2ನೇ ಎಫ್‌ಐಆರ್; ನಟ ಉಪೇಂದ್ರಗೆ ಬಿಗ್ ರಿಲೀಫ್ ನೀಡಿದ ಕೋರ್ಟ್
ಬೆಂಗಳೂರು, ಆಗಸ್ಟ್ 17: ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಕನ್ನಡದ ನಟ, ನಿರ್ದೇಶಕ ಉಪೇಂದ್ರ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕರ್ನಾಟಕ ಹೈಕೋರ್ಟ್ ಅವರಿಗೆ ಬಿಗ್ ರಿಲೀಫ್ ನೀಡಿದೆ. ಅವರ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಎರಡನೇ ಎಫ್ಐಆರ್ ರದ್ದು ಕೋರಿ ನಟ, ನಿರ್ದೇಶಕ ಉಪೇಂದ್ರ ಅಲಿಯಾಸ್ ಬಿ. ಎಂ. ಉಪೇಂದ್ರ ಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 2ನೇ ಎಫ್‌ಐಆರ್‌ಗೂ ಸಹ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ.

ಕೋರ್ಟ್ ಆದೇಶದಿಂದಾಗಿ ಬೆಂಗಳೂರು ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಎಫ್‌ಐಆರ್‌ಗಳಲ್ಲೂ ನಟ ಉಪೇಂದ್ರಗೆ ಮಧ್ಯಂತರ ತಡೆ ಸಿಕ್ಕಿದೆ.
ಕೋರ್ಟ್ ಹೇಳಿದ್ದೇನು?; ಗುರುವಾರ ನಟ ಉಪೇಂದ್ರ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಒಂದೇ ಆರೋಪದ ಮೇಲೆ ಎರಡು ಎಫ್‌ಐಆರ್ ಏಕೆ ದಾಖಲು ಮಾಡಲಾಗಿದೆ? ಎಂದು ಪ್ರಶ್ನೆ ಮಾಡಿತು. 2ನೇ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿ ಆದೇಶಿಸಿತು.
ಹೈಕೋರ್ಟ್ ಮೊರೆ ಹೋಗಿದ್ದ ಉಪೇಂದ್ರ ಫೇಸ್‌ಬುಕ್ ಲೈವ್‌ನಲ್ಲಿ ಪರಿಶಿಷ್ಟ ಜಾತಿಯ ಒಂದು ಪಂಗಡವನ್ನು ಕೆಟ್ಟವರು ಎಂಬುದಾಗಿ ಬಿಂಬಿಸುವ ರೀತಿಯಲ್ಲಿ ಗಾದೆಯೊಂದನ್ನು ಬಳಕೆ ಮಾಡಿದ್ದ ಆರೋಪದಲ್ಲಿ ದಾಖಲಾಗಿರುವ ಎರಡನೇ ಎಫ್ಐಆರ್ ರದ್ದು ಕೋರಿದ್ದರು.
ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾದ ನಂತರ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಮೊದಲನೇ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ತಡೆ ಆದೇಶವನ್ನು 2ನೇ ಪ್ರಕರಣದಲ್ಲೂ ನೀಡಬೇಕು ಮನವಿ ಮಾಡಿದ್ದರು.
ಉಪೇಂದ್ರ ತಮ್ಮ ಅರ್ಜಿಯಲ್ಲಿ ಆಕಸ್ಮಿಕವಾಗಿ ಗಾದೆ ಬಳಕೆ ಮಾಡಿದ್ದಾರೆ. ಗಾದೆ ಬಳಕೆ ಮಾಡುವುದು ಪರಿಶಿಷ್ಟ ಜಾತಿ, ಪಂಗಡಗಳ ಕಾಯಿದೆಯಡಿ ಅಪರಾಧವಲ್ಲ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು.
ಉಪೇಂದ್ರ ಅವರು ಫೇಸ್‌ಬುಕ್ ಲೈವ್ ಬಂದ ಬಳಿಕ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈಗ ಮಧ್ಯಂತರ ತಡೆಯಾಜ್ಞೆ ಸಿಕ್ಕಿದ್ದು, ಮುಂದಿನ ಆದೇಶದ ತನಕ ತನಿಖೆಗೆ ತಡೆ ಬೀಳಲಿದೆ.
ಕರ್ನಾಟಕ ಹೈಕೋರ್ಟ್ ಉಪೇಂದ್ರ ವಿರುದ್ಧ ಮೊದಲ ಎಫ್ಐಆರ್‌ಗೆ ತಡೆ ನೀಡಿದಾಗ 2ನೇ ಎಫ್‌ಐಆರ್ ಆಧರಿಸಿ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನೆ ಮಾಡಿದ್ದರು. ಗೃಹ ಸಚಿವ ಡಾ. ಜಿ. ಪರಮೇಶ್ವರ ನಿವಾಸಕ್ಕೆ ಮುತ್ತಿಗೆ ಹಾಕಲು ಸಹ ಪ್ರಯತ್ನ ನಡೆಸಿದ್ದರು.
ನಟ ಉಪೇಂದ್ರ ಪರವಾಗಿ ವಾದ ಮಂಡನೆ ಮಾಡಿದ ಹಿರಿಯ ವಕೀಲ ಉದಯ್ ಹೊಳ್ಳ, "ಒಂದೇ ಹೇಳಿಕೆ ಮೇಲೆ ಎರಡು ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ಘಟನೆ ಸಂಬಂಧ ಎಲ್ಲಾ ಎಫ್ಐಆರ್‌ಗಳಿಗೂ ತಡೆ ನೀಡಬೇಕು" ಎಂದು ಮನವಿ ಮಾಡಿದರು.
ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿತು. ನಟ ಉಪೇಂದ್ರ ವಿರುದ್ಧ ಬೆಂಗಳೂರಿನಲ್ಲಿ ಮೂರು, ಕೋಲಾರದಲ್ಲಿ ಒಂದು ಮತ್ತು ಮದ್ದೂರಿನಲ್ಲಿಯೂ ದೂರು ದಾಖಲಾಗಿದೆ.












Click it and Unblock the Notifications