ಚುನಾವಣಾ ಪ್ರಚಾರಕ್ಕೆ ಹೊಸರೂಪ, ಹೊಸ ಕಳೆ ತಂದು ಕೊಟ್ಟ ಮೋದಿ
ತಿಂಗಳಿಂದಲೂ ರಾಜ್ಯದಲ್ಲಿ ಚುನಾವಣಾ ಅಬ್ಬರ ಜೋರು ಪಡೆದಿದೆ. ರಾಜಕೀಯ ಭಾಷಣಗಳು ಒಬ್ಬರಮೇಲೊಬ್ಬರು ಕೆಸರೆರಚಾಟಗಳು, ವೈಯಕ್ತಿಕ ಮಾತಿನ ದಾಳಿಗಳು ಪ್ರಜ್ಞಾವಂತರಿಗೆ ಹೇಸಿಗೆ ತರುವಷ್ಟರ ಮಟ್ಟಿಗೆ ಹೆಚ್ಚಾಗಿವೆ.
'ಅವರಪ್ಪನಾಣೆ ಅವನು ಸಿಎಂ ಆಗಲ್ಲ' ಎಂದು ಒಬ್ಬರು, 'ಯಾವನ್ರೀ ಅವನು ಸಿಎಂ, ಯೋಗ್ಯತೆ ಇದ್ಯಾ ಅವ್ನಿಗೆ' ಎಂದು ಮತ್ತೊಬ್ಬರು, 'ಅವನೇನು ನಮ್ಮಪ್ಪನ್ನ ದತ್ತು ತಗೊಂಡವ್ನಾ' ಎಂದು ಮತ್ತೊಬ್ಬರು. ಮಹಾತ್ಮಾ ಗಾಂಧಿ ಅವರು ಹೇಳಿದ್ದ 'ರಾಜಕಾರಣದಿಂದ ಆಧ್ಯಾತ್ಮದೆಡೆಗೆ' ಮಾತನ್ನು ರಾಜಕಾರಣಿಗಳು ಎಂದೋ ಹಳ್ಳ ಹಿಡಿಸಿದ್ದಾರೆ.
ತಿಂಗಳಿಂದ ರೇಜಿಗೆ ಹುಟ್ಟಿಸಿದ್ದ ಚುನಾವಣಾ ಪ್ರಚಾರ ಭಾಷಣಗಳಿಗೆ, ಸ್ವಲ್ಪ ಹೊಸ ತನ ಸಿಕ್ಕಿದ್ದು ನಿನ್ನೆ ಉಡುಪಿಯಲ್ಲಿ ನರೇಂದ್ರ ಮೋದಿ ಭಾಷಣದಲ್ಲಿ. ಅದೇ ಸಾಕ್ಷ್ಯಗಳಿಲ್ಲದ ಆರೋಪಗಳು, ಅದೇ ಒಣ ಭರವಸೆಗಳು, ಕೇಳಿ ಬೇಸರವಾಗಿದ್ದವರಿಗೆ ಮೋದಿ ಅವರ ಭಾಷಣದಲ್ಲಿ ಸಣ್ಣ ಹೊಸತನ ಕಂಡದ್ದು ಸುಳ್ಳಲ್ಲ.
ಉಡುಪಿಯಲ್ಲಿ ಮೋದಿ ಭಾಷಣ ಸ್ವಲ್ಪವಾದರೂ ಹೊಸತನದಿಂದ ಕೂಡಿತ್ತು, ನಿನ್ನೆಯ ಅವರ ಭಾಷಣದಲ್ಲಿ ಇತಿಹಾಸ, ಸ್ಥಳೀಯತೆ, ಧಾರ್ಮಿಕತೆ, ರಾಜಕಾರಣ, ಸರ್ಕಾರದ ಸಾಧನೆಗಳು, ಗುರಿಗಳು, ವಿರೋಧ ಪಕ್ಷಗಳ ಬಗೆಗೆ ವ್ಯಂಗ್ಯ, ಕಟು ಟೀಕೆ, ಆರೋಪ ಎಲ್ಲವೂ ಇತ್ತು ಆದರೆ ಯಾವುದೂ ಅತಿ ಎನಿಸುವಷ್ಟು ಇರದೆ ಹಿತವಾಗಿ ಮಿತವಾಗಿ ಇತ್ತು.

ಸ್ಥಳೀಯರ ಮನ ಗೆಲ್ಲುವ ಮೋದಿ
ಮೊದಲಿಗೆ ಅವರು ಉಡುಪಿಯ ಬಗ್ಗೆ ಮಾತನಾಡಿದರು, ಸ್ಥಳೀಯ ವಿಶೇಷ, ಉಡುಪಿಯ ಧಾರ್ಮಿಕ ನಂಟು, ಅಲ್ಲಿನ ವಿಶೇಷತೆ, ಕರಾವಳಿ, ಕೃಷ್ಣ ಮಠ, ಶ್ರೀಗಳು, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಸ್ಥಳೀಯ ಮಹಾನುಭಾವರನ್ನು ನೆನೆದರು, ಉಡುಪಿಯ ಬುದ್ಧಿವಂತ ಮಕ್ಕಳನ್ನು ಹೊಗಳಿ ಸ್ಥಳಿಯರೊಂದಿಗೆ ಭಾವ ತಂತು ಜೋಡಿಸಿಕೊಂಡು ಬಿಟ್ಟರು.

ಮೋದಿ ಟೀಕೆಯ ಸ್ಟೈಲ್ ಹೇಗಿದೆ ನೋಡಿ
ಬಿಜೆಪಿಯ ಹಲವರು ರಾಹುಲ್ ಅವರ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಅವರ ಜಾತಿಯ ಬಗ್ಗೆಯೂ ಅವರ ಪ್ರಶ್ನೆಗಳು ಸಾಮಾನ್ಯವೇ ಆದರೆ ಮೋದಿ ಅವರು ನಿನ್ನೆಯ ಭಾಷಣದಲ್ಲಿ ಜಾಣತನದಿಂದ ರಾಹುಲ್ ರ ರಾಷ್ಟ್ರೀಯತೆಯ ಬಗ್ಗೆ ಟೀಕಿಸಿದರು. ಆ ಟೀಕೆಗೆ ದ್ವೇಷದ ಸೋಂಕಿರಲಿಲ್ಲ, ಆ ಟೀಕೆ ಕ್ರಿಯಾಶೀಲವಾಗಿತ್ತು. 'ರಾಹುಲ್ ಅವರು 15 ನಿಮಿಷ ಸತತವಾಗಿ ಇಂಗ್ಲಿಷ್, ಹಿಂದಿ ಅಥವಾ ತಮ್ಮ ಮಾತೃಭಾಷೆಯಲ್ಲಿ ಕರ್ನಾಟಕ ಸರ್ಕಾರದ ಸಾಧನೆಗಳ ಬಗ್ಗೆ ಮಾತಾಡಲಿ' ಎಂದರು. ಇಲ್ಲಿ ಗಮನಿಸಬೇಕಾದದ್ದು ಇಂಗ್ಲಿಷ್, ಹಿಂದಿ ಅಥವಾ ನಿಮ್ಮ ಮಾತೃ ಭಾಷೆ ಎಂಬ ವಾಕ್ಯ ಪ್ರಯೋಗ. ರಾಹುಲ್ ಅವರ ತಾಯಿ ಸೋನಿಯಾ ಇಟಲಿ ಮೂಲದವರೆಂಬುದು ಎಲ್ಲರಿಗೂ ಗೊತ್ತು, ಅವರ ಮಾತೃಭಾಷೆಯ ಬಗ್ಗೆ ಉಲ್ಲೇಖ ತಂದು ರಾಹುಲ್ ಇಟಲಿಯವರು ಎಂಬುದನ್ನು ಸೂಕ್ಷ್ಮವಾಗಿ ಹೇಳಿದರು ಮೋದಿ.

ಬಡಾಯಿ ಕೊಚ್ಚಿಕೊಳ್ಳುವ ಬದಲಿಗೆ ಮೋದಿ ಮಾದರಿ
ಉಡುಪಿಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡಿದ ಮೋದಿ ಅವರು ಅದರ ನೆರಳಿನಲ್ಲೇ ತಮ್ಮ ಸರ್ಕಾರದ ಸಾಧನೆಗಳನ್ನು ಜಣತನದಿಂದ ಜನರ ಮುಂದಿಟ್ಟರು. 'ಉಡುಪಿಯ ಸಾಧಕರು ಬ್ಯಾಂಕಿಂಗ್ ಕ್ಷೇತ್ರವನ್ನು ಭಾರತಕ್ಕೆ ಪರಿಚಯಿಸಿದರು ನಾವದನ್ನು ಭಾರತೀಯರಿಗೆ ಪರಿಚಯಿಸಿದೆವು' ಎಂದರು ಮೋದಿ. 'ನಾವು ಅಷ್ಟು ಕೋಟಿ ಅಭಿವೃದ್ಧಿಗಾಗಿ ಖರ್ಚು ಮಾಡಿದೆವು' ಎಂದು ನೇರವಾಗಿ ಹೇಳಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾನೆ ಎನಿಸಿಕೊಳ್ಳುವುದಕ್ಕಿಂತಲೂ ಮೋದಿ ಅವರ ಈ ಮಾದರಿ ಚೆನ್ನಾಗಿದೆ ಅಲ್ಲವೇ?

ಪದಗಳಲ್ಲಿ ವಿಶಾಲ ಅರ್ಥ ಹಿಡಿದಿಡುವ ಪರಿ
ಮೋದಿ ಅವರ ನಿನ್ನೆಯ ಭಾಷಣದಲ್ಲಿ ಪ್ರಮುಖ ಅಂಸವೆಂದರೆ 'ನಾಮದಾರ್, ಕಾಮ್‌ದಾರ್' ಮಾತು. ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ, ಶ್ರೀಮಂತಿಕೆ, ಐಶಾರಾಮಿತ್ವಕ್ಕೆ ಮಾತ್ರವೇ ಬೆಲೆ ಕೊಡುತ್ತದೆ, ಆದರೆ ಬಿಜೆಪಿ ಬಡ ವರ್ಗದಿಂದ ಬಂದ ಪಕ್ಷ, ನಮ್ಮ ಸರ್ಕಾರ ಕೆಲಸ ಮಾಡುವ ಸರ್ಕಾರ ಎಂಬುದನ್ನು ಅವರು ನಾಮ್‌ದಾರ್, ಕಾಮ್‌ದಾರ್ ಪದಗಳ ಮೂಲಕ ಸೂಚ್ಯಗೊಳಿಸಿದರು. ನೀವು ನಾಮ್‌ದಾರ್ (ಹೆಸರುವಾಸಿಗಳು), ನಾವು ಕಾಮ್‌ದಾರ್ (ಶ್ರಮಿಕರು) ನಾವು ನಿಮ್ಮ ಮುಂದೆ ಕೂರಲು ಸಾಧ್ಯವೇ ಎಂದು ಕಾಂಗ್ರೆಸ್‌ಗೆ ಚುಚ್ಚಿದರು ಮೋದಿ.

ರಾಹುಲ್ ವ್ಯಂಗ್ಯ ಮಾಡುವುದು ಮೊದಿಗೆ ಪ್ರಿಯ
ರಾಹುಲ್ ಅವರನ್ನು ವ್ಯಂಗ್ಯ ಮಾಡುವುದು ಮೋದಿ ಅವರಿಗೆ ಬಲು ಪ್ರಿಯ ಎನಿಸುತ್ತದೆ. ಅವರು ಎಲ್ಲೇ ಸಾರ್ವಜನಿಕ ಭಾಷಣ ಮಾಡಿದರೂ ರಾಹುಲ್ ಅವರನ್ನು ವ್ಯಂಗ್ಯ ಮಾಡಿಯೇ ತೀರುತ್ತಾರೆ. 'ರಾಹುಲ್ ಅವರು ನನಗೆ ಸವಾಲು ಹಾಕಿದ್ದಾರೆ, ಅವರು 15 ನಿಮಿಷ ಮಾತನಾಡಿದಾರೆ ನಾನು ಅವರ ಮುಂದೆ ಕೂರಲಾರನಂತೆ' ಎಂದ ಮೋದಿ, 'ರಾಹುಲ್ ಅವರಿಗೆ 15 ನಿಮಿಷ ಮಾತನಾಡುವ ಬೌದ್ಧಿಕ ಸಾಮರ್ಥ್ಯ ಇದೆ ಎಂಬುದೇ ಆಶ್ಚರ್ಯಕರ' ಎಂದು ವ್ಯಂಗ್ಯದ ಚಟಾಕಿ ಹಾರಿಸಿದರು. ಇಂತಹಾ ಚಟಾಕಿ ಅವರ ಭಾಷಣದಲ್ಲಿ ನಿನ್ನೆ ಸಾಕಷ್ಟಿದ್ದವು.

ಮಾತಿನ ಮೂಲಕ ಸ್ಪಷ್ಟ ಸಂದೇಶ
ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮೋದಿ ಅವರು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರನ್ನು ಹೊಗಳಿದರು. ಇದು ಅಪ್ಪಟ ರಾಜಕಾರಣ ಹೇಳಿಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಗೆ ಬಹುಮತ ಬಾರದೆಂಬ ಅರಿವು ಮೋದಿ ಅವರಿಗಿದೆ ಹಾಗಾದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಹೋಗಲೇ ಬೇಕು. ಅದಕ್ಕೆ ನಿನ್ನೆಯ ಭಾಷಣದಲ್ಲಿ ವೇದಿಕೆ ತಯಾರು ಮಾಡಿದರು ಮೋದಿ. ಜೊತೆಗೆ ದೇವೇಗೌಡ ಅವರನ್ನು ಹೊಗಳಿ ಒಕ್ಕಲಿಕ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನವನ್ನೂ ಮೋದಿ ಮಾಡಿದರು.












Click it and Unblock the Notifications