ಚೀನಾ ಪ್ರಜೆಗಾಗಿ ಕಾನೂನು ಸಡಿಸಲಾಗದು: ಹೈಕೋರ್ಟ್
ಬೆಂಗಳೂರು, ಜುಲೈ 09: ಭಾರತದಲ್ಲಿ ಆರೋಪ ಎದುರಿಸುತ್ತಿರುವ ಚೀನಾ ಪ್ರಜೆಯನ್ನು ವಿದೇಶಕ್ಕೆ ರವಾನಿಸಲು ಕಾನೂನುಗಳನ್ನು ಸಡಿಲಗೊಳಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ, ಚೀನಾ ದೇಶದಲ್ಲಿರುವ ವಿದೇಶಿ ಅಪರಾಧಿಗಳ ಕುರಿತ ವಿಚಾರಣೆ ಪೂರ್ಣಗೊಳ್ಳುವವರೆಗೂ ದೇಶದ ಗಡಿ ದಾಟುವುದಕ್ಕೆ ಅವಕಾಶ ನೀಡದಿರುವುದರಿಂದ, ನಾವು ಏಕೆ ನೀಡಬೇಕು? ಎಂದು ಖಾರವಾಗಿ ಪ್ರಶ್ನಿಸಿದೆ. ಜತೆಗೆ, ಪವರ್ ಬ್ಯಾಂಕ್ ಹಗರಣದ ಆರೋಪಿಯಾಗಿರುವ ಚೀನಾದ ಪ್ರಜೆಯೊಬ್ಬರನ್ನು ಸ್ವದೇಶಕ್ಕೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ವಯಸ್ಸಾದ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರನ್ನು ನೋಡಲು ಚೀನಾಕ್ಕೆ ಪ್ರಯಾಣಿಸಲು ಅನುಮತಿ ಕೋರಿ ಚೀನಾ ಪ್ರಜೆಯಾಗಿರುವ ಬೆಂಗಳೂರಿನ ಎಚ್. ಯು. ಕ್ಸಿಯೋಲಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ಏನು ಹೇಳಿದೆ?: ಚೀನಾ ದೇಶದ ಕ್ರಿಮಿನಲ್ ಕೋಡ್ ಪ್ರಕಾರ ಆ ದೇಶದಲ್ಲಿರುವ ವಿದೇಶಿ ಪ್ರಜೆ ಯಾವುದೇ ಪ್ರಕರಣದಲ್ಲಿ ಆರೋಪಿಯಾದರೆ ಆ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ದೇಶದಿಂದ ಹೊರ ಬರುವುದಕ್ಕೆ ಅವಕಾಶವಿಲ್ಲ. ಹೀಗಿರುವಾಗ ಹಲವು ರೀತಿಯ ಅಪರಾಧಗಳನ್ನು ಎದುರಿಸುತ್ತಿರುವ ಚೀನಾದ ಪ್ರಜೆಯನ್ನು ವಿದೇಶಕ್ಕೆ ರವಾನಿಸುವುದಕ್ಕೆ ಭಾರತದ ಕಾನೂನುಗಳನ್ನು ಸಡಿಲಗೊಳಿಸಲಾಗದು ಎಂದು ಪೀಠ ತಿಳಿಸಿದೆ.
ಅಲ್ಲದೆ, ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅರ್ಜಿದಾರರನ್ನು ದೇಶದಿಂದ ಹೊರ ಹೋಗಲು ಅನುಮತಿ ನೀಡಿದಲ್ಲಿ ಅವರ ವಿರುದ್ಧ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಅಡ್ಡಿಯಾಗಲಿದೆ. ಜತೆಗೆ, ಅವರನ್ನು ನ್ಯಾಯಾಲಯದ ವಿಚಾರಣೆ ಎದುರಿಸದೆ ಪಲಾಯನ ಮಾಡುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಕೇಂದ್ರ ಸರ್ಕಾರದ ಪರ ವಕೀಲರು, ಅರ್ಜಿದಾರರು ಮತ್ತು ಆಕೆ ಪತಿಯ ವಿರುದ್ಧ ಪವರ್ ಬ್ಯಾಂಕ್ ಹಗರಣ ಆರೋಪದಲ್ಲಿ 7 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಷರತ್ತುಗಳನ್ನು ಸಡಿಲಗೊಳಿಸಿದರೆ ಅರ್ಜಿದಾರರು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗಲಿದೆ. ಜತೆಗೆ, ಅವರು ದೇಶಕ್ಕೆ ಹಿಂದಿರುಗುವುದಕ್ಕೆ ಮತ್ತೆ ವಾಪಸ್ ಕರೆತರುವುದು ಕಷ್ಟವಾಗಲಿದೆ. ಹಾಗಾಗಿ ಮನವಿಯನ್ನು ತಿರಸ್ಕರಿಸಬೇಕೆಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿಯಾಗಿರುವ ಎಚ್. ಯು. ಕ್ಸಿಯೋಲಿನ್ ಅವರು 2017ರಲ್ಲಿ ಭಾರತಕ್ಕೆ ಬಂದಿದ್ದು, ಭಾರತೀಯ ಪ್ರಜೆ ಅನಾಸ್ ಅಹ್ಮದ್ ಅವರನ್ನು ವಿವಾಹವಾಗಿದ್ದರು. ಅವರ ಪತಿಯ ವಿರುದ್ಧ ಮೆಸ್ ರೋಜರ್‌ಪೇ ಸಾಫ್ಟವೇರ್ ಲಿಮಿಟೆಡ್‌ನಿಂದ ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದರು. ಬಳಿಕ ಅರ್ಜಿದಾರರಿಗೆ ವಿಚಾರಣಾ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಷರತ್ತುಗಳಲ್ಲಿ ಅನುಮತಿ ಇಲ್ಲದೆ ನ್ಯಾಯಾಲಯದ ವಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂಬುದು ಸೇರಿತ್ತು.
ಆದರೆ, ಅರ್ಜಿದಾರರ ತಂದೆ ಸುಮಾರು 80 ವರ್ಷದ ವೃದ್ಧರು ಅನಾರೋಗ್ಯಕ್ಕೆ ತುತ್ತಾಗಿದ್ದು, ಚೀನಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದೇಶಕ್ಕೆ ಪ್ರವಾಸ ಮಾಡಬೇಕಾಗಿದ್ದು, ಷರತ್ತುಗಳನ್ನು ಸಡಿಲಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ರದ್ದುಪಡಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications