ಹಿಜಾಬ್ ಧಾರಣೆ ವಿವಾದ: ಜಡ್ಜ್‌ಗೆ ವಾಟ್ಸಪ್ ಸಂದೇಶಗಳ ಮಹಾಪೂರ!
ಬೆಂಗಳೂರು ಫೆ.8. ಹಿಜಾಬ್ ಧಾರಣೆಯನ್ನು ನಿರ್ಬಂಧಿಸಿರುವ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾ.ಕೃಷ್ಣ ದೀಕ್ಷಿತ್ ಅವರಿಗೆ ವಾಟ್ಸಪ್ ನಲ್ಲಿ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆಯಂತೆ.
ಮಂಗಳವಾರ ವಿಚಾರಣೆ ವೇಳೆ ಸ್ವತಃ ಈ ವಿಷಯವನ್ನು ತಿಳಿಸಿದ ನ್ಯಾಯಮೂರ್ತಿ, ಎಷ್ಟು ಮೆಸೇಜ್ ಬರ್ತಾ ಇದೆ ಎಂದರೆ, ಫೋನ್ ಬ್ಲಾಸ್ಟ್ ಆಗೋದು ಬಾಕಿ ಅಷ್ಟೇ ಎಂದರು.
ಬೆಳಿಗ್ಗೆ ಫೋನ್ ಆನ್ ಮಾಡುತ್ತಿದ್ದಂತೆಯೇ ಅನಾಮಧೇಯ ವ್ಯಕ್ತಿಗಳಿಂದ ನೂರಾರು ಸಂದೇಶಗಳು ಹಿಜಾಬ್ ಕುರಿತು ಬರುತ್ತಿವೆ, ಯಾವುದನ್ನು ನೋಡುವುದು ಯಾವುದನ್ನು ಬಿಡುವುದು, ಇಂತಹದು ನಡೆಯಬಾರದು, ಇದು ಸರಿಯಲ್ಲ ಎಂದು ಹೇಳಿದರು.

ಆಗ ಅರ್ಜಿದಾರರ ಪರ ವಕೀಲರು ಮತ್ತು ಎಜಿ ಇಂತಹ ನಡೆ ಸರಿಯಲ್ಲ ಎಂದು ಹೇಳಿರಲ್ಲದೆ, ನಿಮ್ಮ ಬಗ್ಗೆ ವಿಶ್ವಾಸವಿದೆ ಮೈ ಲಾರ್ಡ್, ನೀವು ವಿಚಾರಣೆ ಮುಂದುವರಿಸಿ ಎಂದು ಕೋರಿದರು.
ಆನಂತರ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡು ಅರ್ಜಿದಾರರ ವಾದವನ್ನು ಆಲಿಸಲಾರಂಭಿಸಿತು.
ಆನ್ ಲೈನ್ ನಲ್ಲಿ ನೂಕು ನುಗಲ್ಲು
ತೀವ್ರ ಕುತೂಹಲ ಮೂಡಿಸಿರುವ ಹಿಜಾಬ್ ವಿವಾದ ಕುರಿತಂತೆ ವಿಚಾರಣೆ ನಡೆಸುತ್ತಿರುವ ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠದಲ್ಲಿ ವಿಚಾರಣೆಯನ್ನು ಆಲಿಸಲು ಅಕ್ಷರಶಃ ನೂಕು ನುಗ್ಗಲು ಉಂಟಾಗಿತ್ತು.
ಮಧ್ಯಾಹ್ನ ವಿಚಾರಣೆ ಆರಂಭಕ್ಕೂ ಮುನ್ನ 500ಕ್ಕೂ ಅಧಿಕ ಮಂದಿ ಆನ್ ಲೈನ್ ನಲ್ಲಿ ಭಾಗಿಯಾಗಿದ್ದರು. ಕೊನೆಗೆ ಸರಕಾರದ ಪರ ವಾದ ಮಂಡನೆಗೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಆನ್ ಲೈನ್ ಮೂಲಕ ಭಾಗಿಯಾಗಲು ಸಾಧ್ಯವಾಗಿಲ್ಲ.
ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಾಗ, ಎಎಜಿ ಅರುಣ್ ಶ್ಯಾಮ್ ಆನ್ ಲೈನ್ ನಲ್ಲಿ ಎಜಿ ಜಾಯಿನ್ ಆಗಲು ಆಗುತ್ತಿಲ್ಲ. 500ಕ್ಕೂ ಅಧಿಕ ಜನ ಈಗಾಗಲೇ ಜಾಯಿನ್ ಆಗಿದ್ದಾರೆ. ಹಾಗಾಗಿ ಅವರ ಸೇರ್ಪಡೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಆಗ ಕೆಲವರು ಎಕ್ಸಿಟ್ ಆದರೂ ಮತ್ತೆ ಮತ್ತೆ ವಕೀಲರು ಹಾಗೂ ಇತರರು ಸೇರ್ಪಡೆಯಾಗುತ್ತಲೇ ಇದ್ದರು. ಹೈಕೋರ್ಟ್ ನ ಐಟಿ ವಿಭಾಗದವರೂ ಸಹ ಹರಸಾಹಸ ಪಟ್ಟರು. ಕೊನೆಗೂ ಎಜಿ ಜಾಯಿನ್ ಆದ ನಂತರ ವಿಚಾರಣೆ ಆರಂಭವಾಯಿತು.
ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ ಮುಂದುರಿವರಿಸಿದರು.
ಹಿಜಾಬ್ ವಿವಾದ ಸಂಬಂಧ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸುತ್ತಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯಿದೆಯಡಿ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಸಂಬಂಧ ಯಾವುದೇ ನಿಯಮ ಮಾಡಿಲ್ಲ. ಆದರೂ ತರಗತಿಗಳಿಗೆ ನಿರ್ಬಂಧಿಸಿರುವುದು ಅರ್ಜಿದಾರರ ಶಿಕ್ಷಣದ ಹಕ್ಕು ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹಿಜಾಬ್ ಧರಿಸಲು ಯಾವುದೇ ನಿರ್ಬಂಧ ವಿಧಿಸದಂತೆ ಭಂಡಾರ್ಕರ್ ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶಿಸಲು ಮಂಗಳೂರು ವಿವಿ ರಿಜಿಸ್ಟ್ರಾರ್‌ಗೆ ಆದೇಶಿಸಬೇಕು ಎಂದು ಕೋರಿದ್ದಾರೆ.
ಬಲವಂತವಾಗಿ ತರಗತಿಯಿಂದ ದೂರ ಉಳಿಯುವಂತೆ ಮಾಡಿರುವ ದಿನಗಳಿಗೆ ಅಥವಾ ಅರ್ಜಿ ವಿಲೇವಾರಿಯಾಗುವವರೆಗೆ ಹಾಜರಾತಿ ನೀಡಲು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶಿಸುವಂತೆ ವಿವಿ ರಿಜಿಸ್ಟ್ರಾರ್‌ಗೆ ಆದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.












Click it and Unblock the Notifications