KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್ ರಿಲೀಫ್: ಅಮಾನತು ಆದೇಶ ರದ್ದು, ಮುಂದುವರಿದ ಇಡಿ ದಾಳಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ಭಾರಿ ರಿಲೀಫ್ ಸಿಕ್ಕಿದೆ. ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶವನ್ನ ಮಂಗಳವಾರ (ಆಗಸ್ಟ್‌ 18) ನ್ಯಾಯಾಲಯ ರದ್ದುಪಡಿಸಿದೆ. ಆದರೆ, ಮತ್ತೊಂದೆಡೆ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 26 ಗಂಟೆಗಳಿಂದ ದಾಳಿ ನಡೆಸಿ, ಶೋಧ ಕಾರ್ಯಾಚರಣೆಯನ್ನ ಮುಂದುವರಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ತೀರ್ಪು, ಮರುನೇಮಕಕ್ಕೆ ಸೂಚನೆ

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನ ಹುದ್ದೆಯಿಂದ ಅಮಾನತುಗೊಳಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಕಳೆದ ಜುಲೈ 10ರಂದು ಅಧಿಸೂಚನೆ ಹೊರಡಿಸಿದ್ದರು. ಈ ಆದೇಶದ ಸಾಂವಿಧಾನಿಕ ಮಾನ್ಯತೆಯನ್ನ ಪ್ರಶ್ನಿಸಿ ಸಾಹುಕಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು, ರಾಜ್ಯಪಾಲರ ಅಮಾನತು ಆದೇಶವನ್ನ ವಜಾಗೊಳಿಸಿ ತೀರ್ಪು ನೀಡಿದೆ.

High Court

ಅಲ್ಲದೆ, ಮುಂದಿನ ಏಳು ದಿನಗಳ ಒಳಗಾಗಿ ಶಿವಶಂಕರಪ್ಪ ಸಾಹುಕಾರ್ ಅವರನ್ನ ಮರಳಿ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.

ಸುದ್ದಿಯ ಹಿನ್ನೆಲೆ

ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಇತ್ತೀಚೆಗೆ ಸಾಲು ಸಾಲು ಗಂಭೀರ ಆರೋಪಗಳು ಕೇಳಿಬಂದಿದ್ದವು. ವಿಶೇಷವಾಗಿ ಕೆಪಿಎಸ್‌ಸಿ ಅಧ್ಯಕ್ಷರಾಗಿ ತಮ್ಮ ಉನ್ನತ ಅಧಿಕಾರವನ್ನ ದುರುಪಯೋಗಪಡಿಸಿಕೊಂಡು ಸ್ವಜನಪಕ್ಷಪಾತ ಎಸಗಿದ್ದಾರೆ ಎಂಬ ದೂರುಗಳು ದಾಖಲಾಗಿದ್ದವು. ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸುವ ನಿಟ್ಟಿನಲ್ಲಿ ಅವರು ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಮೇಲೆ, ಭಾರತೀಯ ಸಂವಿಧಾನದ 317ನೇ ವಿಧಿಯ ಅಡಿಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲು ಶಿಫಾರಸು ಮಾಡಲಾಗಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರನ್ನು ಹುದ್ದೆಯಿಂದ ಅಮಾನತು ಮಾಡಿದ್ದರು.

ಪುತ್ರಿಯ ಕುಟುಂಬದ ವಾರ್ಷಿಕ ಆದಾಯ ಕೇವಲ 40 ಸಾವಿರ ರೂಪಾಯಿ ಎಂದು ನಮೂದಿಸಿ, ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿ ಮೀಸಲಾತಿಯ ಲಾಭ ಪಡೆಯಲು ಯತ್ನಿಸಿದ ಆರೋಪ ಅವರ ಮೇಲಿತ್ತು. ಈ ಸಂಬಂಧ ಸಾಹುಕಾರ್ ಅವರ ಪುತ್ರಿಯ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಈ ಕ್ರಿಮಿನಲ್ ಪ್ರಕರಣವನ್ನ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಹೈಕೋರ್ಟ್ ಕಳೆದ ಜುಲೈ ತಿಂಗಳಿನಲ್ಲಿಯೇ ವಜಾಗೊಳಿಸಿತ್ತು ಹಾಗೂ ಸುಳ್ಳು ಆದಾಯ ಘೋಷಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಮಾನತು ಪ್ರಕ್ರಿಯೆಯಲ್ಲಿ ರಾಜ್ಯ ಸಚಿವ ಸಂಪುಟದ ಸಲಹೆ ಮತ್ತು ಶಿಫಾರಸನ್ನ ಪಡೆಯಲಾಗಿದೆಯೇ ಎಂಬ ಮಹತ್ವದ ಸಾಂವಿಧಾನಿಕ ಪ್ರಶ್ನೆಯನ್ನ ಅರ್ಜಿದಾರರು ನ್ಯಾಯಾಲಯದ ಮುಂದಿಟ್ಟಿದ್ದರು.

ನ್ಯಾಯಾಲಯದ ಕಟ್ಟುನಿಟ್ಟಿನ ಷರತ್ತು

ಅಮಾನತು ಆದೇಶ ರದ್ದಾಗಿದ್ದರೂ ಕೂಡ ಹೈಕೋರ್ಟ್ ಆದೇಶವು ಸಾಹುಕಾರ್ ಅವರಿಗೆ ಸಂಪೂರ್ಣ ಕ್ಲೀನ್ ಚಿಟ್ ನೀಡಿಲ್ಲ ಎಂಬುದನ್ನು ಸ್ಪಷ್ಟವಾಗಿ ಗಮನಿಸಬೇಕು. ಹುದ್ದೆಗೆ ಮರಳಿದ ಬಳಿಕ, ತಮ್ಮ ಪುತ್ರಿಯ ನೇಮಕಾತಿಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಬಾರದು, ಯಾವುದೇ ನಿರ್ಧಾರ ಕೈಗೊಳ್ಳಬಾರದು ಅಥವಾ ಅಧಿಕಾರಿಗಳ ಮೇಲೆ ಹಸ್ತಕ್ಷೇಪ ಮಾಡಬಾರದು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಷರತ್ತು ವಿಧಿಸಿದೆ.

ಪ್ರಸ್ತುತ ಬಂದಿರುವ ಈ ತೀರ್ಪು ಕೇವಲ ರಾಜ್ಯಪಾಲರ ಅಮಾನತು ಆದೇಶದ ಸಾಂವಿಧಾನಿಕ ಸಿಂಧುತ್ವಕ್ಕೆ ಮಾತ್ರ ಸೀಮಿತವಾಗಿದೆ. ಸಾಹುಕಾರ್ ಮೇಲಿನ ಆರೋಪಗಳ ಕುರಿತು ಸಂಬಂಧಪಟ್ಟ ಪ್ರಾಧಿಕಾರವು ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮುಕ್ತ ಅವಕಾಶವಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಸತತ 26 ಗಂಟೆಗಳಿಂದ ಮುಂದುವರಿದ ಇಡಿ ಶೋಧ ಕಾರ್ಯಾಚರಣೆ

ಒಂದೆಡೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕ ಖುಷಿಯಲ್ಲಿರುವ ಸಾಹುಕಾರ್ ಅವರಿಗೆ, ಮತ್ತೊಂದೆಡೆ ಜಾರಿ ನಿರ್ದೇಶನಾಲಯ (ಇಡಿ) ಭಾರಿ ಶಾಕ್ ನೀಡಿದೆ. ಶಿವಶಂಕರಪ್ಪ ಸಾಹುಕಾರ್ ಅವರ ಮನೆಯಲ್ಲಿ ಇಡಿ ಅಧಿಕಾರಿಗಳ ಬೃಹತ್ ಶೋಧ ಕಾರ್ಯಚರಣೆ ಬಿರುಸಿನಿಂದ ಸಾಗಿದೆ.

ಸತತ 26 ಗಂಟೆಗಳಿಂದ ಈ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಲೇ ಇದ್ದು, ತಡರಾತ್ರಿಯವರೆಗೂ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಹಣಕಾಸು ವ್ಯವಹಾರಗಳು, ನೇಮಕಾತಿ ಅಕ್ರಮಗಳು ಹಾಗೂ ಆದಾಯ ಮೀರಿ ಆಸ್ತಿ ಗಳಿಕೆ ಆರೋಪಗಳ ಬಗ್ಗೆ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+