಾದ ಆಲಿಸಿತು.

ಅಂತಾರಾಷ್ಟ್ರೀಯ ಒಪ್ಪಂದಕ್ಕೆ ವಿರುದ್ಧ:
ಇದಕ್ಕೂ ಮುನ್ನ ಅರ್ಜಿದಾರರ ಪರವಾಗಿ ವಾದ ಮಂಡಿಸಲು ಮುಂದಾದ ವಕೀಲ ರಹಮತ್ ಕೊತ್ವಾಲ್, ಸರ್ಕಾರದ ನಿರ್ಧಾರ ಅಂತಾರಾಷ್ಟ್ರೀಯ ಸಾಮಾಜಿಕ ಆರ್ಥಿಕ ಒಪ್ಪಂದಗಳಿಗೆ ವಿರುದ್ಧವಾಗಿದೆ, ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಲಾಗಿದೆ ಎಂದರು.
ಆಗ ಸಿಜೆ, ನಿಮ್ಮ ಅರ್ಜಿ ನಿಯಮದ ಪ್ರಕಾರವಿಲ್ಲ. ಹೈಕೋರ್ಟ್ ಯಾವ ನಿಯಮ ಅನುಸರಿಸಬೇಕೆಂದು ಸೂಚಿಸಿದೆಯೇ ಅದರ ಪ್ರಕಾರ ಸಲ್ಲಿಕೆಯಾಗಿಲ್ಲ. ಹೀಗಾಗಿ ನಾವು ಈ ಪಿಐಎಲ್ ಅನ್ನು ವಜಾಗೊಳಿಸುತ್ತಿದ್ದೇವೆ ಎಂದು ಡಿಸ್ಮಿಸ್ ಮಾಡಿದರು.
ಅದೇ ರೀತಿ ತಾಂತ್ರಿಕ ಅಂಶದ ಆಧಾರದ ಮೇಲೆ ನ್ಯಾಯವಾದಿಯೊಬ್ಬರ ಅರ್ಜಿಯನ್ನೂ ವಜಾಗೊಳಿಸಿತು.
ಶುಕ್ರವಾರ ಹಿಜಾಬ್‌ಗೆ ಅವಕಾಶ ನೀಡಲು ಮನವಿ
ಈ ಮಧ್ಯೆ, ಪ್ರಕರಣದ ಸಂಬಂಧ ಪಿಐಎಲ್ ಸಲ್ಲಿಸಿದ್ದ ಹುಬ್ಬಳಿಯ ವೈದ್ಯ ಡಾ.ವಿನೋದ್ ಕುಲಕರ್ಣಿ, ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ. ಇದು ಅತ್ಯಂತ ಗಂಭೀರ ವಿಚಾರ, ಇದರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವೂ ಇದೆ, ಕನಿಷ್ಠ ಶುಕ್ರವಾರದಂದು ಮತ್ತು ರಂಜಾನ್ ಸಮಯದಲ್ಲಾದರೂ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು.ಈ ಬಗ್ಗೆ ನ್ಯಾಯಾಲಯ ಇಂದೇ ಮಧ್ಯಂತರ ಆದೇಶ ಮಾಡಬೇಕು ಎಂದ ಅವರು ಲತಾ ಮಂಗೇಶ್ಕರ್ ಅವರ 'ಕುಚ್ ಕಾಕರ್ ಕುಚ್ ಪಾನಾ ಹೈ..' ಎಂಬ ಹಾಡನ್ನು ಉಲ್ಲೇಖಿಸಿದರು.
ಎರಡೂ ಕಡೆಯವರು ಒಪ್ಪಿದರೆ ಮಾತ್ರ ರಾಜಿ
ಈ ಮಧ್ಯೆ, ವಿಚಾರಣೆಯ ಕೊನೆಯಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಪರ ವಕೀಲರು, ಸರ್ಕಾರದ ಹಿಜಾಬ್ ನಿರ್ದೇಶನ ನಮಗೆ ಅನ್ವಯವಾಗುವುದಿಲ್ಲ. ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ ಅದನ್ನು ಪರಿಗಣಿಸಬೇಕು ಎಂದು ಕೋರಿದರು.
ವಕೀಲೆಯೊಬ್ಬರು, ಪ್ರಕರಣ ರಾಜಿ ಸಂಧಾನಕ್ಕೆ ಒಪ್ಪಿಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಬಗ್ಗೆ ನಾನು ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ರಾಜಿ ಸಂಧಾನಕ್ಕೆ ಒಪ್ಪಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದರು.
ಆಗ ಸಿಜೆ ಪ್ರತಿಕ್ರಿಯಿಸಿ, ಮಧ್ಯಸ್ಥಿಕೆ ನಿಯಮಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಎರಡೂ ಕಡೆಯವರು ಒಪ್ಪಿದರೆ ಮಾತ್ರ ರಾಜಿ ಸಂಧಾನ ಸಾಧ್ಯ, ಇಲ್ಲಿ ಸಂವಿಧಾನಿಕ ಪ್ರಶ್ನೆಗಳನ್ನು ಉಲ್ಲೇಖಿಸಲಾಗಿದೆ ಎಂದರು.












Click it and Unblock the Notifications