ಹಿಜಾಬ್ ವಿವಾದ: ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ಫೆಬ್ರವರಿ 25: ಹಿಜಾಬ್ ವಿವಾದ ಕುರಿತಂತೆ ಕಳೆದ 12 ದಿನಗಳಿಂದ ಹೈಕೋರ್ಟ್‌ನ ಪೂರ್ಣ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆ ಶುಕ್ರವಾರ ಪೂರ್ಣಗೊಂಡಿದ್ದು, ನ್ಯಾಯಪೀಠ ತನ್ನ ತೀರ್ಪು ಕಾಯ್ದಿರಿಸಿದೆ.
ಹಿಜಾಬ್‌ಗೆನಿರ್ಬಂಧ ವಿಧಿಸಿರುವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣಪೀಠ ಶುಕ್ರವಾರ ವಿಚಾರಣೆಯನ್ನು ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನ್ಯಾಯಪೀಠ ನಾಲ್ಕು ಗಂಟೆಯೊಳಗೆ ವಾದ ಮುಗಿಸಿ ಇವತ್ತೆ ಎಲ್ಲರೂ ತಮ್ಮ ವಾದ ಸಲ್ಲಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿತು.
ಅದರಂತೆ ಎಲ್ಲ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ ವಿಚಾರಣೆ ಪೂರ್ಣಗೊಂಡಿದೆ, ತೀರ್ಪು ಕಾಯ್ದಿರಿಸಿದೆ. ಯಾವ ವಕೀಲರು ಬೇಕಾದರೂ ಲಿಖಿತ ವಾದಾಂಶ ಸಲ್ಲಿಸಬಹುದು ಎಂದು ಆದೇಶಿಸಿತು.
ಸಿಡಿಸಿಗೆ ಅಧಿಕಾರ ಕಾನೂನು ಬಾಹಿರ:
ಅರ್ಜಿದಾರರ ಪರ ರವಿವರ್ಮಕುಮಾರ್ ವಾದ ಮಂಡಿಸಿ, ಕಾಲೇಜು ಅಭಿವೃದ್ದಿಗೆ ಶಾಸನಬದ್ಧ ಅಧಿಕಾರವಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಶಾಸಕರ ನೇತೃತ್ವದ ಅಭಿವೃದ್ಧಿ ಸಮಿತಿ ಸಮರ್ಥಿಸಿಕೊಂಡಿದ್ದಾರೆ. ಸಿಡಿಸಿಯ ಇತರೆ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ.
ಶಾಸಕರ ತೀರ್ಮಾನವನ್ನು ಜಾರಿ ಮಾಡುವುದಷ್ಟೇ ಇವರ ಕೆಲಸ. ಶಾಸಕರಿಗೆ ಕಾಲೇಜಿನ ಆಡಳಿತ ನೀಡುವುದೇ ಕಾನೂನುಬಾಹಿರ. ಕಾಲೇಜನ್ನು ತಟ್ಟೆಯಲ್ಲಿಟ್ಟು ಶಾಸಕರಿಗೆ ನೀಡಲಾಗಿದೆ. ಶಾಸಕರ ಮೇಲೆ ಕಾಲೇಜಿಗೆ ಯಾವುದೇ ಅಧಿಕಾರವಿರುವುದಿಲ್ಲ. ಸಮಿತಿಯ ಮೂಲಕ ಅಧಿಕಾರವನ್ನು ಸಮಿತಿ ಹೈಜಾಕ್ ಮಾಡಿದೆ ಎಂದು ವಾದಮಂಡನೆ ಮುಕ್ತಾಯಗೊಳಿಸಿದರು.

ಯೂಸುಫ್ ಮುಕ್ಕಲಾ ವಾದಮಂಡಿಸಿದ ಹದೀಸ್‌ನಲ್ಲೂ ಕೂಡಾ ತಲೆ ಮುಚ್ಚುವ ಬಗ್ಗೆ ಹೇಳಲಾಗಿದೆ. ಮುಖವನ್ನು ಬಟ್ಟೆಯಿಂದ ಮುಚ್ಚುವ ಅಗತ್ಯವಿಲ್ಲ. ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ ಎಂಬ ವಾದ ಸರಿಯಲ್ಲ. ಎರಡೂ ಕಡೆಯವರು ಹಲವಾರು ತೀರ್ಪುಗಳನ್ನು ಕೊಟ್ಟಿದ್ದಾರೆ. ನೀವು ನಿಮ್ಮ ವಾದಗಳ ಒಂದು ಸಣ್ಣ ಟಿಪ್ಪಣಿ ನೀಡಿ ಎಂದರು.
ಪಿಐಎಲ್ ಅರ್ಜಿದಾರ ಡಾ.ವಿನೋದ್ ಕುಲಕರ್ಣಿ ವಾದಮಂಡಿಸಿ, 1400 ವರ್ಷಗಳಿಂದ ಹಿಜಾಬ್ ಆಚರಣೆ ಮಾಡಲಾಗುತ್ತಿದೆ. ಹಿಜಾಬ್ ಧರಿಸುವುದನ್ನು ತಡೆಯಬಾರದು. ಅಂತಿಮ ತೀರ್ಪು ನೀಡುವವರೆಗೆ ಮಧ್ಯಂತರ ಆದೇಶವಾಗಿ ರಂಜಾಬ್ ಮತ್ತು ಶುಕ್ರವಾರದ ಜುಮ್ಮಾ ವೇಳೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದರು. ನ್ಯಾಯಪೀಠ ಲಿಖಿತ ಲಿಖಿತ ವಾದಾಂಶ ಸಲ್ಲಿಸಲು ಅರ್ಜಿದಾರರಿಗೆ ಸೂಚಿಸಿದೆ.
ಸಂಘಟನೆಗಳು ಕೈವಾಡ:
ಹೊಸ ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡನೆ ಆರಂಭಿಸಿ, 1973 ರಿಂದಲೂ ಹಿಜಾಬ್, ಬುರ್ಖಾ, ಗಡ್ಡಗಳ ಬಗ್ಗೆ ತೀರ್ಮಾನವಾಗಿದೆ. ಇನ್ನೆಷ್ಟು ವರ್ಷ ಕೋರ್ಟ್‌ಗಳು ಈ ವಿಚಾರ ತೀರ್ಮಾನಿಸಬೇಕು. ವಕೀಲರಿಗೆ ಸಮವಸ್ತ್ರವಾಗಿ ಧೋತಿ ಕುರ್ತಾ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಭಾರತದ ಸಂಸ್ಕೃತಿಯಂತೆ ಸಮವಸ್ತ್ರ ಕೋರಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ ಎಂದರು.
ವಿವಾದ ಏಕಾಏಕಿ ಭುಗಿಲೆದ್ದಿದ್ದಲ್ಲ, ಇದರ ಹಿಂದೆ ದೊಡ್ಡ ಸಂಘಟನೆಗಳ ಕೈವಾಡ ಇದೆ. ಅವುಗಳು ವಿವಾದ ದೊಡ್ಡದು ಮಾಡಲು, ಪ್ರತಿಭಟನೆಗಳನ್ನು ನಡೆಸಲು ಆರ್ಥಿಕ ನೆರವು ನೀಡುತ್ತಿವೆ. ಒಂದು ಸಂಘಟನೆ ನಿಷೇಧಿಸಿದರೆ ಹೊಸ ಹೆಸರಿನಲ್ಲಿ ಮತ್ತೊಂದು ಸಂಘಟನೆ ಹುಟ್ಟಿಕೊಂಡು ಸಮಾಜದಲ್ಲಿ ಕ್ಷೋಭೆಯನ್ನು ಉಂಟು ಮಾಡುತ್ತಿವೆ. ಇದಕ್ಕೆ ಅಂತ್ಯ ಹಾಡಬೇಕು ಎಂದು ಹೇಳಿದರು.
ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯನ್ನು ಉಲ್ಲೇಖಿಸಿದ ಅವರು, ಹಿಜಾಬ್ ವಿವಾದ ವಿಚಾರಣೆ ಬಾಕಿ ಇದ್ದಾಗಲೇ ಹತ್ಯೆ ನಡೆದಿದೆ. ಇದರ ಹಿಂದೆ ಸಿಎಫ್‌ಐ ಸಂಘಟನೆಯ ಕೈವಾಡ ಇದೆ. ಹಾಗಾಗಿ ನ್ಯಾಯಪೀಠ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದದಿಂದ ಸಂಘಟನೆಗಳ ಕೈವಾಡದ ಬಗ್ಗೆ ವರದಿಯನ್ನು ತರಿಸಿಕೊಳ್ಳಬೇಕು ಎಂದು ಕೋರಿದರು.












Click it and Unblock the Notifications