ರಾಘವೇಶ್ವರ ಶ್ರೀಗಳ ಜಾಮೀನು ರದ್ದು ಕೋರಿದ್ದ ಸಿಐಡಿ ಅರ್ಜಿ ವಜಾ
ಬೆಂಗಳೂರು, ಜೂ. 17 : ಶ್ಯಾಮ ಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಬೇಕೆಂದು ಕೋರಿ ಸಿಐಡಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಶ್ಯಾಮ ಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆಗೆ ರಾಘವೇಶ್ವರ ಶ್ರೀಗಳು ಪ್ರಚೋದನೆ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ಸ್ವಾಮೀಜಿಗಳ ವಿಚಾರಣೆ ನಡೆಸಲು ಜಾಮೀನು ರದ್ದುಗೊಳಿಸಬೇಕು ಎಂದು ಸಿಐಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. [ಸಿಐಡಿ ತನಿಖೆ ರದ್ದು ಕೋರಿ ಸುಪ್ರೀಂಗೆ ರಾಘವೇಶ್ವರ ಶ್ರೀ ಅರ್ಜಿ]
ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠ, ನ್ಯಾಯಾಲಯ ಜಾಮೀನು ನೀಡುವಾಗ ವಿಧಿಸಿರುವ ಯಾವ ಷರತ್ತುಗಳನ್ನೂ ಶ್ರೀಗಳು ಉಲ್ಲಂಘಿಸಿಲ್ಲ. ಆದ್ದರಿಂದ ಜಾಮೀನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ. [ಆರೋಪಗಳನ್ನು ಎದುರಿಸಲು ಸಿದ್ಧ : ರಾಘವೇಶ್ವರ ಶ್ರೀ]
ರಾಘವೇಶ್ವರ ಶ್ರೀಗಳಿಗೆ ಬ್ಲಾಕ್ ಮೇಲ್ ಮಾಡಿರುವ ಪ್ರಕರಣದ ಆರೋಪಿಯಾಗಿರುವ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ ಪ್ರಸಾದ್ ಶಾಸ್ತ್ರಿಗಳು ಪೂತ್ತೂರಿನ ಕೆದಿಲ ನಿವಾಸಿಯಾಗಿದ್ದರು. 2014ರ ಆಗಸ್ಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಪ್ರಕರಣದ ವಿವರ ಇಲ್ಲಿದೆ....

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು
ರಾಘವೇಶ್ವರ ಶ್ರೀಗಳಿಗೆ ಬ್ಲಾಕ್ ಮೇಲ್ ಮಾಡಿರುವ ಪ್ರಕರಣದ ಆರೋಪಿಯಾಗಿರುವ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ ಪ್ರಸಾದ್ ಶಾಸ್ತ್ರಿಗಳು ಪೂತ್ತೂರಿನ ಕೆದಿಲ ನಿವಾಸಿಯಾಗಿದ್ದರು. 2014ರ ಆಗಸ್ಟ್ 31ರಂದು ಮನೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ರಾಘವೇಶ್ವರ ಶ್ರೀಗಳ ಪ್ರಚೋದನೆ ಆರೋಪ
ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳ ಬೆಂಬಲಿಗರಿಂದ ಶ್ಯಾಮ್ ಪ್ರಸಾದ್ ಶಾಸ್ತ್ರಿ ಅವರಿಗೆ ಸಹ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಆರೋಪಿಸಲಾಗಿತ್ತು. ಶ್ರೀಗಳ ಭಕ್ತರು ನಿಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅನಾಮಿಕರು ಕರೆ ಮಾಡಿದ್ದರು. ಇದರಿಂದಾಗಿ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿತ್ತು
ಶ್ಯಾಮ ಪ್ರಸಾದ್ ಶಾಸ್ತ್ರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಜೀವ ಬೆದರಿಕೆ, ಆತ್ಮಹತ್ಯೆಗೆ ಪ್ರಚೋದನೆ ಸಂಬಂಧಿಸಿದ ಐಪಿಸಿ ಕಲಂ 506, 306 ಮತ್ತು 67(ಎ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿತ್ತು. ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ಆರಂಭಿಸಿದ ಸಿಐಡಿ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು.

ಶ್ರೀಗಳಿಗೆ ಜಾಮೀನು ಲಭಿಸಿತ್ತು
ರಾಘವೇಶ್ವರ ಶ್ರೀಗಳಿಗೆ ಶ್ಯಾಮ ಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ರಾಘವೇಶ್ವರ ಶ್ರೀಗಳು ತಮ್ಮ ಪಾಸ್‌ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ತನಿಖೆಗೆ ಹಾಜರಾಗಬೇಕು ಎನ್ನುವ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ 1 ಲಕ್ಷ ರೂ. ಮೌಲ್ಯದ ಬಾಂಡ್ ಪಡೆದು ಜಾಮೀನು ನೀಡಿತ್ತು.

ಜಾಮೀನು ರದ್ದು ಕೋರಿ ಸಿಐಡಿ ಅರ್ಜಿ
ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ಅವರಿಗೆ ಮಂಜೂರು ಮಾಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಸಿಐಡಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.












Click it and Unblock the Notifications