ಹಿಜಾಬ್ ವಿವಾದ: ಮಧ್ಯಂತರ ಆದೇಶದ ಸಮರ್ಪಕ ಪಾಲನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ: ಸಿಪಿಐ(ಎಂ)
ಬೆಂಗಳೂರು, ಫೆಬ್ರವರಿ 17: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್‌ನ ಆದೇಶದ ಪ್ರಕಾರ ಮುಂದಿನ ಆದೇಶ ಬರುವವರೆಗೆ ತರಗತಿ ಕೋಣೆಗಳಲ್ಲಿ ಹಿಜಾಬ್ ಆಗಲಿ, ಕೇಸರಿ ಶಾಲು ಆಗಲಿ ಧರಿಸುವಂತಿಲ್ಲ. ಆದರೆ ರಾಜ್ಯ ಸರಕಾರ ಇದನ್ನು ಯಥಾರ್ಥವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಆರೋಪ ಮಾಡಿದೆ.
ಈ ಬಗ್ಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. "ರಾಜ್ಯದ ಶಾಲಾ - ಕಾಲೇಜುಗಳಲ್ಲಿ ಉಂಟಾದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ವಿಚಾರದಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ತ್ರಿ ಸದಸ್ಯ ಪೀಠವು ಮಧ್ಯಂತರ ಆದೇಶವನ್ನು ಹೊರಡಿಸಿ, "ತರಗತಿ ಕೋಣೆಗಳ ಒಳಗಡೆಯಲ್ಲಿ" ಯಾವುದೇ ವಿದ್ಯಾರ್ಥಿ ಕೇಸರಿ ಶಾಲು ಹಾಗೂ ತಲೆವಸ್ತ್ರ, ಹಿಜಾಬು ಮುಂತಾಗಿ ಧರಿಸುವುದನ್ನು ತಡೆದಿದೆ. ಸದರಿ ಆದೇಶದಂತೆ, ಮುಂದಿನ ಆದೇಶ ಬರುವವರೆಗೆ ತರಗತಿ ಕೋಣೆಗಳಲ್ಲಿ ಅವುಗಳನ್ನು ಧರಿಸಿ ಯಾರೂ ಪಾಲ್ಗೊಳ್ಳುವಂತಿಲ್ಲ. ಆದರೆ ರಾಜ್ಯ ಸರಕಾರ ಇದನ್ನು ಯಥಾರ್ಥವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ," ಎಂದು ಈ ಹೇಳಿಕೆಯಲ್ಲಿ ದೂರಲಾಗಿದೆ.
"ರಾಜ್ಯ ಸರಕಾರ ಹಿಜಾಬ್ ವಿಚಾರದಲ್ಲಿ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಯಥಾರ್ಥವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವುದರಿಂದ ಮುಸ್ಲಿಂ ಅಲ್ಪ ಸಂಖ್ಯಾತ ಜನ ಸಮುದಾಯದಲ್ಲಿ ಮತ್ತಷ್ಟು ಆತಂಕ ಉಂಟಾಗುವಂತಾಗಿದೆ. ಮಾತ್ರವಲ್ಲ, ವರ್ಷದ ಕೊನೆಯ ಹಂತದಲ್ಲಿ ಸಮವಸ್ತ್ರದ ಕುರಿತು ಆದೇಶವನ್ನು ಏಕಾಏಕಿ ಹೊರಡಿಸಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದೆ.

"ರಾಜ್ಯದ ಕೆಲವೆಡೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಮತ್ತು ಬುರ್ಕಾ ಧರಿಸಿ ಬಂದ ಮಹಿಳೆಯರನ್ನು ಶಾಲಾ - ಕಾಲೇಜು ಕಾಂಪೌಂಡ್ ಆಚೆ ನಿಲ್ಲಿಸಿ ತಡೆಯಲಾಗಿದೆ. ತರಗತಿಯಲ್ಲಿ ಧರಿಸಲು ಅವಕಾಶವಿಲ್ಲವೆಂಬುದರ ಬದಲು ಶಾಲಾ - ಕಾಲೇಜು ಆವರಣದೊಳಗೂ ಪ್ರವೇಶವಿಲ್ಲವೆಂಬಂತೆ ವರ್ತಿಸಿ ತಿರುಚಲಾಗಿರುವುದು ತೀವ್ರ ಖಂಡನೀಯವಾಗಿದೆ," ಎಂದು ಸಿಪಿಐ ಎಂ ಹೇಳಿದೆ
"ರಾಜ್ಯ ಸರಕಾರ ಹಾಗೂ ಜಿಲ್ಲಾ ಆಡಳಿತಗಳು, ನ್ಯಾಯಾಲಯದ ಮಧ್ಯಂತರ ಆದೇಶವನ್ನು ಆತಂಕಕ್ಕೊಳಗಾದ ಎಲ್ಲ ನಾಗರೀಕ ಸಮುದಾಯಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಶಾಲಾ-ಕಾಲೇಜು ಆಡಳಿತ ಮಂಡಳಿಗಳಿಗೂ ಸೂಕ್ತ ನಿರ್ದೇಶನ ನೀಡಿ ಶಾಂತಿ ಹಾಗೂ ಸೌಹಾರ್ಧಯುತವಾಗಿ ಜಾರಿಗೊಳಿಸಿ ಶಾಲಾ- ಕಾಲೇಜುಗಳಲ್ಲಿ ಸೌಹಾರ್ಧ ವಾತಾವರಣವನ್ನು ಉಂಟು ಮಾಡಬೇಕಿತ್ತು. ಅದಾಗದೇ ಹೋದುದರಿಂದ ಶಾಲಾ-ಕಾಲೇಜುಗಳ ಆವರಣದೊಳಗೆ ಹಿಜಾಬ್ ಹಾಗೂ ಬುರ್ಖಾ ಧರಿಸಿದವರನ್ನು ನಿರ್ಬಂಧಿಸಿ ತಡೆಯುವ ಅತಿರೇಕದ ವರ್ತನೆಗಳು ಕಂಡು ಬಂದಿವೆ," ಎಂದಿದೆ.
ರಾಜ್ಯದ ಶಾಂತಿ ಸೌಹಾರ್ಧತೆಗೆ ಮತ್ತಷ್ಠು ಧಕ್ಕೆ
"ಕೆಲವು ಮಾದ್ಯಮದ ವರದಿಗಾರರು ಹಿಜಾಬ್ ಧರಿಸಿ ಶಾಲಾ ಆವರಣ ಪ್ರವೇಶಿಸಿದ ಪುಟ್ಟ ಬಾಲಕಿಯನ್ನು ಬೆನ್ನಟ್ಟಿ ಹೋಗುವ ಖಂಡನೀಯ ವಿಚಾರವನ್ನು ಇಲ್ಲಿ ಗಮನಿಸಬೇಕಾಗಿದೆ. ಇದು ಆ ಪುಟ್ಟ ಮನಸ್ಸಿನ ಮೇಲೆ ಎಂತಹ ಗಾಯವನ್ನುಂಟು ಮಾಡಿರಬಹುದು?," ಎಂದು ಪ್ರಶ್ನೆ ಮಾಡಿರುವ ಸಿಪಿಐಎಂ "ಇವೆಲ್ಲವುಗಳು, ರಾಜ್ಯದ ಶಾಂತಿ ಸೌಹಾರ್ದತೆಗೆ ಮತ್ತಷ್ಠು ಧಕ್ಕೆ ಉಂಟು ಮಾಡಿವೆ. ರಾಜ್ಯ ಸರಕಾರದ ವಿವೇಚನಾ ರಹಿತ ಅವಸರದ ನಡೆಗಳು ಮತ್ತು ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ ಕೋಮುವಾದಿ ಯೋಜನೆಗಳು ಇದಕ್ಕೆ ಕಾರಣಗಳಾಗಿದೆ. ಇಂತಹ ತಪ್ಪು ನಡೆಗಳಿಗೆ ರಾಜ್ಯ ಸರಕಾರವೇ ನೇರ ಹೊಣೆಗಾರನಾಗಿದೆ," ಎಂದು ಆರೋಪಿಸಿದೆ.

"ಶೈಕ್ಷಣಿಕ ವಲಯದೊಳಗೆ ಪೋಲೀಸ್ ಮಧ್ಯಪ್ರವೇಶವು ಸೇರಿದಂತೆ ಈ ಎಲ್ಲಾ ದುಸ್ಥಿತಿಯು, ಎಲ್ಲಾ ಪೋಷಕರನ್ನು ತೀವ್ರ ಆತಂಕಕ್ಕೀಡು ಮಾಡಿದೆ. ಅದು, ಮುಖ್ಯವಾಗಿ, ಬಾಲಕಿಯರ ವಿದ್ಯಾಭ್ಯಾಸವನ್ನು ಮೊಟಕು ಮಾಡುವಂತೆ ಮಾಡಿದೆ. ತಕ್ಷಣವೇ, ಈ ಎಲ್ಲಾ ಘಟನೆಗಳಿಂದ ವಿದ್ಯಭ್ಯಾಸದ ತೊಂದರೆಗೊಳಗಾದ ಎಲ್ಲಾ ವಿದ್ಯಾರ್ಥಿಗಳು ಭರವಸೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗುವಂತೆ ಮತ್ತು ರಾಜ್ಯದ ಜನ ಸಮುದಾಯಗಳಲ್ಲಿ ಮುಖ್ಯವಾಗಿ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಉಂಟಾದ ಆತಂಕ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಮತ್ತು ರಾಜ್ಯದಾದ್ಯಂತ ತ್ವರಿತವಾಗಿ ಶಾಂತಿ ಸೌಹಾರ್ದತೆಗೆ ಕ್ರಮವಹಿಸ ಬೇಕು," ಎಂದು ಸಿಪಿಐ(ಎಂ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಆಗ್ರಹಿಸಿದೆ.
"ಕೆಲವೆಡೆ ಶಾಲಾ ಆವರಣಕ್ಕೆ ಹಿಜಾಬ್ ಧರಿಸಿ ಬರುವ ಬಾಲಕಿಯರನ್ನು ತಡೆದಿರುವ ಕ್ರಮ ಹೈಕೋರ್ಟ್ ಮಧ್ಯಂತರ ಆದೇಶದ ತೀವ್ರ ಉಲ್ಲಂಘನೆಯಾಗಿದೆ. ಅಂತಹ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಮತ್ತು ರಾಜ್ಯ ಸರ್ಕಾರದ ಸಂಬಂಧಿತ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬೇಕು," ಎಂದು ಸಿಪಿಐ(ಎಂ) ಹೈಕೋರ್ಟ್‌ನ ಪೀಠಕ್ಕೆ ಮನವಿ ಮಾಡಿದೆ.
ಶಾಂತಿ ಸೌಹಾರ್ಧತೆಗೆ ಕ್ರಮವಹಿಸಲು ನಾಗರೀಕರಲ್ಲಿ ಸಿಪಿಐಎಂ ಮನವಿ
"ಕಾರ್ಪೊರೇಟ್ ಕಂಪನಿಗಳ ಲೂಟಿಗೆ ರಾಜ್ಯವನ್ನು ತೆರೆಯುವ ಮತ್ತು ಅದಕ್ಕಾಗಿ ಜನತೆಯನ್ನು ವಿಭಜಿಸಿ ಆಳುವ ದುರುದ್ದೇಶದಿಂದ ರಾಜ್ಯದಲ್ಲಿ ಶಾಂತಿ ಹಾಗೂ ಸೌಹಾರ್ಧತೆಯನ್ನು ಕದಡುವ ಕೋಮುವಾದಿ ಶಕ್ತಿಗಳ ಸಂಚನ್ನು ಸೋಲಿಸಲು, ಶಾಂತಿ ಹಾಗೂ ಸೌಹಾರ್ದತೆಯನ್ನು ಬಲಪಡಿಸಬೇಕೆಂದು, ರಾಜ್ಯದ ಶಾಂತಿ ಪ್ರಿಯ ನಾಗರಿಕರಲ್ಲಿ," ಸಿಪಿಐ(ಎಂ) ಮನವಿ ಮಾಡಿದೆ. ಅದೇ ರೀತಿ, ಸೌಹಾರ್ಧತೆಯನ್ನು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ, ಪಕ್ಷದ ಸದಸ್ಯರು, ಹಿತೈಷಿಗಳು ಮತ್ತು ಘಟಕಗಳಿಗೆ, ಸಿಪಿಐಎಂ ರಾಜ್ಯ ಸಮಿತಿ ಕರೆ ನೀಡಿದೆ.
ಜಬೀನಾ ಮಕಂದಾರ್‌ಗೆ ಅಭಿನಂದನೆ
ಬಾಗಲಕೋಟೆ ನಗರದ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿ ಜಬೀನ್ ಮಕಾಂದಾರ್ ಬಾಲಕಿಯು ಒಬ್ಬಳೇ ಸಮವಸ್ತ್ರ ಧರಿಸಿ, ಶಾಲೆಗೆ ಹಾಜರಾಗಿ ಪಾಠ ಕೇಳಲು ಮುಂದಾದ ಶಿಕ್ಷಣದ ಹಂಬಲ ಮತ್ತು ಧೈರ್ಯದ ಕ್ರಮವನ್ನು ಸಿಪಿಐ(ಎಂ) ಶ್ಲಾಘಿಸುತ್ತದೆ. ಅದೇ ರೀತಿ, ಶಾಲೆಗೆ ತೆರಳುವಂತೆ ಪ್ರೋತ್ಸಾಹಿಸಿದ ತಂದೆ- ತಾಯಿ ಹಾಗೂ ಪೋಷಕರನ್ನು ಮತ್ತು ಉರ್ದು ಶಾಲೆಯ ಆಡಳಿತ ಮಂಡಳಿಗೆ ಸಿಪಿಐಎಂ ಅಭಿನಂದನೆ ಸಲ್ಲಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications