ಸೆಕ್ಯೂರಿಟಿ ಅಲರ್ಟ್: ಬೆಂಗಳೂರಿನ ವಿಧಾನಸೌಧದಲ್ಲಿ ಭಾರೀ ಕಟ್ಟೆಚ್ಚರ
ಬೆಂಗಳೂರು, ಡಿಸೆಂಬರ್ 15: ಕಲಾಪ ನಡೆಯುವ ವೇಳೆ ಇಬ್ಬರು ವ್ಯಕ್ತಿಗಳು ಸಂಸತ್ ಕಟ್ಟಡದೊಳಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲೂ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಲೋಕಸಭೆಯಲ್ಲಿ ಬುಧವಾರ ಭಾರೀ ಭದ್ರತಾ ಲೋಪದ ನಂತರ, ಬೆಂಗಳೂರು ನಗರ ಪೊಲೀಸರು ಮುಂಜಾಗ್ರತೆ ವಹಿಸಿದ್ದು, ಬೆಂಗಳೂರಿನ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಸ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಜಾರಿ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ, ವಿಧಾನಸೌಧ ಭದ್ರತೆಯನ್ನು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶ್ರೇಣಿಯ ಅಧಿಕಾರಿಯೊಬ್ಬರು ನೋಡಿಕೊಳ್ಳುತ್ತಾರೆ ಮತ್ತು ಕಟ್ಟುನಿಟ್ಟಾದ ಪ್ರೋಟೋಕಾಲ್ ಜಾರಿಯಲ್ಲಿತ್ತದೆ. ಅಧಿವೇಶನದ ಸಮಯದಲ್ಲಿ ವಿಧಾನಸಭೆ ಸಭಾಂಗಣದಲ್ಲಿ ಭದ್ರತೆಯನ್ನು ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಯಲ್ಲದೆ ಮಾರ್ಷಲ್‌ಗಳು ಸಹ ಇರುತ್ತಾರೆ ಎಂದು ಅವರು ಹೇಳಿದರು.
ಅಧಿವೇಶನ ನಡೆಯುತ್ತಿರುವಾಗ ಯಾರನ್ನು ಒಳಗೆ ಬಿಡಲಾಗುತ್ತದೆ ಎಂಬುದಕ್ಕೆ ಕಟ್ಟುನಿಟ್ಟಾದ ಪ್ರೋಟೋಕಾಲ್ ಅನ್ನು ಅನುಸರಿಸಲಾಗುತ್ತದೆ. ಅಜಾಗರೂಕ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ನಾವು ಹಿಂದಿನ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ಪ್ರೋಟೋಕಾಲ್ ಅನ್ನು ಮರು ವಿನ್ಯಾಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಂಸತ್ತಿನ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧ ಮತ್ತು ವಿಕಾಸಸೌಧದ ಪ್ರವೇಶದ್ವಾರದಲ್ಲಿ ಕಟ್ಟುನಿಟ್ಟಿನ ಕಾವಲು ಇರಿಸಲಾಗಿದೆ. ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ತಂತ್ರಜ್ಞಾನ ಆಧಾರಿತ ಕ್ರಮ:
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರೊಂದಿಗಿನ ಕೆಲವು ಸಭೆಗಳ ನಂತರ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಬಳಸಿಕೊಂಡು ಭದ್ರತೆಯನ್ನು ಹೆಚ್ಚಿಸುವ ಯೋಜನೆಯಲ್ಲಿ ಪೊಲೀಸರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದನದಲ್ಲಿ ಪಾಲ್ಗೊಳ್ಳುವವರ ಸುಗಮ ಚಲನೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುವುದು. ಸಂದರ್ಶಕರಿಗೆ ಯಾವುದೇ ಅನಾನುಕೂಲತೆ ಇರಬಾರದು ಮತ್ತು ಅದೇ ಸಮಯದಲ್ಲಿ ಭದ್ರತೆಯಲ್ಲೂ ಸಹ ರಾಜಿ ಮಾಡಿಕೊಳ್ಳಬಾರದು ಎಂದು ಪೊಲೀಸ್ ಆಯುಕ್ತರು ಹೇಳಿದರು.
ವಿಧಾನಸೌಧದಲ್ಲಿ ಕೆಲವು ಕಡೆಗಳಲ್ಲಿ ಹೆಚ್ಚಿನ ಕ್ಯಾಮೆರಾಗಳು, ಸ್ಕ್ಯಾನರ್‌ಗಳು ಮತ್ತು ಪ್ರವೇಶ ನಿಯಂತ್ರಣ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಕೆಲವು ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಬದಲಾಯಿಸಬೇಕಾಗಬಹುದು. ಇಮೇಜ್ ಪ್ರೊಸೆಸಿಂಗ್ ಸಾಫ್ಟ್‌ವೇರ್ ಮತ್ತು ಇತ್ತೀಚಿನ ಹೈಟೆಕ್ ಕ್ಯಾಮೆರಾಗಳನ್ನು ಸ್ಥಾಪಿಸುವ ಸಾಧ್ಯತೆಗಳಿದೆ ಎಂದು ಹೇಳಿದರು.
ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ಸಾಮಾನ್ಯವಾಗಿ 200ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದು, ಅಧಿವೇಶನದ ವೇಳೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಪೊಲೀಸ್ ಸಿಬ್ಬಂದಿಯನ್ನು ಹೊರತುಪಡಿಸಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಮತ್ತು ಆಂತರಿಕ ಭದ್ರತಾ ವಿಭಾಗದ (ISD) D-SWAT ತಂಡಗಳ ಸಿಬ್ಬಂದಿಗಳು ಆವರಣದಲ್ಲಿ ಇದ್ದಾರೆ. ಸದ್ಯಕ್ಕೆ ಸಿಬ್ಬಂದಿ ಕೊರತೆ ಇಲ್ಲ ಮತ್ತು ನಿಯಮಿತ ಸೆಕ್ಯುರಿಟೀಸ್ ಆಡಿಟ್ ಕೂಡ ನಡೆಯುತ್ತದೆ ಎಂದು ತಿಳಿಸಿದರು.
ಇತ್ತೀಚಿನ ಭದ್ರತಾ ಉಲ್ಲಂಘನೆ ಘಟನೆ:
ಜುಲೈ 10ರಲ್ಲಿ ಸರ್ಕಾರಿ ನೌಕರನ ಬ್ಯಾಗ್‌ನೊಳಗೆ ಚಾಕು ತರಹದ ಹಣ್ಣು ಕತ್ತರಿಸುವ ಯಂತ್ರ ಭದ್ರತಾ ಸಿಬ್ಬಂದಿಗೆ ಪತ್ತೆಯಾಗಿತ್ತು.
ಜುಲೈ 7ರಂದು 72 ವರ್ಷದ ತಿಪ್ಪೇರುದ್ರಪ್ಪ ಅವರು ಶಿಷ್ಟಾಚಾರ ಉಲ್ಲಂಘಿಸಿ, ಶಾಸಕರ ಕುರ್ಚಿಯ ಮೇಲೆ ಕುಳಿತು ಸ್ವಲ್ಪ ಸಮಯ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದರು.












Click it and Unblock the Notifications