ಅಕ್ರಮ ಹಣ ವರ್ಗಾವಣೆ: ಮಧುಕರ್ ಅಂಗೂರ್‌ಗೆ ಜಾಮೀನು
ಬೆಂಗಳೂರು, ಮೇ 03; ನೂರಾರು ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಮಾಡಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಜಿ. ಅಂಗೂರ್‌ಗೆ ಜಾಮೀನು ಸಿಕ್ಕಿದೆ.
4 ತಿಂಗಳಿಂದ ಇಡಿ ವಶದಲ್ಲಿದ್ದ ಮಧುಕರ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಡಾ. ಮಧುಕರ ಜಿ. ಅಂಗೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯಪೀಠ ಷರತ್ತುಬದ್ಧ ಜಾಮೀನು ನೀಡಿದೆ.
ಅರ್ಜಿದಾರರು 10 ಲಕ್ಷ ರೂ. ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ನೀಡಬೇಕು. ಪ್ರತಿ ತಿಂಗಳ ಮೂರನೇ ಭಾನುವಾರದಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಇಡಿ ಮುಂದೆ ಹಾಜರಾಗಿ ಸಹಿ ಹಾಕಬೇಕು. ವಿಶೇಷ ಕೋರ್ಟ್ ವಿಚಾರಣೆಗೆ ತಪ್ಪದೆ ಹಾಜರಾಗಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು, ಪೂರ್ವಾನುಮತಿ ಇಲ್ಲದೆ ಬೆಂಗಳೂರು ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ ಎಂದು ಷರತ್ತು ವಿಧಿಸಿದೆ. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ನ್ಯಾಯಾಲಯ ದಾಖಲೆಯಲ್ಲಿರುವ ಸಾಕ್ಷ್ಯಗಳ ಪರಿಶೀಲನೆ ನಡೆಸಿದೆ. ಜೊತೆಗೆ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಕರಣದ ಅಗತ್ಯ ದಾಖಲೆ ಮುಟ್ಟುಗೋಲು ಹಾಕಿಕೊಂಡಿದೆ ಮತ್ತು ಅರ್ಜಿದಾರರ ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹಾಗಾಗಿ, ಅರ್ಜಿದಾರರು ಬಿಡುಗಡೆಯಾದರೆ ಅಕ್ರಮ ಹಣ ವರ್ಗಾವಣೆ ಮುಂದುವರಿಕೆಗೆ ಕಾರಣವಾಗಬಹುದೆಂಬ ತನಿಖಾಖಾಧಿರಿಗಳ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?: ಅಲಯನ್ಸ್ ವಿಶ್ವವಿದ್ಯಾಲಯ ಸಂಬಂಧ ಯಾವುದೇ ಆರ್ಥಿಕ ವಹಿವಾಟು ನಡೆಸಬಾರದು ಎಂದು ಮಧುಕರ ಅಂಗೂರ್‌ಗೆ ಬೆಂಗಳೂರು ಸಿವಿಲ್ ನ್ಯಾಯಾಲಯ ನಿರ್ದೇಶಿಸಿತ್ತು. ಆದರೂ ಅವರು ಮೆಸರ್ಸ್ ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ಮೆಸರ್ಸ್ ಶ್ರೀವಾರಿ ಶೈಕ್ಷಣಿಕ ಸೇವೆಗಳು ಹೆಸರಿನ ಸಂಸ್ಥೆಯ ಅಡಿಯಲ್ಲಿ 2016ದ 2017ರ ನಡುವೆ ಪ್ರತ್ಯೇಕ ಖಾತೆ ತೆರೆದು ಒಟ್ಟು 106 ಕೋಟಿ ಮೊತ್ತ ತಮ್ಮ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪ ಮಧುಕರ್ ಅಂಗೂರ್ ಮೇಲಿದೆ. ಈ ಸಂಬಂಧ ಆನೇಕಲ್, ಜೆ. ಪಿ. ನಗರ, ಮಡಿವಾಳ ಮತ್ತು ಶಂಕರಪುರ ಪೊಲೀಸ್ ಠಾಣೆಗಳಲ್ಲಿ 4 ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು, ತನಿಖೆಯೂ ಪ್ರಗತಿಯಲ್ಲಿತ್ತು.
ಈ ಮಧ್ಯೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಮಧುಕರ್ ಅಂಗೂರ್‌ರನ್ನು 2022ರ ಜನವರಿಯಲ್ಲಿ ಬಂಧಿಸಿತ್ತು. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಹಾಗಾಗಿ ಅವರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications